ಮಹದಾಯಿ ಜಾರಿಗೆ ಆಗ್ರಹಿಸಿ ಬೃಹತ್‌ ಪಾದಯಾತ್ರೆ

| Published : Jan 30 2024, 02:03 AM IST

ಸಾರಾಂಶ

ಇಲ್ಲಿಯ ಮೂರುಸಾವಿರ ಮಠದಿಂದ ತಹಸೀಲ್ದಾರ್‌ ಕಚೇರಿ ವರೆಗೆ ಪಾದಯಾತ್ರೆ ನಡೆಸಲಾಯಿತು. ರೈತರು ತಹಸೀಲ್ದಾರ್‌ ಕಚೇರಿ ಎದುರು ಟ್ರ್ಯಾಕ್ಟರ್‌ ನಿಲ್ಲಿಸಿ ಕೆಲಹೊತ್ತು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಹುಬ್ಬಳ್ಳಿ: ಮಹದಾಯಿ, ಕಳಸಾ-ಬಂಡೂರಿ ಜಾರಿಗೆ ಶೀಘ್ರವೇ ಕೇಂದ್ರದ ವಿವಿಧ ಇಲಾಖೆಯ ಪರವಾನಗಿ ನೀಡಬೇಕೆಂದು ಒತ್ತಾಯಿಸಿ ರೈತ ಸೇನಾ ಕರ್ನಾಟಕದ ನೇತೃತ್ವದಲ್ಲಿ ನಗರದಲ್ಲಿ ಬೃಹತ್‌ ಪ್ರತಿಭಟನೆ ನಡೆಯಿತು.

ಇಲ್ಲಿಯ ಮೂರುಸಾವಿರ ಮಠದಿಂದ ತಹಸೀಲ್ದಾರ್‌ ಕಚೇರಿ ವರೆಗೆ ಪಾದಯಾತ್ರೆ ನಡೆಸಲಾಯಿತು. ರೈತರು ತಹಸೀಲ್ದಾರ್‌ ಕಚೇರಿ ಎದುರು ಟ್ರ್ಯಾಕ್ಟರ್‌ ನಿಲ್ಲಿಸಿ ಕೆಲಹೊತ್ತು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ತಹಸೀಲ್ದಾರ್‌ ಮೂಲಕ ಕೇಂದ್ರ ಪರಿಸರ, ಅರಣ್ಯ ಹಾಗೂ ಹವಾಮಾನ ಇಲಾಖೆ ಸಚಿವ ಭೂಪೇಂದ್ರ ಯಾದವ್‌ ಅವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆಯ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ, ಮಹದಾಯಿ, ಕಳಸಾ-ಬಂಡೂರಿ ಯೋಜನೆ ಜಾರಿಗೆ ಆಗ್ರಹಿಸಿ ಹತ್ತಾರು ಬಗೆಯಲ್ಲಿ ತೀವ್ರ ಹೋರಾಟ ನಡೆಸಲಾಗಿದೆ. ಈ ಹೋರಾಟದಲ್ಲಿ 12 ಜನ ರೈತರು ಪ್ರಾಣ ತ್ಯಾಗ ಮಾಡಿದ್ದರೆ, ಲಾಠಿ ಏಟು ಅನುಭವಿಸಿದ ರೈತರು ಮತ್ತು ರೈತ ಮಹಿಳೆಯರು ಇನ್ನು ನೋವಿನಿಂದ ಬಳಲುತ್ತಿದ್ದಾರೆ. ಇದಲ್ಲದೇ, ಸರ್ವಪಕ್ಷಗಳ ನಿಯೋಗದೊಂದಿಗೆ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿ ಮನವರಿಕೆ ಸಹ ಮಾಡಿಕೊಡಲಾಗಿದೆ. ಹೀಗಿದ್ದರೂ ಯೋಜನೆ ಜಾರಿಗೆ ಸಾಕಷ್ಟು ತೊಂದರೆ ಉಂಟಾಗುತ್ತಿದೆ ಎಂದು ಕಿಡಿಕಾರಿದರು.

