ಸಾರಾಂಶ
ಕನ್ನಡಪ್ರಭ ವಾರ್ತೆ ರಾಮನಗರ
ಸಂವಿಧಾನ ರಕ್ಷಣೆ ಮಾಡುವ ಜವಾಬ್ದಾರಿ ಮರೆತಿರುವ ರಾಜ್ಯಪಾಲರು ಬಿಜೆಪಿ - ಜೆಡಿಎಸ್ ಕೈಗೊಂಬೆಯಂತೆ ಕೆಲಸ ಮಾಡುತ್ತಿದ್ದಾರೆ. ಮುಖ್ಯಮಂತ್ರಿಗಳ ವಿರುದ್ಧ ಪ್ರಾಜಿಕ್ಯುಷನ್ ಅವಕಾಶ ನೀಡುವ ಮೂಲಕ ರಾಜ್ಯಪಾಲರು ಹಾಡಹಗಲೇ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಕಗ್ಗೊಲೆ ಮಾಡಿದ್ದಾರೆ ಎಂದು ಶಾಸಕ ಇಕ್ಬಾಲ್ ಹುಸೇನ್ ಕಿಡಿಕಾರಿದರು.ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವ ರಾಜ್ಯಪಾಲರ ಕ್ರಮ ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ದೇವರಾಜ ಅರಸು ಅವರನ್ನು ಹೊರತುಪಡಿಸಿದರೆ ಎಲ್ಲಾ ಜಾತಿ, ಧರ್ಮ, ವರ್ಗದವರನ್ನು ಜೊತೆಯಲ್ಲಿ ಕರೆದೊಯ್ಯುವ ಏಕೈಕ ನಾಯಕ ಎಂದರೆ ಸಿದ್ದರಾಮಯ್ಯ ಮಾತ್ರ. ಅವರ ಪರವಾಗಿ ಕಾಂಗ್ರೆಸ್ ಮಾತ್ರವಲ್ಲದೆ ನಾಡಿನ ಜನರು ನಿಲ್ಲಲಿದ್ದಾರೆ ಎಂದರು.
ರಾಜ್ಯದಲ್ಲಿ ದೇವರಾಜ ಅರಸು ರೂಪದಲ್ಲಿ ಸಿಕ್ಕಿರುವ ಮತ್ತೊಬ್ಬ ನಾಯಕ ಎಂದರೆ ಮುಖ್ಯಮಂತ್ರಿ ಸಿದ್ದರಾಮಯ್ಯ. ರಾಜಕೀಯ ಜೀವನದಲ್ಲಿ ಕಳಂಕ ರಹಿತ, ಕಪ್ಪು ಚುಕ್ಕೆ ಇಲ್ಲದ ನೇರ ನಡೆ ನುಡಿಯ ವ್ಯಕ್ತಿತ್ವ ಹೊಂದಿರುವ ಸಿದ್ದರಾಮಯ್ಯ ವಿರುದ್ಧ ಷಡ್ಯಂತ್ರ ನಡೆಸುತ್ತಿರುವ ಬಿಜೆಪಿ, ಜೆಡಿಎಸ್ ಹಾಗೂ ಆರ್‌ಎಸ್‌ಎಸ್‌ಗೆ ನಾಚಿಕೆ ಆಗಬೇಕು ಎಂದು ಕಿಡಿಕಾರಿದರು.ಬಿಜೆಪಿ, ಜೆಡಿಎಸ್, ಆರ್‌ಎಸ್‌ಎಸ್‌ನವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಸುಳ್ಳು ಆರೋಪ ಮಾಡಿ ಮಸಿ ಬಳಿಯುವ, ಕಾಂಗ್ರೆಸ್ ಸರ್ಕಾರಕ್ಕೆ ಕಳಂಕ ತರುವ ಸಂಚು ಮಾಡುತ್ತಿದೆ. ಸಿದ್ದರಾಮಯ್ಯನವರ ಆಡಳಿತಕ್ಕೆ ಕಪ್ಪು ಚುಕ್ಕೆ ತಂದು, ಆ ಮೂಲಕ ಅವರನ್ನು ಅಧಿಕಾರದಿಂದ ಕೆಳಗಿಸುವ ಹುನ್ನಾರ ನಡೆಸುತ್ತಿದ್ದಾರೆಂದು ಆರೋಪಿಸಿದರು.
