ಇಂದಿನ ದಿನಗಳಲ್ಲಿ ವೈದಿಕ ಸಂಪ್ರದಾಯಕ್ಕಿಂತ ವೈಚಾರಿಕ ಚಿಂತನೆ ಮೌಲ್ಯಯುತವಾದುದು. ಜಾತಿಗಿಂತ ನೀತಿ, ಮನುಷ್ಯತ್ವ ದೊಡ್ಡದು. ಮೌಢ್ಯಗಳಿಗೆ ಕಟ್ಟು ಬೀಳದೇ ಆದರ್ಶ ಜೀವನ ನಡೆಸಬೇಕು
ಕುಷ್ಟಗಿ: ಅನಗತ್ಯ ಆರ್ಥಿಕ ಅಪವ್ಯಯ ತಡೆದು ಸಾಮಾಜಿಕ ಜೀವನಕ್ಕೆ ಸಹಕಾರ ನೀಡುವ ಸಾಮೂಹಿಕ ವಿವಾಹ ಆಯೋಜನೆ ಇತರರಿಗೆ ಮಾದರಿಯಾಗಿವೆ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಹೇಳಿದರು.
ತಾಲೂಕಿನ ಕೊರಡಕೇರಾ ಗ್ರಾಮದಲ್ಲಿ ಅಮೋಘ ಶಿದ್ದೇಶ್ವರ ಜಾತ್ರಾಮಹೋತ್ಸವದ ಅಂಗವಾಗಿ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಇಂದಿನ ದಿನಗಳಲ್ಲಿ ವೈದಿಕ ಸಂಪ್ರದಾಯಕ್ಕಿಂತ ವೈಚಾರಿಕ ಚಿಂತನೆ ಮೌಲ್ಯಯುತವಾದುದು. ಜಾತಿಗಿಂತ ನೀತಿ, ಮನುಷ್ಯತ್ವ ದೊಡ್ಡದು. ಮೌಢ್ಯಗಳಿಗೆ ಕಟ್ಟು ಬೀಳದೇ ಆದರ್ಶ ಜೀವನ ನಡೆಸಬೇಕು ಎಂದರು.
ಮದುವೆ ಪ್ರತಿಯೊಬ್ಬರ ಜೀವನದ ಮಹತ್ತರ ಘಟ್ಟ.ಇದಕ್ಕಾಗಿ ಅನಗತ್ಯ ಹಣ ವ್ಯರ್ಥ ಮಾಡುವ ಅಗತ್ಯವಿಲ್ಲ. ಸಾಮೂಹಿಕ ವಿವಾಹದಲ್ಲಿ ಸಂಸಾರ ಜೀವನಕ್ಕೆ ಪಾದಾರ್ಪಣೆ ಆದರ್ಶ. ಇದು ಕುಟುಂಬಕ್ಕೆ ಮಾತ್ರವಲ್ಲದೇ ದೇಶದ ಅಭಿವೃದ್ದಿಗೂ ಸಹಕಾರಿಯಾಗುತ್ತದೆ. ಮಿತ ಸಂತಾನ, ಮಕ್ಕಳ ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡಿ ಎಂದರು.ನಾನು ಶಾಸಕ ದೊಡ್ಡನಗೌಡ ಪಾಟೀಲ ಚುನಾವಣೆಯ ಪ್ರಚಾರಕ್ಕಾಗಿ ಬಂದವನು ಈಗ ಇಲ್ಲಿಗೆ ಬಂದಿದ್ದು ದೊಡ್ಡನಗೌಡರು ಗೆದ್ದರು ನಾನು ಸೋತೆ ಎಂದ ಅವರು ಇಲ್ಲಿ ನಡೆಯುವ ಅಮೋಘ ಸಿದ್ದೇಶ್ವರ ಜಾತ್ರಾಮಹೋತ್ಸವ ಹಾಗೂ ಸಾಮೂಹಿಕ ವಿವಾಹ ಮಹೋತ್ಸವ ಮುಂದುವರಿಯಲಿ ಎಂದರು.
ತುಂಗಭದ್ರಾ ಕಾಡಾ ನಿಗಮ ಅಧ್ಯಕ್ಷ ಹಸನಸಾಬ್ ದೋಟಿಹಾಳ ಮಾತನಾಡಿ, ಸಾಮೂಹಿಕ ವಿವಾಹಗಳ ಮೂಲಕ ಸಮಾಜದಲ್ಲಿ ಏಕತೆ ಹಾಗೂ ಸಹೋದರತ್ವ ವೃದ್ಧಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.ಸಾಮೂಹಿಕ ವಿವಾಹಗಳಿಂದ ಆರ್ಥಿಕ ಹೊರೆ ತಗ್ಗಿ,ಪ್ರಗತಿಗೆ ಪೂರಕವಾಗುತ್ತದೆ ಎಂದ ಅವರು ಸಾಮೂಹಿಕ ವಿವಾಹ ಎಂದರೆ ಅದು ಕೇವಲ ಬಡ ಜನರ ಮದುವೆ ಕಾರ್ಯಕ್ರಮ ಎಂದು ಭಾವಿಸುವುದು ತಪ್ಪು.ಪವಿತ್ರವಾದ ಧಾರ್ಮಿಕ ಕ್ಷೇತ್ರ, ಸಹಸ್ರಾರು ಭಕ್ತರ ಮತ್ತು ಮಠಾಧೀಶರ ಆಶೀರ್ವಾದದೊಂದಿಗೆ ಸಾಮೂಹಿಕ ವಿವಾಹ ಬಂಧನಕ್ಕೊಳಗಾಗುವ ಭಾಗ್ಯ ಜೀವನದ ಸಾರ್ಥಕತೆಯ ಕ್ಷಣವಾಗಿದೆ ಎಂದರು.
