ಹೊಸಪೇಟೆ: ದುಂದುವೆಚ್ಚದ ಮದುವೆಗಳಿಗೆ ಕಡಿವಾಣ ಹಾಕುವ ಸರಳ ಹಾಗೂ ಸಾಮೂಹಿಕ ವಿವಾಹಗಳು ಆದರ್ಶ ಸಮಾಜಕ್ಕೆ ಬುನಾದಿಯಾಗಲಿವೆ. ಇದರಿಂದ ವೈವಾಹಿಕ ಜೀವನವೂ ಆದರ್ಶಮಯವಾಗಲಿದೆ. ಇಂತಹ ಮದುವೆಗಳು ಹೆಚ್ಚಾಗಬೇಕು ಎಂದು ಶಾಸಕ ಎಚ್.ಆರ್.ಗವಿಯಪ್ಪ ಹೇಳಿದರು.

ನಗರದ ಆರ್‌ಟಿಒ ಕಚೇರಿ ಸಮೀಪದ ಆಂಜನೇಯ ದೇವಸ್ಥಾನದಲ್ಲಿ ಕರ್ನಾಟಕ ನಾಗರಿಕ ಹಿತಾ ರಕ್ಷಣಾ ಸೇವಾ ಟ್ರಸ್ಟ್ ರಜತ ಮಹೋತ್ಸವದ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ ಉಚಿತ ಸಾಮೂಹಿಕ ರಜತ ಮಹೋತ್ಸವದಲ್ಲಿ ನವ ವಧು​ ವರರನ್ನು ಆಶೀರ್ವದಿಸಿ ಅವರು ಮಾತನಾಡಿದರು.

ನವ ದಂಪತಿಗಳು ಅನ್ಯೋನ್ಯವಾಗಿ ಬಾಳುವ ಮೂಲಕ ಈ ಕಾರ್ಯಕ್ರಮದ ಉದ್ದೇಶವನ್ನು ಸಾರ್ಥಕಪಡಿಸಬೇಕು. ತಮ್ಮ ಮಗ, ಮಗಳು ಸಂತೋಷದಿಂದ ವೈವಾಹಿಕ ಜೀವನ ನಡೆಸಬೇಕು ಎಂಬುದು ಎಲ್ಲ ಪೋಷಕರ ಕನಸಾಗಿರುತ್ತದೆ. ಅದನ್ನು ಈಡೇರಿಸುವ ಜವಾಬ್ದಾರಿ ನಿಮ್ಮದು ಎಂದು ತಿಳಿಸಿದರು.

ಹೊಸಪೇಟೆಯ ಕೊಟ್ಟೂರುಸ್ವಾಮಿ ಮಠದ ಬಸವಲಿಂಗ ಸ್ವಾಮೀಜಿ, ಪೂರ್ಣಾನಂದ ಮಾತಂಗ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಟ್ರಸ್ಟ್ ರಾಜ್ಯ ಅಧ್ಯಕ್ಷ ಕಾಸಿಟ್ಟಿ ಉಮಾಪತಿ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಅಧ್ಯಕ್ಷ ಎನ್.ರೂಪೇಶಕುಮಾರ್, ಹುಡಾ ಅಧ್ಯಕ್ಷ ಎಚ್.ಎನ್.ಎಫ್. ಇಮಾಮ್ ನಿಯಾಜಿ, ನಗರಸಭೆ ಆಯುಕ್ತ ಎರಗುಡಿ ಶಿವಕುಮಾರ್, ನಗರಸಭೆ ಉಪಾಧ್ಯಕ್ಷ ಜೀವರತ್ನಂ, ಸ್ಥಾಯಿ ಸಮಿತಿ ಅಧ್ಯಕ್ಷ ಸರವಣನ್, ಜಿಲ್ಲಾ ಗ್ಯಾರೆಂಟಿ ಸಮಿತಿ ಅಧ್ಯಕ್ಷ ಕುರಿ ಶಿವುಮೂರ್ತಿ, ನಗರಸಭೆ ಸದಸ್ಯ ತಾರಳ್ಳಿ ಜಂಬುನಾಥ, ಬಿಜೆಪಿ ಮಂಡಲ ಅಧ್ಯಕ್ಷ ಶಂಕರ್ ಮೇಟಿ, ಗುಜ್ಜಲ್ ಗಣೇಶ್. ಚಂದ್ರು ದೇವಲಾಪುರ. ಗುಜ್ಜಲ್ ಉಮೇಶ್, ಗೌಳಿ ರುದ್ರಪ್ಪ, ಉಮಾದೇವಿ, ಅನುರಾಧಾ, ಮರಿ ಕಣಿಮಪ್ಪ ಉಪಸ್ಥಿತರಿದ್ದರು


ಹೊಸಪೇಟೆ ನಗರದ ಆರ್‌ಟಿಒ ಕಚೇರಿ ಸಮೀಪದ ಆಂಜನೇಯ ದೇವಸ್ಥಾನದಲ್ಲಿ ಕರ್ನಾಟಕ ನಾಗರಿಕ ಹಿತಾ ರಕ್ಷಣಾ ಸೇವಾ ಟ್ರಸ್ಟ್ ರಜತ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಉಚಿತ ಸಾಮೂಹಿಕ ಮಹೋತ್ಸವದಲ್ಲಿ ಶಾಸಕ ಎಚ್‌. ಆರ್‌. ಗವಿಯಪ್ಪ ನವ ವಧು​-ವರರನ್ನು ಆಶೀರ್ವದಿಸಿದರು.