ಕೇಂದ್ರ ಸಚಿವ ಕುಮಾರಸ್ವಾಮಿ, ಮಾಜಿ ಸಿಎಂ ಯಡಿಯೂರಪ್ಪ, ನಿರಾಣಿ, ಶಶಿಕಲಾ ಜೊಲ್ಲೆ ಸೇರಿದಂತೆ ಹಲವಾರು ನಾಯಕರ ವಿರುದ್ಧ ತನಿಖಾ ಸಂಸ್ಥೆಗಳೇ ಪ್ರಾಸಿಕ್ಯೂಷನ್ ಗೆ ಅನುಮತಿ ಕೇಳಿ ತಿಂಗಳುಗಳೇ ಉರುಳುತ್ತಿದ್ದರೂ ಈವರೆಗೂ ಅನುಮತಿ ನೀಡದ ರಾಜ್ಯಪಾಲರು, ಸರ್ಕಾರದ ಯಾವ ತನಿಖಾ ಸಂಸ್ಥೆ ಅನುಮತಿ ಕೇಳದಿದ್ದರೂ ಕೇವಲ ಖಾಸಗಿ ವ್ಯಕ್ತಿ ಗಳ ದೂರು ಆಧರಿಸಿ ತನಿಖೆಗೆ ಅನುಮತಿ ನೀಡಿರುವುದು ಎನ್‌ಡಿಎ ನಾಯಕರ ರಾಜಕೀಯ ಕುತಂತ್ರವಾಗಿದ್ದು ಇಂತಹ ಬೆದರಿಕೆಗೆ ಕಾಂಗ್ರೆಸ್ ಮಣಿಯುವುದಿಲ್ಲ ಎಂದು ಇಕ್ಬಾಲ್ ಹುಸೇನ್ ಎಚ್ಚರಿಸಿದರು. ಮಾಜಿ ಶಾಸಕ ಅಶ್ವತ್ಥ್, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ವಿಜಯ್ ದೇವ್, ಮಾಜಿ ಅಧ್ಯಕ್ಷ ಅಶೋಕ್, ಉಪಾಧ್ಯಕ್ಷ ಯರೇಹಳ್ಳಿ ಮಂಜು, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಗಂಗಾಧರ್, ಕಾರ್ಮಿಕ ವಿಭಾಗ ಜಿಲ್ಲಾಧ್ಯಕ್ಷ ಪುಟ್ಟರಾಜು, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಚೇತನ್ ಕುಮಾರ್, ನಿರ್ದೇಶಕ ಶಪರ್ವೇಜ್ ಪಾಷಾ, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಗಾಣಕಲ್ ನಟರಾಜ್, ಮುಖಂಡರಾದ ವಿಶ್ವನಾಥ್, ರೈಡ್ ನಾಗರಾಜ್, ರಾಜಶೇಖರ್, ಸಿಎನ್ ಆರ್ ವೆಂಕಟೇಶ್, ಶ್ರೀಕಂಠು, ನಗರಸಭೆ ಸದಸ್ಯರಾದ ಕೆ.ಶೇಷಾದ್ರಿ, ನಿಜಾಮುದ್ದೀನ್ ಷರೀಫ್, ಆಯಿಷಾ, ದೌಲತ್ ಷರೀಫಾ, ಪವಿತ್ರ, ಸೋಮಶೇಖರ್, ಅಜ್ಮತ್, ಆರೀಫ್ ಮತ್ತಿತರರು ಭಾಗವಹಿಸಿದ್ದರು.ಮೋದಿಗೆ ಸಿದ್ದು - ಡಿಕೆಶಿ ಕಂಡರೆ ಭಯ