4 ಜಿಲ್ಲೆ 11 ತಾಲೂಕುಗಳ ಕುಡಿಯುವ ನೀರಿನ ಯೋಜನೆ ಇದಾಗಿದ್ದರಿಂದ ನ್ಯಾಯಾಧೀಕರಣ ರಾಜ್ಯದ ಪಾಲಿನ 13.42 ಟಿಎಂಸಿ ಪೈಕಿ ಟಿಎಂಸಿ ವಿದ್ಯುಚ್ಛಕ್ತಿಗಾಗಿ ಮತ್ತು 5.42 ಟಿಎಂಸಿ ಕುಡಿಯುವ ನೀರಿಗಾಗಿ ಮತ್ತು ಗೋವಾಕ್ಕೆ 24 ಟಿಎಂಸಿ ಹಾಗೂ ಮಹಾರಾಷ್ಟ್ರಕ್ಕೆ 1.03 ಟಿಎಂಸಿ ನೀರು ಹಂಚಿಕೆ ಮಾಡಿ ತೀರ್ಪು ಪ್ರಕಟಿಸಿದೆ. ಈ ನೀರು ಬಳಕೆಗೆ ವನ್ಯಜೀವಿ ಸಂರಕ್ಷಣಾ ಇಲಾಖೆ ಪರವಾನಗಿ ಬೇಕಾಗಿದೆ. ಈಗಾಗಲೇ ಸಾಕಷ್ಟು ಬಾರಿ ಇಲಾಖೆಗೆ ಮನವರಿಕೆ ಮಾಡಿದ್ದರೂ ಮಾಡಲಾಗುತ್ತಿದೆ. ಅಲ್ಲದೇ, ಇದೇ ವಿಚಾರದಲ್ಲಿ ರಾಜಕೀಯ ಮಾಡುತ್ತಿರುವುದು ಸರಿಯಲ್ಲ. ಈ ಕೂಡಲೇ ಯೋಜನೆ ಜಾರಿಗೆ ಪರವಾನಗಿ ನೀಡಬೇಕು ಎಂದು ಆಗ್ರಹಿಸಿದರು.

ಆಟೋ, ಟ್ರ್ಯಾಕ್ಟರ್:ಮಹದಾಯಿ ಯೋಜನೆಗೆ ಜಾರಿಗೆ ಆಗ್ರಹಿಸಿ ನಡೆದ ಪಾದಯಾತ್ರೆಗೆ ಆಟೋ ಚಾಲಕರ, ಮಾಲೀಕರ ಸಂಘ ಸೇರಿದಂತೆ ವಿವಿಧ ಸಂಘಟನೆಗಳು ಬೆಂಬಲ ಸೂಚಿಸಿದ್ದವು. ತಮ್ಮ ಆಟೋಗಳೊಂದಿಗೆ ಮೆರವಣಿಗೆಯಲ್ಲಿ ಆಟೋ ಚಾಲಕರು ಪಾಲ್ಗೊಂಡಿದ್ದರು.

ಶಿರಕೋಳ ಮಠದ ಸ್ವಾಮೀಜಿ, ಹನ್ನೆರಡುಮಠದ ಚಂದ್ರಶೇಖರ ಸ್ವಾಮೀಜಿ, ಸುಳ್ಳದ ಪಂಚಾಕ್ಷರಿ ಶಿವಾಚಾರ್ಯ ಸ್ವಾಮೀಜಿ, ಬ್ಯಾಹಟ್ಟಿ ಮತ್ತು ನವನಗರ ಮಠದ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರು ಪ್ರತಿಭಟನೆಗೆ ಸಾಥ್‌ ನೀಡಿದರು.

ಪ್ರತಿಭಟನೆಯಲ್ಲಿ ಗುರುನಗೌಡ ರಾಯನಗೌಡರ, ಮಲ್ಲಣ್ಣ, ಶೇಖಯ್ಯ ಮಠಪತಿ, ಸುರೇಶ ಅಂಗಡಿ, ಹನುಮಂತಪ್ಪ ಪವಾಡಿ, ನಾಗರಾಜ ಸವತೆಕಾಯಿ, ಮಂಜುನಾಥ ಲೂತಿಮಠ ಸೇರಿದಂತೆ ಇತರರು ಇದ್ದರು.