ಸಾಮೂಹಿಕ ವಿವಾಹದಂತಹ ಕಾರ್ಯಕ್ರಮಗಳಿಂದ ಬಡವರಿಗೆ ಅನುಕೂಲವಾಗಲಿದೆ.ಇಂತಹ ಕಾರ್ಯಕ್ರಮಗಳು ಸಮಾಜಮುಖಿ ಕಾರ್ಯಗಳಾಗಿವೆ. ದುಂದುವೆಚ್ಚ.ಆಡಂಬರಕ್ಕೆ ಕಡಿವಾಣ ಹಾಕಲು ಸಾಧ್ಯವಾಗುತ್ತದೆ ಎಂದರು.ಶಾಸಕ ದೊಡ್ಡನಗೌಡ ಪಾಟೀಲ ಮಾತನಾಡಿ, ದಾಂಪತ್ಯಕ್ಕೆ ಕಾಲಿಟ್ಟ ವಧು-ವರರು ಪರಸ್ಪರ ಒಬ್ಬರೊನ್ನೋಬ್ಬರು ಅರಿತು ಸಹಬಾಳ್ವೆ ನಡೆಸಿದಾಗಲೇ ದಾಂಪತ್ಯ ಜೀವನಕ್ಕೆ ಉತ್ತಮ ಅರ್ಥ ಸಿಗುತ್ತದೆ ಎಂದರು
ಸಾಮೂಹಿಕ ವಿವಾಹಗಳು ಸಮಾಜದಲ್ಲಿ ಸರಳತೆ, ಸಮಾನತೆ ಹಾಗೂ ಸಾಮಾಜಿಕ ಬಾಂಧವ್ಯ ಬಲಪಡಿಸುವ ಮಹತ್ವದ ಕಾರ್ಯಕ್ರಮಗಳಾಗಿವೆ ಎಂದ ಅವರು ಇಂತಹ ಕಾರ್ಯಕ್ರಮಗಳಿಂದ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ಆರ್ಥಿಕ ಭಾರ ಕಡಿಮೆಯಾಗುತ್ತದೆ ಎಂದರು.ಜಾತ್ರಾ ಮಹೋತ್ಸವಗಳು ಗ್ರಾಮೀಣ ಸಂಸ್ಕೃತಿ ಹಾಗೂ ಪರಂಪರೆ ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಜನರ ಸಹಕಾರದಿಂದ ಜಾತ್ರೆ ಯಶಸ್ವಿಯಾಗಿ ನಡೆಯುತ್ತಿರುವುದು ಸಂತಸದ ವಿಷಯ ಎಂದು ತಿಳಿಸಿದರು. ಈ ಹಿಂದೆಯೂ ಮಾಜಿ ಸಚಿವ ಶ್ರೀರಾಮುಲು ಸಹಸ್ರಾರು ಸಾಮೂಹಿಕ ವಿವಾಹ ಮಾಡುವ ಮೂಲಕ ಬಾಳಿಗೆ ಬೆಳಕು ಆಗಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಹಾಲುಮತ ಸಮಾಜದ ಶ್ರೀಗಳು ಹಾಗೂ ಗುರುಗಳು, ಸಿದ್ದಯ್ಯ ಸ್ವಾಮಿಗಳು, ಶಿವಸಿದ್ದೇಶ್ವರ ಮಹಾಸ್ವಾಮಿಗಳು, ಸಿದ್ದರಾಮಯ್ಯತಾತ, ತೇಜಯ್ಯ ಗುರುವಿನ್, ಸಿದ್ದಯ್ಯ ಗುರುವಿನ, ಕಳಕಯ್ಯ ಗುರುವಿನ, ಶಿವಾನಂದಯ್ಯ ಗುರುವಿನ, ಮಾದಯ್ಯಸ್ವಾಮಿ ಗುರುವಿನ, ಚಿದಾನಂದಯ್ಯ ಸ್ವಾಮಿ ಗುರುವಿನ, ನಂಜಯ್ಯ ಗುರುವಿನ, ಕೆ.ವಿರೂಪಾಕ್ಷಪ್ಪ ಸಿಂಗನಾಳ, ಪ್ರಭಾಕರ ಚಿಣಿ, ಫಕೀರಪ್ಪ ವಕೀಲರು, ಉಮೇಶ್ ಮಂಗಳೂರು, ಪರಶುರಾಮ್ ನಾಗರಾಳ ಸೇರಿದಂತೆ ಅನೇಕರು ಇದ್ದರು.