ಕೆಪಿಸಿಸಿ ಉಪಾಧ್ಯಕ್ಷ ಪಿ.ಆರ್.ರಮೇಶ್ ಮಾತನಾಡಿ, ಜನಪರ ಕೆಲಸ ಮಾಡುತ್ತಾ ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಆಡಳಿತ ನೋಡಿ ಕೇಂದ್ರ ಸರ್ಕಾರಕ್ಕೆ ಹೊಟ್ಟೆ ಉರಿ ಬಂದಿದೆ. ಪ್ರಧಾನಿ ಮೋದಿರವರು ಇಡೀ ದೇಶದಲ್ಲಿ ಯಾರಿಗಾದರು ಭಯ ಬೀಳುತ್ತಿದ್ದರೆ ಅದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮಾತ್ರ ಎಂದರು.ಕೇಂದ್ರ ಸರ್ಕಾರ ಡಿ.ಕೆ.ಶಿವಕುಮಾರ್ ರವರು ನಾಯಕತ್ವಕ್ಕೆ ಹೆದರಿ ಅವರ ವಿರುದ್ಧ ಇಡಿ, ಐಟಿ, ಸಿಬಿಐ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡರು. ಅದೆಲ್ಲವನ್ನು ದಿಟ್ಟತನದಿಂದ ಹೆದರಿಸಿ ಕಾನೂನು ಮೂಲಕವೇ ಜಯಸಿಕೊಂಡು ಬರುತ್ತಿದ್ದಾರೆ. ಇದು ಬಿಜೆಪಿ - ಜೆಡಿಎಸ್ ನಾಯಕರಿಗೆ ಸಹಿಸಲು ಆಗುತ್ತಿಲ್ಲ ಎಂದು ಟೀಕಿಸಿದರು.
ದೇಶದಲ್ಲಿ ರಾಷ್ಟ್ರಪತಿಗೆ ಇರುವಂತೆಯೇ ರಾಜ್ಯದಲ್ಲಿ ರಾಜ್ಯಪಾಲರಿಗೆ ಸಂವಿಧಾನಾತ್ಮಕ ಅಧಿಕಾರ ಇದೆ. ಇದನ್ನು ಮರೆತಿರುವ ರಾಜ್ಯಪಾಲರು ಕೇಂದ್ರ ಸರ್ಕಾರ, ಬಿಜೆಪಿ - ಜೆಡಿಎಸ್ ನಾಯಕರ ಕೈಗೊಂಬೆ ಆಗಿದ್ದಾರೆ.ಇದರಿಂದ ಪ್ರಜಾಪ್ರಭುತ್ವಕ್ಕೆ ಧಕ್ಕೆ ಆಗಲಿದೆ. ಪ್ರಜಾಪ್ರಭುತ್ವ ವಿರೋಧಿಯೂ ಆದ ಈ ಶಕುನಿ ರಾಜಕಾರಣವನ್ನು ನಾವು ನೈತಿಕ ನೆಲೆಗಟ್ಟಿನಲ್ಲಿ, ಸಂವಿಧಾನದ ಶಕ್ತಿಯನ್ನು ಬಳಸಿ ನೈತಿಕ ರಾಜಕಾರಣ ಮಾಡುತ್ತೇವೆ ಎಂದರು.
ಮಾಜಿ ಪ್ರಧಾನಿ ದೇವೇಗೌಡ ಮತ್ತು ಕೇಂದ್ರ ಸಚಿವ ಕುಮಾರಸ್ವಾಮಿರವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಏನಾದರು ಮಾಡಿ ಅಧಿಕಾರದಿಂದ ಕೆಳಗಿಳಿಸಲು ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಮೇಲೆ ಒತ್ತಡ ಹೇರುತ್ತಿದ್ದಾರೆ. ಆ ಕೃತ್ಯಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸುವ ಕೆಲಸವನ್ನು ನಾಡಿನ ಜನರು ಮಾಡಬೇಕು ಎಂದು ಕರೆ ನೀಡಿದರು.