ಸಾರಾಂಶ
ಸಾಮೂಹಿಕ ವಿವಾಹಗಳು ಸಮಾಜವನ್ನು ಒಗ್ಗೂಡಿಸುವುದರ ಜತೆಗೆ ಆರ್ಥಿಕ ಹೊರೆ ತಗ್ಗಿಸಿ, ಪ್ರಗತಿಗೆ ಪೂರಕವಾಗುತ್ತದೆ ಎಂದು ಜೀಗೇರಿ ಗ್ರಾಮದ ಗುರುಸಿದ್ದೇಶ್ವರ ಸ್ವಾಮೀಜಿ ಹೇಳಿದರು.
ಗಜೇಂದ್ರಗಡ: ಸಾಮೂಹಿಕ ವಿವಾಹಗಳು ಸಮಾಜವನ್ನು ಒಗ್ಗೂಡಿಸುವುದರ ಜತೆಗೆ ಆರ್ಥಿಕ ಹೊರೆ ತಗ್ಗಿಸಿ, ಪ್ರಗತಿಗೆ ಪೂರಕವಾಗುತ್ತದೆ ಎಂದು ಜೀಗೇರಿ ಗ್ರಾಮದ ಗುರುಸಿದ್ದೇಶ್ವರ ಸ್ವಾಮೀಜಿ ಹೇಳಿದರು.ಸಮೀಪದ ಕುಂಟೋಜಿ ಗ್ರಾಮದ ಶರಣಬಸವೇಶ್ವರರ ೫೯ನೇ ವರ್ಷದ ಪುರಾಣ ಮಂಗಲೋತ್ಸವ, ಜಾತ್ರಾ ಮಹೋತ್ಸವ ನಿಮಿತ್ತ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಮದುವೆ ಪ್ರತಿಯೊಬ್ಬರ ಜೀವನದ ಮಹತ್ತರ ಘಟ್ಟವಾಗಿದೆ. ಆದರೆ ಮದುವೆಗಾಗಿ ಅನಗತ್ಯ ಹಣ ವ್ಯರ್ಥ ಮಾಡುವ ಅಗತ್ಯವಿಲ್ಲ. ಸಾಮೂಹಿಕ ವಿವಾಹದಲ್ಲಿ ಸಂಸಾರ ಜೀವನಕ್ಕೆ ಪದಾರ್ಪಣೆ ಆದರ್ಶವಾಗಿದ್ದು, ಕುಟುಂಬಕ್ಕೆ ಮಾತ್ರವಲ್ಲದೇ ದೇಶದ ಅಭಿವೃದ್ಧಿಗೂ ಸಹಕಾರಿಯಾಗುತ್ತದೆ. ಮಿತ ಸಂತಾನ, ಮಕ್ಕಳ ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡಿ ಎಂದರು.ಯಲಬುರ್ಗಾ ಶ್ರೀಧರಮುರಡಿ ಹಿರೇಮಠದ ಬಸವಲಿಂಗ ಸ್ವಾಮೀಜಿ ಮಾತನಾಡಿ, ಸಮಾಜದಲ್ಲಿ ಆರ್ಥಿಕ ಹೊರೆಯಿಂದ ಬಳಲುವವರ ಹಿತ ಕಾಯಲು ಹಾಗೂ ನೆಮ್ಮದಿ ಜೀವನ ನಡೆಸಲು ಸಾಮೂಹಿಕ ವಿವಾಹಗಳು ಹೆಚ್ಚಾಗಿ ನಡೆಯಬೇಕು. ಇತ್ತೀಚಿನ ದಿನಗಳಲ್ಲಿ ಸಾಮೂಹಿಕ ವಿವಾಹಗಳ ಸಂಖ್ಯೆ ಕ್ಷೀಣಿಸುತ್ತಿವೆ. ಹೀಗಾಗಿ ಬಡ ಹಾಗೂ ಕೂಲಿಕಾರರಿಗೆ ವಿವಾಹಗಳು ಭಾರವಾಗಿ ಪರಿಣಮಿಸುತ್ತಿವೆ. ಆದ್ದರಿಂದ ಸಮಾಜದಲ್ಲಿನ ಉಳ್ಳವರು ಸಾಮಾಜಿಕ ವಿವಾಹಗಳನ್ನು ಏರ್ಪಡಿಸುವ ಮೂಲಕ ಶ್ರೀಸಾಮಾನ್ಯರ ಕಲ್ಯಾಣಕ್ಕೆ ನೆರವಾಗಬೇಕು. ಅಂದಾಗ ಮಾತ್ರ ಸಮಾಜದಲ್ಲಿನ ಕೀಳರಿಮೆ ಕಣ್ಮರೆಯಾಗಲು ಸಾಧ್ಯ ಎಂದರು.
ಯಲಬುರ್ಗಾ ಸಿದ್ದರಾಮೆಶ್ವರ ಸ್ವಾಮೀಜಿ, ಶಾಸಕ ಜಿ.ಎಸ್. ಪಾಟೀಲ, ಚನ್ನಬಸಯ್ಯ ಕಾರಡಗಿ, ಅಶೋಕ ಹಡಪದ, ಹೇಮಣ್ಣ ಪೂಜಾರ, ವೀರಣ್ಣ ಕಾರಡಗಿ, ಬಾಲಪ್ಪ ಕರಡಿ, ಹನಮಂತ ಪೂಜಾರ, ಹೋಳಿಯಪ್ಪ ಜೂಲಗುಡ್ಡ, ಕಳಕಪ್ಪ ಬಡಗೇರ, ಪ್ರಭಯ್ಯ ಕಾರಡಗಿ, ರವಿ ಚೋಟಿ, ಮುದಕಪ್ಪ ಡೊಣ್ಣೆಗುಡ್ಡ ಸೇರಿದಂತೆ ಇತರರು ಇದ್ದರು.