ಸಾರಾಂಶ
ಶ್ರೀ ಕ್ಷೇತ್ರ ಧರ್ಮಸ್ಥಳದ ಭಕ್ತರಲ್ಲಿ ಕ್ಷೇತ್ರದ ಮೇಲೆ ಶ್ರದ್ಧೆ, ಭಕ್ತಿ ವೃದ್ಧಿಸುವಂತೆ ವಿಶ್ವಹಿಂದು ಪರಿಷತ್ ಪುತ್ತೂರು ಜಿಲ್ಲೆ, ನಗರ ಪ್ರಖಂಡ ಹಾಗೂ ಪರಿವಾರ ಸಂಘಟನೆಗಳಿಂದ ಸೋಮವಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.
ಕನ್ನಡಪ್ರಭ ವಾರ್ತೆ ಪುತ್ತೂರು
ಶ್ರೀಕ್ಷೇತ್ರ ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಷಡ್ಯಂತ್ರ, ಅಪಪ್ರಚಾರ ದೂರವಾಗಿ, ಭಕ್ತರಲ್ಲಿ ಕ್ಷೇತ್ರದ ಮೇಲೆ ಶ್ರದ್ಧೆ, ಭಕ್ತಿ ವೃದ್ಧಿಸುವಂತೆ ವಿಶ್ವಹಿಂದು ಪರಿಷತ್ ಪುತ್ತೂರು ಜಿಲ್ಲೆ, ನಗರ ಪ್ರಖಂಡ ಹಾಗೂ ಪರಿವಾರ ಸಂಘಟನೆಗಳಿಂದ ಸೋಮವಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆ ಹಾಗೂ ಶಿವ ಪಂಚಾಕ್ಷರಿ ಪಠಣ ನಡೆಸಲಾಯಿತು.ದೇವಾಲಯದಲ್ಲಿ ತುಪ್ಪದ ದೀಪ ಹಚ್ಚಿ, ಮಹಾಲಿಂಗೇಶ್ವರನ ನಡೆಯಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ೧೦೮ ಸಾಮೂಹಿಕ ಶಿವ ಪಂಚಾಕ್ಷರಿ ಪಠಣ ಮಾಡಿದರು. ವೇದಮೂರ್ತಿ ವಿ.ಎಸ್. ಭಟ್ ಪ್ರಾರ್ಥನೆ ಸಲ್ಲಿಸಿದರು.ವಿಶ್ವಹಿಂದು ಪರಿಷತ್ ಪುತ್ತೂರು ಜಿಲ್ಲಾಧ್ಯಕ್ಷ ಡಾ.ಕೃಷ್ಣಪ್ರಸನ್ನ ಮಾತನಾಡಿ, ರಾಜ್ಯದಾದ್ಯಂತ ಇರುವ ಸನಾತನ ಹಿಂದು ಧಾರ್ಮಿಕ ಶ್ರದ್ಧಾ ಕೇಂದ್ರಗಳ ರಕ್ಷಣೆಗಾಗಿ ವಿಶ್ವಹಿಂದು ಪರಿಷತ್ ಸಂಕಲ್ಪ ಮಾಡಿದೆ. ಧರ್ಮಸ್ಥಳ ಕ್ಷೇತ್ರದ ಮೇಲೆ ಆಗುತ್ತಿರುವ ಅವಹೇಳನ ಮಾಡುತ್ತಿರುವ ವಿರುದ್ಧ ಮತ್ತು ಧರ್ಮಸ್ಥಳ ಕೇಂದ್ರವಾಗಿಟ್ಟುಕೊಂಡು ಕರ್ನಾಟಕದ ಸಮಸ್ತ ಹಿಂದು ಧಾರ್ಮಿಕ ಕ್ಷೇತ್ರಗಳಿಗೆ ರಕ್ಷಣೆ ನೀಡಬೇಕು ಹಾಗೂ ಹಿಂದು ಧರ್ಮದ ಮೇಲಾಗುತ್ತಿರುವ ಅವಹೇಳನ, ಅಪಹಾಸ್ಯಗಳನ್ನು ನಿಲ್ಲಿಸಬೇಕು ಎಂದರು.ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಮಾಜಿ ಶಾಸಕ ಸಂಜೀವ ಮಠಂದೂರು, ವಿಶ್ವಹಿಂದು ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತ ಉಪಾಧ್ಯಕ್ಷ ಯು. ಪೂವಪ್ಪ, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರ್, ಉಪಾಧ್ಯಕ್ಷ ವಿದ್ಯಾಧರ ಜೈನ್, ನಗರ ಮಂಡಲದ ಅಧ್ಯಕ್ಷ ಶಿವಕುಮಾರ್ ಕಲ್ಲಿಮಾರ್, ಉಪಾಧ್ಯಕ್ಷ ಸಂತೋಷ್ ರೈ ಕೈಕಾರ, ಜಿಲ್ಲಾ ಧಾರ್ಮಿಕ ಪರಿಷತ್ ಮಾಜಿ ಸದಸ್ಯ ಮುರಳಿಕೃಷ್ಣ ಹಸಂತಡ್ಕ, ನಗರ ಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಪೂಜಾರಿ ಬಡಾವು, ಸದಸ್ಯರಾದ ಜೀವಂಧರ್ ಜೈನ್, ದೀಕ್ಷಾ ಪೈ, ವಿಶ್ವಹಿಂದು ಪರಿಷತ್ ನಗರ ಪ್ರಖಂಡದ ಅಧ್ಯಕ್ಷ ದಾಮೋದರ ಪಾಟಾಳಿ ಮತ್ತಿತರರು ಇದ್ದರು.