ಸಾರಾಂಶ
ಗೋಕರ್ಣ: ಅಶೋಕೆಯಲ್ಲಿ ರಾಘವೇಶ್ವರ ಭಾರತೀ ಶ್ರೀಗಳ ಸ್ವಭಾಷಾ ಚಾತುರ್ಮಾಸ್ಯದ ಹಿನ್ನೆಲೆಯಲ್ಲಿ ಶ್ರೀಮಠದಲ್ಲಿ ಉತ್ಸರ್ಜನ ಮತ್ತು ಯಜುರ್ ಉಪಾಕರ್ಮ ವಿಧ್ಯುಕ್ತವಾಗಿ ನಡೆಯಿತು.
ಶಿವಗುರುಕುಲದ ಪ್ರಾಚಾರ್ಯ ಮಂಜುನಾಥ ಭಟ್, ಪರಂಪರಾ ಗುರುಕುಲದ ಪ್ರಾಚಾರ್ಯ ನರಸಿಂಹ ಭಟ್ ಮತ್ತು ಪಾರಂಪರಿಕ ಶಿಕ್ಷಣ ವಿಭಾಗದ ಪ್ರಾಚಾರ್ಯ ಸತ್ಯನಾರಾಯಣ ಶರ್ಮಾ ನೇತೃತ್ವದಲ್ಲಿ ಉಪಾಕರ್ಮಾಂಗ ವಿಧಿವಿಧಾನಗಳು ಸಾಂಗವಾಗಿ ನೆರವೇರಿದವು. ೨೫೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಶಿಷ್ಯಭಕ್ತರು ಯಜ್ಞೋಪವೀತ ಧಾರಣೆ ಮಾಡಿದರು."ಉತ್ಸರ್ಜನ ಮತ್ತು ಉಪಾಕರ್ಮ ಪ್ರತಿಯೊಬ್ಬ ದ್ವಿಜರೂ ಮಾಡಲೇಬೇಕಾದ ಕರ್ತವ್ಯ. ಬ್ರಾಹ್ಮಣರು, ಕ್ಷತ್ರಿಯರು ಮತ್ತು ವೈಶ್ಯರು ಹೀಗೆ ವೇದಾಧ್ಯಯನದ ಅಧಿಕಾರ ಇರುವ ಪ್ರತಿಯೊಬ್ಬರಿಗೂ ಇದು ನಿತ್ಯಕರ್ಮ. ಅದರಲ್ಲೂ ವೇದ ಅಧ್ಯಾಪನದ ಅಧಿಕಾರ ಇರುವ ಬ್ರಾಹ್ಮಣರಂತೂ ವಿಧಿವತ್ತಾಗಿ ಮಾಡಲೇಬೇಕಾದ ಕರ್ತವ್ಯ " ಎಂದು ಕರ್ಮಚಿಂತನೆ ನೆರವೇರಿಸಿದ ನರಸಿಂಹ ಭಟ್ ನುಡಿದರು.
ವೇದಾಧ್ಯಯನ ಮತ್ತು ಅಧ್ಯಾಪನದ ಅಧಿಕಾರಗಳು ಇರುವುದು ಬ್ರಾಹ್ಮಣರಿಗೆ ಮಾತ್ರ. ಆದ್ದರಿಂದ ಉಪಾಕರ್ಮ ಬ್ರಾಹ್ಮಣ ಸಮುದಾಯಕ್ಕೆ ವಿಶೇಷ ಎಂದರು.ನಿರಂತರ ವೇದಾಧ್ಯಯನದಿಂದ ಬರಬಹುದಾದ ಜಡತ್ವ ನಿವಾರಣೆಗಾಗಿ ಉತ್ಸರ್ಜನ ಮಾಡಿ ಆ ಬಳಿಕ ಉಪಾಕರ್ಮ ಕೈಗೊಂಡು ವೇದಾಧ್ಯಯನ ನಡೆಸುವುದು ರೂಢಿ ಎಂದು ವಿವರಿಸಿದರು.
