ಸಾರಾಂಶ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಸಿಎಂ ಸಿದ್ದರಾಮಯ್ಯ ಅವರನ್ನು ಅನಗತ್ಯ ಇಕ್ಕಟ್ಟಿಗೆ ಸಿಲುಕಿಸುವ ಪ್ರತಿಪಕ್ಷಗಳ ಷಡ್ಯಂತ್ರ ಹಾಗೂ ರಾಜ್ಯಪಾಲರ ಅನುಮಾನಾಸ್ಪದ ನಡೆ ವಿರೋಧಿಸಿ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ವತಿಯಿಂದ ಆ.5ರ ಸೋಮವಾರ ಚಿತ್ರದುರ್ಗದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.ಇಲ್ಲಿನ ಪ್ರವಾಸಿ ಮಂದಿರದಲ್ಲಿ ಶನಿವಾರ ನಡೆದ ಒಕ್ಕೂಟದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಜಿಲ್ಲಾಧ್ಯಕ್ಷ ಸಿ.ಟಿ.ಕೃಷ್ಣಮೂರ್ತಿ, ಸಿಎಂ ಸಿದ್ದರಾಮಯ್ಯ ಕಳೆದ ಸರ್ಕಾರದಲ್ಲಿ ಕೊಟ್ಟ 165 ಭರವಸೆಗಳಲ್ಲಿ ಬಹುತೇಕ ಭರವಸೆ ಈಡೇರಿಸಿ ರಾಜ್ಯದ ಶೋಷಿತ ಸಮುದಾಯಗಳಿಗೆ ಶಕ್ತಿ ನೀಡುವ ಕೆಲಸ ಮಾಡಿದ್ದಾರೆ. ಈ ಬಾರಿ ಕೂಡ ಎಲ್ಲಾ ಜಾತಿ, ವರ್ಗದ ಬಡವರಿಗೆ ಪಂಚ ಗ್ಯಾರಂಟಿ ಯಥಾವತ್ತಾಗಿ ಜಾರಿಗೊಳಿಸಿ ಈ ಸಮುದಾಯಗಳ ಧ್ವನಿಯಾಗಿ ಆಡಳಿತ ನಡೆಸಿಕೊಂಡು ಬಂದು ಜನಪ್ರೀತಿ ಗಳಿಸಿದ್ದಾರೆ ಎಂದರು.
ಸಿದ್ದರಾಮಯ್ಯ ತಮ್ಮ ರಾಜಕೀಯ ಜೀವನದ ಇತಿಹಾಸದಲ್ಲಿ ಒಂದೇ ಒಂದು ಕಪ್ಪುಚುಕ್ಕೆ ಇಲ್ಲದೇ ಆಡಳಿತ ನಡೆಸಿದ್ದಾರೆ. ಇದನ್ನು ಸಹಿಸಲಾಗದೆ ಬಿಜೆಪಿ ಮತ್ತು ಜೆಡಿಎಸ್ ಕುತಂತ್ರ ಕುಯುಕ್ತಿ ನಡೆಸಿ ಷಡ್ಯಂತರ ರೂಪಿಸಿ ನಿತ್ಯ ತೇಜೋವಧೆ ಮಾಡಲು ಮುಂದಾಗಿವೆ. ಇಂತಹ ಕುತಂತ್ರ ಮೆಟ್ಟಿ ನಿಲ್ಲುವ ಶಕ್ತಿ ಸಿದ್ದರಾಮಯ್ಯ ಅವರಿಗಿದೆ. ಸಾಲದೆಂಬಂತೆ ಅಲ್ಪಸಂಖ್ಯಾತರು, ದಲಿತರು, ಹಿಂದುಳಿದವರು ಮತ್ತು ಎಲ್ಲಾ ಜಾತಿ, ಎಲ್ಲಾ ವರ್ಗದ ಬಡ ಜನತೆ ಅವರ ಬೆನ್ನಿಗಿದೆ ಎಂದು ಎಚ್ಚರಿಕೆ ನೀಡಲು ಪ್ರತಿಭಟನೆ ಹಮ್ಮಿಕೊಂಡಿದ್ದೇವೆ ಎಂದು ಸಿ.ಟಿ.ಕೃಷ್ಣಮೂರ್ತಿ ಹೇಳಿದರು.2022ರಲ್ಲಿ ಭಾರತೀಯ ಜನತಾ ಪಕ್ಷದ ಸರ್ಕಾರ ಆಡಳಿತದಲ್ಲಿದ್ದಾಗ ಸಿಎಂ ಸಿದ್ದರಾಮಯ್ಯ ಮುಡಾದಿಂದ ಬದಲಿ ನಿವೇಶನ ಪಡೆದುಕೊಂಡಿದ್ದಾರೆ. ಇದರಲ್ಲಿ ಅವರ ಯಾವ ತಪ್ಪೂ ಇಲ್ಲ. ವಾಲ್ಮೀಕಿ ಅಭಿವೃದ್ಧಿ ನಿಗಮದ ಅವ್ಯವಹಾರ ಮುಖ್ಯಮಂತ್ರಿಗೆ ಹೇಗೆ ಸಂಬಂಧಪಡುತ್ತದೆ. ನಿಯಮಾನುಸಾರ ಬಜೆಟ್‍ನಲ್ಲಿ ಮೀಸಲಿಟ್ಟ ಹಣ ಖಜಾನೆ ಮುಖಾಂತರ ನಿಗಮಕ್ಕೆ ವರ್ಗಾವಣೆಗೊಂಡಿರುತ್ತದೆ. ಅನುದಾನ ವರ್ಗಾವಣೆಗೊಂಡ ಮೇಲೆ ಅದರ ನಿರ್ವಹಣೆ ಜವಾಬ್ದಾರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರ ವ್ಯಾಪ್ತಿಯಲ್ಲಿರುತ್ತದೆ.
