ಸಾರಾಂಶ
ಗದಗ: ಗದಗ ತಾಲೂಕಿನ ಲಕ್ಕುಂಡಿ ಗ್ರಾಮದ ದಂಡಿನ ದುರ್ಗಾದೇವಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಅಂಗವಾಗಿ ಸಾಮೂಹಿಕ ಸೀಮಂತ ಕಾರ್ಯಕ್ರಮವು ಸಡಗರ ಸಂಭ್ರಮದಿಂದ ಜರುಗಿತು. ದಂಡಿನ ದುರ್ಗಾದೇವಿ ಸೇವಾ ಸಮಿತಿಯು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಗ್ರಾಮದ 18 ಗರ್ಭಿಣಿಯರು ಸಾಮೂಹಿಕ ಸೀಮಂತ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂತಸ ಪಟ್ಟರು.
ವೇದಿಕೆಯ ಮೇಲೆ ಆಸೀನರಾದ 18 ಗರ್ಭಿಣಿಯರಿಗೆ ಕುಂಕಮ, ಬಳೆ, ಕುಪ್ಪುಸ, ಹೂವು, ಅಡಿಕೆ, ಎಲೆಗಳನ್ನು ಉಡಿ ತುಂಬಿ, ಆರತಿ ಬೆಳಗಿ ಶಾಸ್ತ್ರೋಕ್ತವಾಗಿ ಸೀಮಂತ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಶೋಭಾನ ಪದಗಳನ್ನು ಹಾಡುವ ಮೂಲಕ ಮನರಂಜಿಸಲಾಯಿತು.ಹೋಳಿಗೆ, ಸಂಡಿಗೆ, ಹಪ್ಪಳ, ಕರಿದ ಮೆಣಸಿನಕಾಯಿ, ಅನ್ನ, ಸಾರು ಖಾದ್ಯವನ್ನು ಉಣಬಡಿಸಿಲಾಯಿತು. ಕಾರ್ಯಕ್ರಮಕ್ಕೆ ಆಗಮಿಸಿದ್ದ ಸರ್ವ ಮುತೈದೆಯರಿಗೆ ಉಡಿ ತುಂಬಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಂಕ್ರಯ್ಯ ಶಾಸ್ತ್ರೀಗಳು ಹಿರೇಮಠ, ನವರಾತ್ರಿ ಆಚರಣಿಯಲ್ಲಿ ಸಾಮೂಹಿಕ ಸೀಮಂತ ನೆರವೇರಿಸಿಕೊಳ್ಳುವ ಗರ್ಭಿಣಿಯರಿಗೆ ಸರಳ ಹೆರಿಗೆ ಆಗುವುದರ ಜತೆಗೆ ಆರೋಗ್ಯವಂತ ಮಗುವು ಜನಿಸುತ್ತದೆ. ತಾಯಿಂದಿರು ತಮ್ಮ ಮಗುವಿಗೆ ಉತ್ತಮ ಸಂಸ್ಕಾರ ನೀಡಿ ಈ ಸಮಾಜಕ್ಕೆ ಕೊಡುಗೆಯಾಗಿ ನೀಡಬೇಕು ಎಂದರು.ಪ್ರವಚನಕಾರರಾದ ಕೊಟ್ರಯ್ಯಶಾಸ್ತ್ರೀಗಳು ನರಗುಂದಮಠ ಅವರು ಸಾಮೂಹಿಕ ಸೀಮಂತ ಕಾರ್ಯ ಮತ್ತು ದೇವಿ ಪುರಾಣ ಕಾರ್ಯಕ್ರಮದ ಕುರಿತು ವಿವರಿಸಿದರು. ಮಂಜುನಾಥ ಗರ್ಜಪ್ಪನವರ, ಈರಪ್ಪ ಕರಿಯಲ್ಲಪ್ಪನವರ ಸಂಗೀತ ಸೇವೆ ನೀಡಿದರು. ಸೇವಾ ಸಮಿತಿಯ ಅಧ್ಯಕ್ಷ ರುದ್ರಪ್ಪ ಮುಸ್ಕಿನಭಾವಿ, ತಾಪಂ ಮಾಜಿ ಅಧ್ಯಕ್ಷ ಎಂ.ಎನ್. ಉಮಚಗಿ, ಶಿವಣ್ಣ ಸಜ್ಜನರ, ನಜೀರಅಹ್ಮದ ಕಿರಿಟಗೇರಿ, ವೀರಯ್ಯ ಗಂಧದ, ಮಂಜುನಾಥ ಪುರದ, ಪ್ರೇಮಾ ಮಟ್ಟಿ, ನೀಲಮ್ಮ ವಡ್ಡರ, ಸಾವಿತ್ರಿ ಯಲಿಶಿರುಂಜ, ಅಂಗನವಾಡಿ ಕಾರ್ಯಕರ್ತರು ಹಾಜರಿದ್ದರು.