ವೇದಾಧ್ಯಯನವನ್ನೇ ಇಂದಿನ ಪೀಳಿಗೆ ಬಿಟ್ಟಿರುವ ಸಂದರ್ಭದಲ್ಲೂ ಇದು ಚೈತನ್ಯಕಾರಕ. ಜಾಢ್ಯದಿಂದ ಹೊರಬರಲು ಇಂಥ ಅನುಷ್ಠಾನ ಅಗತ್ಯ. ಇದು ಪ್ರತಿಯೊಬ್ಬರ ಕರ್ತವ್ಯ ಎಂಬ ದೃಷ್ಟಿಯಿಂದ ಈ ಕರ್ಮಾಂಗಗಳನ್ನು ಮಾಡಬೇಕು. ಧರ್ಮ, ಅರ್ಥ, ಕಾಮ, ಮೋಕ್ಷ ಈ ಪುರುಷಾರ್ಥಗಳನ್ನು ಸಿದ್ಧಿಸುವ ಸಾಮಥ್ರ‍್ಯ ಇರುವುದು ವೇದಗಳಿಗೆ ಮಾತ್ರ. ಆಯಾ ವೇದಗಳಿಗೆ ಸಂಬಂಧಿಸಿದ ಮಂಡಲ ಉಪಾಸನೆ ಮಾಡಿ ಉಪಾಕರ್ಮ ಆಚರಿಸಬೇಕು ಎಂದು ಸಲಹೆ ಮಾಡಿದರು.ಯಜುರ್ವೇದಿಗಳು ಶ್ರಾವಣ ಮಾಸದ ಪೌರ್ಣಮಿಯಂದು ಉಪಾಕರ್ಮ ನೆರವೇರಿಸಿ, ಮರುದಿನ ಅಂದರೆ ಪ್ರತಿಪದೆಯಂದು ಚೈತನ್ಯ ವೃದ್ಧಿಗಾಗಿ ಸಾಧ್ಯವಾದಷ್ಟು ಗಾಯತ್ರಿ ಮಂತ್ರವನ್ನು ಪಠಿಸಬೇಕು. ಮೂರು ದಿನಗಳ ವಿರಾಮದ ಬಳಿಕ ವೇದಾಧ್ಯಯನ ಮುಂದುವರಿಸುವುದು ಸಂಪ್ರದಾಯ ಎಂದು ಬಣ್ಣಿಸಿದರು.
ಮನುಷ್ಯರೆಲ್ಲರೂ ದೇವಋಣ, ಋಷಿಋಣ ಮತ್ತು ಪಿತೃಋಣಗಳನ್ನು ಹೊಂದಿರುತ್ತಾರೆ. ಉಪಾಕರ್ಮದ ಸಂದರ್ಭದಲ್ಲಿ ವಿಶೇಷವಾಗಿ ಈ ಎಲ್ಲರಿಗೂ ತರ್ಪಣ ಸಮರ್ಪಿಸಿ ತೃಪ್ತಿಪಡಿಸಬೇಕು. ಮೋಕ್ಷ ಹೊಂದುವ ಸಾಧನವಾದ ದೇಹವನ್ನು ನಮಗೆ ಕರುಣಿಸಿದ ಪಿತೃಗಳ ಋಣ ಅತ್ಯಂತ ಮಹತ್ವದ್ದು. ಆದ್ದರಿಂದ ಅವರನ್ನು ಸ್ಮರಿಸುವುದು ಕರ್ತವ್ಯ ಎಂದರು.ಯಜ್ಞೋಪವೀತ ಎನ್ನುವುದು ಯಜ್ಞಕ್ಕೆ ಸೂತ್ರ. ಅಂದರೆ ಒಂದರ್ಥದಲ್ಲಿ ನಮ್ಮ ಬದುಕಿನ ಸೂತ್ರ. ೯೬ ತತ್ವಗಳನ್ನು ನೆನಪಿಸುವ ಸಲುವಾಗಿ ತ್ರಿಮೂರ್ತಿಗಳು, ನವತಂತು ದೇವತೆಗಳನ್ನು ಆವಾಹನೆ ಮಾಡಿ ಧಾರಣೆ ಮಾಡಬೇಕು. ಯಜ್ಞೋಪವೀತ ಆಹುತಿ, ದಾನ ಮತ್ತು ಧಾರಣೆಯ ಮೂಲಕ ಬದುಕಿನ ಸಾರ್ಥಕತೆಯ ಸೂತ್ರವನ್ನು ಹೊಂದಬಹುದು ಎಂದು ಅಭಿಪ್ರಾಯಪಟ್ಟರು.
ಚಾತುರ್ಮಾಸ್ಯದ ೩೧ನೇ ದಿನವಾದ ಶನಿವಾರ ಬೆಂಗಳೂರಿನ ಉದ್ಯಮಿ ಜಿ.ವಿ.ಹೆಗಡೆ ಕುಟುಂಬದವರು ಸರ್ವಸೇವೆ ನೆರವೇರಿಸಿದರು. ಸವಿತಾ ಸಮಾಜದ ವತಿಯಿಂದ ಈಶ್ವರ ಕೊಡೆಯ ದಂಪತಿ ಸ್ವರ್ಣಪಾದುಕಾ ಪೂಜೆ ನೆರವೇರಿಸಿದರು.ಬಳ್ಳಾರಿಯ ಸಾಮಾಜಿಕ ಕಾರ್ಯಕರ್ತ ಅಮರೇಶ, ಬೀರ‍್ನ ರಾಮಚಂದ್ರ ಅವರು ಶ್ರೀಗಳ ದರ್ಶನ- ಆಶೀರ್ವಾದ ಪಡೆದರು. ವಿವಿವಿ ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ ಗೋಳಗೋಡು, ಸರ್ವ ಸಮಾಜ ಸಂಯೋಜಕ ಕೆ.ಎನ್.ಹೆಗಡೆ ಮತ್ತಿತರರು ಉಪಸ್ಥಿತರಿದ್ದರು.