ಸಾರಾಂಶ
ಮುಂಡರಗಿ: ಪಟ್ಟಣದ ಕೊಪ್ಪಳ ರಸ್ತೆಯಲ್ಲಿರುವ ಶ್ರೀವೀರಭದ್ರೇಶ್ವರ ದೇವಸ್ಥಾನದ 17ನೇ ವಾರ್ಷಿಕೋತ್ಸವದ ಅಂಗವಾಗಿ ಶ್ರೀಭದ್ರಕಾಳಮ್ಮನ ದೇವಸ್ಥಾನದ ನೂತನ ಗೋಪುರದ ಕಳಸಾರೋಹಣ, ಪಲ್ಲಕ್ಕಿ ಮಹೋತ್ಸವ, ಅಗ್ನಿ ಮಹೋತ್ಸವ ಹಾಗೂ 45 ಜೋಡಿ ಸಾಮೂಹಿಕ ವಿವಾಹ ಕಾರ್ಯಕ್ರಮ ಡಿ. 2 ಹಾಗೂ 3 ರಂದು ಜರುಗಲಿವೆ ಎಂದು ಶ್ರೀ ವೀರಭದ್ರೇಶ್ವರ ದೇವಸ್ಥಾನದ ಸೇವಾ ಸಮಿತಿ ಅಧ್ಯಕ್ಷ ಸಂಗಪ್ಪ ಲಿಂಬಿಕಾಯಿ ಹೇಳಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ. 2ರಂದು ಜ.ನಾಡೋಜ ಡಾ.ಅನ್ನದಾನೀಶ್ವರ ಮಹಾಸ್ವಾಮೀಜಿಯವರ ಅಮೃತ ಹಸ್ತದಿಂದ ಬೆಳಗ್ಗೆ 9 ಗಂಟೆಗೆ ಶ್ರೀ ಭದ್ರಕಾಳಮ್ಮನ ದೇವಸ್ಥಾನದ ನೂತನ ಗೋಪುರದ ಕಳಸಾರೋಹಣ ನೆರವೇರಲಿದೆ. ನಂತರ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನೂ ಸಹ ಶ್ರೀಗಳು ಉದ್ಘಾಟಿಸಲಿದ್ದಾರೆ. ಸಂಜೆ 4.30ಕ್ಕೆ ಪಲ್ಲಕ್ಕಿ ಉತ್ಸವ ಜರುಗಲಿದೆ ಎಂದರು.ವೀರಭದ್ರೇಶ್ವರ ಜಾತ್ರಾ ಕಮೀಟಿ ಅಧ್ಯಕ್ಷ ವೀರೇಶ ಗುಗ್ಗರಿ ಮಾತನಾಡಿ, ಡಿ. 3 ರಂದು ಬೆಳಗ್ಗೆ 8.30ಕ್ಕೆ ವೀರಭದ್ರೇಶ್ವರ ಅಗ್ನಿ ಮಹೋತ್ಸವ ಜರುಗಲಿದೆ. ಬೆಳಗ್ಗೆ 11.30ಕ್ಕೆ 45 ಜೋಡಿಗಳ ಸರ್ವಧರ್ಮ ಸಾಮೂಹಿಕ ವಿವಾಹಗಳು ಜರುಗಲಿವೆ. ಜ. ನಾಡೋಜ ಡಾ. ಅನ್ನದಾನೀಶ್ವರ ಮಹಾಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಲಿದ್ದಾರೆ. ಲಿಂಗನಾಯಕನಹಳ್ಳಿ ಜಂಗಮ ಕ್ಷೇತ್ರದ ಚನ್ನವೀರ ಮಹಾಸ್ವಾಮೀಜಿ ನೇತೃತ್ವ ವಹಿಸುವರು.
ಇದೇ ಸಂದರ್ಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ಜಿ.ಬಿ. ಬೀಡನಾಳ ಅವರಿಗೆ ಶ್ರೀವೀರಭದ್ರೇಶ್ವರ ಪ್ರತಿಷ್ಠಾನ ಪುರಸ್ಕಾರ ನೀಡಿ ಗೌರವಿಸಲಾಗುತ್ತಿದೆ. ಸೇವಾ ಸಮಿತಿ ಅಧ್ಯಕ್ಷ ಸಂಗಪ್ಪ ಲಿಂಬಿಕಾಯಿ ಅಧ್ಯಕ್ಷತೆ ವಹಿಸುವರು. ಜಾತ್ರಾ ಮಹೋತ್ಸವ ಅಧ್ಯಕ್ಷ ವಿರೇಶ ಗುಗ್ಗರಿ, ಮಹಿಳಾ ಘಟಕದ ಅಧ್ಯಕ್ಷ ಗೌರಮ್ಮ ಹುರಕಡ್ಲಿ ಪುರಸಭೆ ಅಧ್ಯಕ್ಷ ನಿರ್ಮಲಾ ಕೊರ್ಲಹಳ್ಳಿ, ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ, ಸದಸ್ಯೆ ಕವಿತಾ ಉಳ್ಳಾಗಡ್ಡಿ, ಶಾಂತವ್ವ ಕರಡಿಕೊಳ್ಳ ಆಗಮಿಸಲಿದ್ದಾರೆ. ಸಂಜೆ 7 ಗಂಟೆಗೆ ಸಹಸ್ರ ದೀಪೋತ್ಸವ ಕಾರ್ತಿಕ ಮಂಗಲೋತ್ಸವ ಜರುಗಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ವೀರಭದ್ರೇಶ್ವರ ದೇವರ ಕೃಪೆಗೆ ಪಾತ್ರರಾಗಬೇಕು ಎಂದರು.ಖಜಾಂಚಿ ವಿ.ಜಿ. ಹಿರೇಮಠ ಮಾತನಾಡಿ, ಭಕ್ತರೆಲ್ಲರೂ ಸೇರಿ ಶ್ರೀ ವೀರಭದ್ರೇಶ್ವರ ದೇವರ ಮಹಾರಥೋತ್ಸವ ಮಾಡಲು ನಿರ್ಧರಿಸುತ್ತಿದ್ದು, ಅದಕ್ಕಾಗಿ ನೂತನ ರಥ ನಿರ್ಮಾಣಕ್ಕೆ ಯೋಚಿಸಲಾಗಿದ್ದು, ಈಗಾಗಲೇ ಅನೇಕ ಭಕ್ತರು ಧನಸಹಾಯ ಮಾಡಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸಹಾಯ, ಸಹಕಾರ ನೀಡಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ವೀರಣ್ಣ ಕರ್ಜಗಿ, ಶಿವಯೋಗಿ ಕೊಪ್ಪಳ, ಶರಣಪ್ಪ ಕುಬಸದ, ರವೀಂದ್ರಗೌಡ ಪಾಟೀಲ, ಸಾಯಿಪ್ರಸನ್ನ ಅಳವಂಡಿ, ಗುಡದಪ್ಪ ಲಿಂಬಿಕಾಯಿ, ಶರಣಪ್ಪ ಅಂಗಡಿ, ಕೊಟ್ರೇಶ ನವಲಿಹಿರೇಮಠ, ಕಾಶಿನಾಥ ಬಿಳಿಮಗ್ಗದ, ಗೌರಮ್ಮ ಹುರಕಲ್ಡಿ, ಗೀತಾ ಬಣಗಾರ, ಅಕ್ಷತಾ ಲಿಂಬಿಕಾಯಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.