ತಪ್ಪು ಯಾರೇ ಮಾಡಿರಲಿ, ಎರಡು ಪ್ರಕರಣ ಈಗಾಗಲೇ ಮುಖ್ಯಮಂತ್ರಿಗಳು ಪ್ರತ್ಯೇಕ ಸಂಸ್ಥೆಗಳಿಗೆ ಒಪ್ಪಿಸಿ ತನಿಖೆಗೆ ಒಳಪಡಿಸಿರುತ್ತಾರೆ. ಇಷ್ಟಾದರೂ ವಿರೋಧ ಪಕ್ಷಗಳು ಷಡ್ಯಂತರ ರೂಪಿಸಿ ಇಲ್ಲಸಲ್ಲದ ಆರೋಪ ಮಾಡಿ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯರ ತೇಜೋವಧೆ ಮಾಡಲು ಹೊರಟಿದ್ದಾರೆ. ರಾಜ್ಯದ ಜನತೆಯಲ್ಲಿ ವಿರೋಧಪಕ್ಷಗಳ ನಡೆ ಬಗ್ಗೆ ಅಸಹ್ಯ ಮೂಡಿಸುತ್ತಿದೆ. ಕೇಂದ್ರ ಸರ್ಕಾರ ರಾಜ್ಯಪಾಲರನ್ನು ಕೈಗೊಂಬೆ ಮಾಡಿಕೊಂಡು ಅವರಿಂದ ರಾಜ್ಯ ಸರ್ಕಾರ ಅಸ್ಥಿರಗೊಳಿಸುವ ಉದ್ದೇಶಹೊಂದಿದೆ. ಯಾರೋ ಒಬ್ಬ ದಾರಿ ಹೋಕ ಕೊಟ್ಟ 200 ಪುಟ ದೂರನ್ನು ಪರಿಶೀಲಿಸದೆ ಕೇವಲ 6ಗಂಟೆಯಲ್ಲಿ ನೋಟಿಸ್ ಜಾರಿ ಮಾಡಿರುವುದು ಇಡೀ ರಾಜ್ಯದ ಜನತೆಗೆ ನೋವನ್ನುಂಟು ಮಾಡಿದೆ.ರಾಜ್ಯಪಾಲರ ಈ ನಡೆ ಖಂಡಿಸಿ ಜಿಲ್ಲಾ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಆ.5ರಂದು ಪ್ರತಿಭಟನೆ ಹಮ್ಮಿಕೊಂಂಡಿದೆ. ನಗರದ ನೀಲಕಂಠೇಶ್ವರ ದೇವಸ್ಥಾನಗಳ ಬಳಿಯಿಂದ ಅಂದು ಬೆಳಗ್ಗೆ 10.30ಕ್ಕೆ ಆರಂಭವಾಗುವ ಪ್ರತಿಭಟನಾ ಮೆರವಣಿಗೆ ಜಿಲ್ಲಾಧಿಕಾರಿ ಕಚೇರಿ ತಲುಪಿ ಖಂಡನಾ ಮನವಿ ಪತ್ರ ಸಲ್ಲಿಸಲಿದೆ. ಜಿಲ್ಲೆಯ ಸಿದ್ದರಾಮಯ್ಯ ಅಭಿಮಾನಿಗಳು, ಶೋಷಿತ ಸಮುದಾಯಗಳ ಒಕ್ಕೂಟದ ಎಲ್ಲಾ ಪದಾಧಿಕಾರಿಗಳು, ಕಾರ್ಯಕರ್ತರು ಮತ್ತು ಅಲ್ಪಸಂಖ್ಯಾತ, ದಲಿತ, ಹಿಂದುಳಿದ ಅಲೆಮಾರಿ, ಅರೆಅಲೆಮಾರಿ ಎಲ್ಲಾ ಬುಡಕಟ್ಟು ಸಮುದಾಯಗಳ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆಂದು ಸಿ.ಟಿ.ಕೃಷ್ಣಮೂರ್ತಿ ಹೇಳಿದರು.
