ತೆಂಕನಿಡಿಯೂರು ಕಾಲೇಜಿನಲ್ಲಿ ಬೃಹತ್ ರಕ್ತದಾನ ಶಿಬಿರ

| Published : Jun 14 2024, 01:05 AM IST

ಸಾರಾಂಶ

ಶಿಬಿರದಲ್ಲಿ ಒಟ್ಟು ೯೧ ಯೂನಿಟ್ ರಕ್ತ ಸಂಗ್ರಹಿಸಿ ರಕ್ತನಿಧಿ ಕೇಂದ್ರ, ರೆಡ್‌ಕ್ರಾಸ್ ಸೊಸೈಟಿ ಕುಂದಾಪುರಕ್ಕೆ ನೀಡಲಾಯಿತು. ವಿದ್ಯಾರ್ಥಿಗಳ ಜೊತೆಗೆ ಬೋಧಕ-ಬೋಧಕೇತರ ವೃಂದದವರೂ ರಕ್ತದಾನ ಮಾಡಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಇಲ್ಲಿನ ತೆಂಕನಿಡಿಯೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಐಕ್ಯೂಎಸಿ, ಯೂತ್ ರೆಡ್‌ಕ್ರಾಸ್, ರೋವರ್ಸ್‌ಸ್-ರೇಂಜರ್ಸ್‌, ಎನ್.ಎಸ್.ಎಸ್. ಹಾಗೂ ರೆಡ್‌ಕ್ರಾಸ್ ಸೊಸೈಟಿ ಉಡುಪಿ-ಕುಂದಾಪುರ, ಎಚ್.ಡಿ.ಎಫ್.ಸಿ. ಬ್ಯಾಂಕ್ ಹಾಗೂ ಟಾರ್ಗೆಟ್ ಫ್ರೆಂಡ್ಸ್ ಮಲ್ಪೆ-ಮಣಿಪಾಲ ಸಂಯುಕ್ತ ಆಶ್ರಯದಲ್ಲಿ ರಕ್ತದಾನಿಗಳ ದಿನಾಚರಣೆ ಅಂಗವಾಗಿ ಬೃಹತ್ ರಕ್ತದಾನ ಶಿಬಿರ ನಡೆಯಿತು.

ಶಿಬಿರ ಉದ್ಘಾಟಿಸಿದ ರೆಡ್‌ಕ್ರಾಸ್ ಸೊಸೈಟಿ ಕುಂದಾಪುರದ ಸಭಾಪತಿ ಜಯಕರ ಶೆಟ್ಟಿ, ನಾವು ದಾನ ಮಾಡುವ ರಕ್ತವನ್ನು ಮೂರು ವರ್ಗಗಳಾಗಿ ವಿಂಗಡಿಸಿ ತುರ್ತು ಸಂದರ್ಭದಲ್ಲಿ ಬಳಕೆಯಾಗಿ ಮೂರು ಜೀವಗಳನ್ನು ಕಾಪಾಡಲು ಸಹಕಾರಿಯಾಗುತ್ತದೆ. ಆದ್ದರಿಂದ ಯುವ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡಿ ಮಾನವೀಯತೆ ಮೆರೆಯುವಂತೆ ಕರೆಯಿತ್ತರು.

ಅತಿಥಿಗಳಾಗಿ ಭಾಗವಹಿಸಿದ ರೆಡ್‌ಕ್ರಾಸ್ ಸೊಸೈಟಿ ಉಡುಪಿಯ ಸಭಾಪತಿ ಬಸ್ರೂರು ರಾಜೀವ ಶೆಟ್ಟಿ, ಗೌರವ ಕಾರ್ಯದರ್ಶಿ ಡಾ. ಗಣನಾಥ ಶೆಟ್ಟಿ ಎಕ್ಕಾರು ಹಾಗೂ ಎಚ್.ಡಿ.ಎಫ್.ಸಿ. ಉಡುಪಿಯ ಡಬ್ಲ್ಯೂ.ಬಿ.ಓ. ಮ್ಯಾನೇಜರ್ ರಾಘವೇಂದ್ರ ರಾವ್ ರಕ್ತದಾನದ ಮಹತ್ವ ಕುರಿತಾಗಿ ವಿದ್ಯಾರ್ಥಿಗಳಿಗೆ ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಭಾರ ಪ್ರಾಂಶುಪಾಲ ನಿತ್ಯಾನಂದ ವಿ. ಗಾಂವ್ಕರ್, ಉಡುಪಿ-ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ರಕ್ತದ ತೀವ್ರ್ರ ಅಭಾವವಿದ್ದು ಈ ನಿಟ್ಟಿನಲ್ಲಿ ಶಿಬಿರ ಔಚಿತ್ಯಪೂರ್ಣ ಎಂದರು.

ಕಾರ್ಯಕ್ರಮದಲ್ಲಿ ರೆಡ್‌ಕ್ರಾಸ್ ಸೊಸೈಟಿಯ ಇತರ ಪದಾಧಿಕಾರಿಗಳು, ಲಯನ್ ಕ್ಲಬ್ ಉಡುಪಿಯ ಅಧ್ಯಕ್ಷರಾದ ಗೀತಾ ವಾದಿರಾಜ್, ಐಕ್ಯೂಎಸಿ ಸಂಚಾಲಕರಾದ ಡಾ. ಮೇವಿ ಮಿರಾಂದ, ಟಾರ್ಗೆಟ್ ಫ್ರೆಂಡ್ಸ್ ಮಲ್ಪೆಯ ಮುನಾವರ್ ಕೆ. ಉಪಸ್ಥಿತರಿದ್ದರು.

ರೋವರ್ಸ್‌ ಸಂಚಾಲಕರಾದ ಡಾ. ಉದಯ ಶೆಟ್ಟಿ ಕೆ. ಸ್ವಾಗತಿಸಿದರು. ಯೂತ್‌ ರೆಡ್‌ಕ್ರಾಸ್ ಸಂಚಾಲಕರ ಪ್ರಶಾಂತ್ ನೀಲಾವರ ವಂದಿಸಿದರು. ಎನ್.ಎಸ್.ಎಸ್. ಯೋಜನಾಧಿಕಾರಿ ಡಾ. ರಘು ನಾಯ್ಕ ಕಾರ್ಯಕ್ರಮ ನಿರೂಪಿಸಿದರು.

ಶಿಬಿರದಲ್ಲಿ ಒಟ್ಟು ೯೧ ಯೂನಿಟ್ ರಕ್ತ ಸಂಗ್ರಹಿಸಿ ರಕ್ತನಿಧಿ ಕೇಂದ್ರ, ರೆಡ್‌ಕ್ರಾಸ್ ಸೊಸೈಟಿ ಕುಂದಾಪುರಕ್ಕೆ ನೀಡಲಾಯಿತು. ವಿದ್ಯಾರ್ಥಿಗಳ ಜೊತೆಗೆ ಬೋಧಕ-ಬೋಧಕೇತರ ವೃಂದದವರೂ ರಕ್ತದಾನ ಮಾಡಿದರು.