ಸಾರಾಂಶ
ಶಿವರಾತ್ರಿ ಪ್ರಯುಕ್ತ ರಾತ್ರಿ ದೇಗುಲದಲ್ಲಿ ಶ್ರೀಗಂಗಾಧರೇಶ್ವರ ದೇವಾಲಯ ಭಜನಾ ಮಂಡಳಿ ಅವರಿಂದ ಮತ್ತು ಕನಕಗಿರಿ ತಾಲೂಕಿನ ಮುಸ್ಲಾಪುರ ಗ್ರಾಮದ ಭಜನಾ ಮಂಡಳಿಯಿಂದ ಭಜನೆ ನೆರವೇರಿತು.
ಗಂಗಾವತಿ:
ಮಹಾಶಿವರಾತ್ರಿ ನಿಮಿತ್ತ ನಗರದ 3ನೇ ವಾರ್ಡಿನ ಜನಯನಗರ-ಸತ್ಯನಾರಾಯಣ ಪೇಟೆಯಲ್ಲಿರುವ ಶ್ರೀಗಂಗಾಧರೇಶ್ವರ ದೇಗುಲದಲ್ಲಿ ಬುಧವಾರ ಬೆಳಗ್ಗೆ ನೂರಾರು ಮಹಿಳೆಯರಿಂದ ಶ್ರದ್ಧಾಭಕ್ತಿಯಿಂದ 1008 ಶಿವನಾಮ ಸ್ತ್ರೋತ್ರಗಳ ಪಠಣದೊಂದಿಗೆ ಸಾಮೂಹಿಕವಾಗಿ 108 ಶಿವಲಿಂಗ ಪೂಜೆ ಮತ್ತು ಸಹಸ್ರ ಬಿಲ್ವಾರ್ಚನೆ ನೆರವೇರಿತು.ಬೆಳಗ್ಗೆ ಶ್ರೀಗಂಗಾಧರೇಶ್ವರ ದೇವರ ಮೂರ್ತಿಗೆ ರುದ್ರಾಭಿಷೇಕ, 108 ಬಿಲ್ವ ಪತ್ರಿಗಳ ಅರ್ಚನೆ ಮೂಲಕ ಮಹಾ ಮಂಗಳಾರತಿ ನೆರವೇರಿಸಲಾಯಿತು. ಶಿವರಾತ್ರಿ ನಿಮಿತ್ತ ದೇವರ ಮೂರ್ತಿಯನ್ನು ವಿವಿಧ ಪುಷ್ಪಗಳಿಂದ ಆಕರ್ಷಕವಾಗಿ ಅಲಂಕರಿಸಲಾಗಿತ್ತು.ನಗರದ 3 ಮತ್ತು ನಾಲ್ಕನೇ ವಾರ್ಡಿನ ಜಯನಗರ, ಸತ್ಯನಾರಾಯಣ ಪೇಟೆ, ಸಿದ್ದಾಪುರ, ಶ್ರೀನಗರ, ಶ್ರೀಶಾರದಾಂಬೆ ನಗರ, ಶ್ರೀಆಂಜನೇಯ ಬಡಾವಣೆ ಇತರ ಬಡಾವಣೆಗಳ ಮಹಿಳೆಯರು, ಪುರುಷರು, ಯುವಕರು-ಯುವತಿರು, ವೃದ್ಧರು, ಮಕ್ಕಳು ಶ್ರೀಗಂಗಾಧರೇಶ್ವರ ದೇವರ ಮೂರ್ತಿಗೆ ಕಾಯಿ-ಕರ್ಪೂರ, ಬಗೆಬಗೆಯ ಪುಷ್ಪ, ಬಿಲ್ವ ಪತ್ರಿಗಳನ್ನು ಸಮರ್ಪಿಸಿ ಪೂಜೆ ನೆರವೇರಿಸಿದರು.
ಶ್ರೀಗಂಗಾಧರೇಶ್ವರ ದೇವಾಲಯ ಟ್ರಸ್ಟ್ ಸಮಿತಿ ಗೌರವಾಧ್ಯಕ್ಷ ಜೋಗದ ನಾರಾಯಣಪ್ಪ ನಾಯಕ, ಅಧ್ಯಕ್ಷ ವೀರಣ್ಣ ಪತ್ರಿಮಠ, ಉಪಾಧ್ಯಕ್ಷ ಡಾ. ವೀರನಗೌಡ ಪಾಟೀಲ್, ಪ್ರಧಾನ ಕಾರ್ಯದರ್ಶಿ ಅಮರೇಗೌಡ ಜಾನೂರು ಹಾಗೂ ವಿವಿಧ ಪದಾಧಿಕಾರಿಗಳು, ಸದಸ್ಯರು ಮತ್ತು ಮಹಿಳಾ ಭಜನಾ ಮಂಡಳಿ ಸದಸ್ಯರಾದ ಗೀತಾ ಪಾಟೀಲ್, ದೇವಿಕಾ, ಪುಷ್ಪಾ ಹಿರೇಮಠ, ಪದ್ಮಾ ಆಂಜನೇಯ, ಲಕ್ಷ್ಮೀ ಹಾಗೂ ಇತರರು ಭಾಗವಹಿಸಿದ್ದರು.ಶಿವರಾತ್ರಿ ಪ್ರಯುಕ್ತ ರಾತ್ರಿ ದೇಗುಲದಲ್ಲಿ ಶ್ರೀಗಂಗಾಧರೇಶ್ವರ ದೇವಾಲಯ ಭಜನಾ ಮಂಡಳಿ ಅವರಿಂದ ಮತ್ತು ಕನಕಗಿರಿ ತಾಲೂಕಿನ ಮುಸ್ಲಾಪುರ ಗ್ರಾಮದ ಭಜನಾ ಮಂಡಳಿಯಿಂದ ಭಜನೆ ನೆರವೇರಿತು.