ದಲಿತ ಸಂಘರ್ಷ ಸಮಿತಿ ಮುಖಂಡ ಡಿ.ದುರುಗೇಶಪ್ಪ, ಖಾನ್‍ಸಾಬ್, ನಗರಸಭೆ ಮಾಜಿ ಅಧ್ಯಕ್ಷ ಎಚ್.ಮಂಜಪ್ಪ, ಜಿಪಂ ಮಾಜಿ ಸದಸ್ಯ ಪ್ರಕಾಶ್‍ಮೂರ್ತಿ, ಉಪ್ಪಾರ ಸಮುದಾಯದ ಮುಖಂಡ ಮೂರ್ತಿ, ಮಡಿವಾಳ ಸಮಾಜದ ಜಿಲ್ಲಾಧ್ಯಕ್ಷ ಹಾಗೂ ಕರವೇ ಅಧ್ಯಕ್ಷ ರಮೇಶ್, ಟೀಪು ಖಾಸೀಂ ಅಲಿ, ಅಲೆಮಾರಿ ಸಂಘದ ಜಿಲ್ಲಾಧ್ಯಕ್ಷ ಲಕ್ಷ್ಮೀಕಾಂತ್, ಕುರುಬರ ಸಂಘದ ಅಧ್ಯಕ್ಷ ಶ್ರೀರಾಮ್, ನಗರಸಭಾ ಸದಸ್ಯೆ ಪಿ.ಕೆ.ಮೀನಾಕ್ಷಿ, ರಾಜ್ಯ ಅಲ್ಪಸಂಖ್ಯಾತರ ಮಹಿಳಾ ಮುಖಂಡರಾದ ಮುನೀರಾ ಮಕದ್ದರ್, ಛಲವಾದಿ ಸಮುದಾಯದ ರವಿಪೂಜಾರ್, ಸವಿತ ಸಮಾಜದ ಎನ್.ಡಿ.ಕುಮಾರ್, ಯುವ ಮುಖಂಡ ಯಾಸೀನ್, ಕುರುಬರ ಸಮಾಜದ ಖಜಾಂಚಿ ಮೃತ್ಯುಂಜಯ, ಮುಖಂಡರಾದ ಮಾರುತೇಶ್, ಬಡಗಿ ಸಂಘದ ಅಧ್ಯಕ್ಷ ಜಾಕೀರ್, ಎದ್ದೇಳು ಕರ್ನಾಟಕ ಸಂಘಟನೆ ಟಿ.ಶಫೀವುಲ್ಲಾ, ಮುಖಂಡ ಕಬಲಾಹುಸೇನ್, ವಲಿಖಾದ್ರಿ ನೇತಾ, ಲಂಬಾಣಿ ಸಮಾಜದ ಜಿಲ್ಲಾಧ್ಯಕ್ಷ ಪ್ರಕಾಶ್ ರಾಮನಾಯ್ಕ್, ಗ್ಯಾರಂಟಿ ಸಮಿತಿ ಜಿಲ್ಲಾಧ್ಯಕ್ಷ ಗಂಜಿಗಟ್ಟೆ ಶಿವಣ್ಣ, ಸೈಯದ್ ಖುದ್ದೂಸ್, ಒಕ್ಕೂಟದ ರಾಜ್ಯ ಸಂಚಾಲಕ ಬಿ.ಟಿ.ಜಗದೀಶ್, ಯಾದವ ಸಮಾಜದ ಮೈಲಾರಪ್ಪ, ಪೈಲ್ವಾನ್ ತಿಮ್ಮಣ್ಣ, ವೀರಶೈವ ಸಮಾಜದ ಅಧ್ಯಕ್ಷ ಹುಲ್ಲೂರು ಮಂಜುನಾಥ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.