ಸಾರಾಂಶ
ಹರಪನಹಳ್ಳಿ: ತ್ಯಾಗ, ಬಲಿದಾನದ ಸಂಕೇತವಾದ ಪವಿತ್ರ ಬಕ್ರಿದ್ ಹಬ್ಬವನ್ನು ಪಟ್ಟಣದಲ್ಲಿ ಮುಸ್ಲಿಮರು ಅತ್ಯಂತ ಶ್ರದ್ಧಾ, ಭಕ್ತಿಯಿಂದ ಸೋಮವಾರ ಆಚರಿಸಿದರು.
ಪಟ್ಟಣದ ಹೊಸಪೇಟೆ ರಸ್ತೆ ಹಾಗೂ ಹೂವಿನಹಡಗಲಿ ರಸ್ತೆಗೆ ಹೊಂದಿಕೊಂಡಿರುವ ಈದ್ಗಾ ಮೈದಾನದಲ್ಲಿ ಮುಸ್ಲಿಮರು ಸೇರಿ ಸಾಮೂಹಿಕವಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ನಂತರ ಪರಸ್ಪರ ಆಲಂಗಿಸಿ, ಹಸ್ತಲಾಘವ ಮೂಲಕ ಶುಭಾಶಯ ವಿನಿಮಯ ಮಾಡಿಕೊಂಡರು.ಹಡಗಲಿ ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ನಡೆದ ಪ್ರಾರ್ಥನೆಯಲ್ಲಿ ಪಾಲ್ಗೊಂಡ ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಸನ್ಮಾನ ಸ್ವೀಕರಿಸಿ ಮಾತನಾಡಿ, ತಾಳ್ಮೆ ಪರಿಶ್ರಮದಿಂದ ಕೂಡಿದ ಹಬ್ಬ ಇದಾಗಿದೆ. ತ್ಯಾಗ, ಬಲಿದಾನಗಳ ಮೂಲಕ ಪವಿತ್ರವಾದ ಬಕ್ರಿದ್ ಆಚರಿಸಲಾಗುತ್ತಿದೆ. ಈ ಹಬ್ಬದಲ್ಲಿ ಬಡವ-ಬಲ್ಲಿದ ಎನ್ನದೇ ಎಲ್ಲರೂ ಒಂದೇ ಕಡೆ ಸಾಮೂಹಿಕ ಪ್ರಾರ್ಥನೆ ಮಾಡುವ ಮೂಲಕ ಸಹೋದರತ್ವ ಬಾಂಧವ್ಯವನ್ನು ಬೆಸೆಯಲಾಗುತ್ತಿದೆ. ಎಲ್ಲ ವರ್ಗದವರೊಂದಿಗೆ ತಾಳ್ಮೆ, ಪರಿಶ್ರಮದ ಮೂಲಕ ಜೀವಿಸಬೇಕು ಎಂದರು.
ಮಹಿಳೆಯರ ಪ್ರಾರ್ಥನೆ: ಬಕ್ರಿದ್ ಹಿನ್ನೆಲೆಯಲ್ಲಿ ಹೊಸಪೇಟೆ ರಸ್ತೆಯ ಈದ್ಗಾ ಮೈದಾನದಲ್ಲಿ ಮಹಿಳೆಯರು ಮಕ್ಕಳೊಂದಿಗೆ ಪ್ರತ್ಯೇಕ ಪ್ರಾರ್ಥನೆ ಸಲ್ಲಿಸಿದರು.ಮುಸ್ಲಿಂ ಧರ್ಮಗುರು ಧರ್ಮ ಬೋಧನೆ ಮಾಡಿದರು. ಮಕ್ಕಳು, ಯುವಕರು ಹೊಸ ಬಟ್ಟೆ ಧರಿಸಿ ಗಮನ ಸೆಳೆದರು. ಹಬ್ಬದ ಅಂಗವಾಗಿ ಬಡವರು ಮತ್ತು ಸಂಬಂಧಿಕರಿಗೆ ಆಹಾರ ಪದಾರ್ಥಗಳನ್ನು ದಾನ ಮಾಡಲಾಯಿತು.
ಕಾಂಗ್ರೆಸ್ ಮುಖಂಡ ನೂರುಅಹ್ಮದ್ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.ಪುರಸಭೆ ಸದಸ್ಯರಾದ ಎಂ.ವಿ. ಅಂಜಿನಪ್ಪ, ಅಬ್ದುಲ್ ರೆಹಮಾನ್, ಲಾಟಿ ದಾದಾಪೀರ, ಉದ್ದಾರ ಗಣೇಶ್, ಜಾಕೀರ್ ಸರ್ಖಾವಸ್, ಪುರಸಭೆ ಮಾಜಿ ಅಧ್ಯಕ್ಷ ಬಿ.ಮೆಹಬೂಬಸಾಬ್, ಅಂಜುಮನ್ ಸಮಿತಿ ಅಧ್ಯಕ್ಷ ಮುಜುಬೀರ್ ರೇಹಮಾನ್, ಮಾಜಿ ಅಧ್ಯಕ್ಷ ಎ.ಜಾವೀದ್, ಮುಖಂಡರಾದ ಬೆಲ್ದಾರ ಬಾಷು, ಜಾಫರ್‌ಸಾಹೇಬ್, ಎನ್.ಮಜೀದ್, ಎಂ.ದಾದಾಪೀರ, ಮಾಬುಸಾಬ್ ಸೇರಿದಂತೆ ಸಮುದಾಯದ ಮುಖಂಡರು ಇದ್ದರು.