ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಸೈನಿಕ ಪಿತಾಮಹ, ನೇತಾಜಿ ಸುಭಾಷ್ ಚಂದ್ರಬೋಸ್ ಅವರ 127ನೇ ಜಯಂತ್ಯೋತ್ಸವ ಅಂಗವಾಗಿ ಜೀವಧಾರೆ ಟ್ರಸ್ಟ್‌ನಿಂದ ಜ.23ರಂದು ನಗರದಲ್ಲಿ ಬೃಹತ್ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ನಟರಾಜು ತಿಳಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದ ವಿಠ್ಠಲ ಸಮುದಾಯ ಭವನದಲ್ಲಿ (ಗುರುಶ್ರೀ ಚಿತ್ರಮಂದಿರ ಪಕ್ಕ) ಅಂದು ಬೆಳಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ರಕ್ತದಾನ ಶಿಬಿರ ನಡೆಯಲಿದೆ. ಸುಭಾಷ್ ಚಂದ್ರಬೋಸ್ ಅವರ ಜನ್ಮದಿನದ ಅಂಗವಾಗಿ ಜಿಲ್ಲೆಯ 127 ಹಳ್ಳಿಗಳ ಯುವಜನರು ರಕ್ತದಾನ ಶಿಬಿರದಲ್ಲಿ ಭಾಗವಹಿಸಲಿದ್ದಾರೆ ಎಂದರು.
ಟ್ರಸ್ಟ್‌ನಿಂದ ಈಗಾಗಲೇ 14 ಜಿಲ್ಲೆಗಳಲ್ಲಿ ಹಾಗೂ ಅಂಡಮಾನ್‌ನಲ್ಲಿ ರಕ್ತದಾನ ಶಿಬಿರ ನಡೆಸಿದ್ದು, ಇದು 317ನೇ ಶಿಬಿರವಾಗಿದೆ. ಈ ಬಾರಿ ಸುಮಾರು 1500 ರಿಂದ 2000 ಮಂದಿ ರಕ್ತದಾನ ಮಾಡಬಹುದು ಎಂಬ ನಿರೀಕ್ಷೆ ಇದೆ. ಕನಿಷ್ಠ 1500 ಯೂನಿಟ್ ರಕ್ತ ಸಂಗ್ರಹಿಸುವ ಗುರಿ ಹೊಂದಿದ್ದೇವೆ ಎಂದರು.ಜೀವಧಾರೆ ಟ್ರಸ್ಟ್ ಇದುವರೆಗೆ ನಡೆದ ಶಿಬಿರಗಳಲ್ಲಿ ಸಂಗ್ರಹವಾದ ರಕ್ತವನ್ನು ಸರ್ಕಾರಿ ಆಸ್ಪತ್ರೆಗಳಿಗೆ ನೀಡಿದ್ದೇವೆ. ಈ ಬಾರಿ ಬೆಂಗಳೂರಿ ಸೈನಿಕ ಆಸ್ಪತ್ರೆಯಾಗಿರುವ ಬೆಂಗಳೂರಿನ ಕಮಾಂಡ್ ಹಾಸ್ಪಿಟಲ್ ಏರ್‌ಪೋರ್ಸ್‌ಗೆ ನೀಡಲಾಗುತ್ತಿದೆ. ದೇಶ ಕಾಯುವ ಸೈನಿಕರಿಗಾಗಿ ಈ ರಕ್ತವನ್ನು ನೀಡುತ್ತಿದ್ದೇವೆ ಎಂದು ವಿವರಿಸಿದರು.
ರಕ್ತದಾನ ಶಿಬಿರ ಕುರಿತು ಬೈಕ್ ರ್‍ಯಾಲಿ ಜಾಗೃತಿ:ಬೃಹತ್ ರಕ್ತದಾನದ ಅಂಗವಾಗಿ ಶನಿವಾರ ನಗರದ ವಿವಿಧ ರಸ್ತೆಗಳಲ್ಲಿ ಬೈಕ್ ರ್‍ಯಾಲಿ ನಡೆಸುವ ಮೂಲಕ ಯುವ ಸಮುದಾಯ, ಜನರಲ್ಲಿ ಜಾಗೃತಿ ಮೂಡಿಸಲಾಗುವುದು. ಸುಧೀರ್ ಪಾರ್ಕ್ ಸ್ವರ್ಣಸಂದ್ರದಿಂದ ಪ್ರಾರಂಭವಾಗುವ ಬೈಕ್ ರ್‍ಯಾಲಿ ಗುತ್ತಲು ರಸ್ತೆ, ಫ್ಯಾಕ್ಟರಿ ಸರ್ಕಲ್ ಹತ್ತಿರ ಚೀರನಹಳ್ಳಿ ರಸ್ತೆಯ ಉದಯಗಿರಿಯ ಒಳ ರಸ್ತೆ, ಲೇಬರ್ ಕಾಲೋನಿ ಮುಖ್ಯರಸ್ತೆಯಲ್ಲಿ ಸಾಗಿ ಚೆನ್ನಯ್ಯ ಪಾರ್ಕ್ ವರೆಗೆ ಬರಲಿದೆ ಎಂದರು.
ನಂತರ ಹರಿಶ್ಚಂದ್ರ ಸರ್ಕಲ್‌ನಿಂದ ಎಂ.ಡಿ.ಸಿ ರಸ್ತೆ, ಕಾಳಮ್ಮನ ದೇವಸ್ಥಾನ ಪೇಟೆ ಬೀದಿಯ ಮುಖ್ಯ ರಸ್ತೆಯಲ್ಲಿ ಸಾಗಿ ಕಲ್ಲಳ್ಳಿ, ವಿವಿ ನಗರ ಕಾಳೇಗೌಡ ಹೈಸ್ಕೂಲ್, ಬನ್ನೂರ್ ರಸ್ತೆ, ವಿನೋಬರಸ್ತೆ, ಬೆಂಗಳೂರು- ಮೈಸೂರು ಹೆದ್ದಾರಿಯಿಂದ ಜಯಚಾಮರಾಜ ಒಡೆಯರ್ ವೃತ್ತ, ಆರ್.ಪಿ. ರಸ್ತೆ, ಗಾಂನಗರದ ಮುಖ್ಯರಸ್ತೆ, ಕಿತ್ತೂರು ರಾಣಿ ಚೆನ್ನಮ್ಮ ಆಟೋ ನಿಲ್ದಾಣ, ಆದರ್ಶ ಸ್ಕೂಲ್, ಹೊಸಹಳ್ಳಿ, ವಿವಿ ರಸ್ತೆಯಲ್ಲಿ ಬಂದು ಗಾಂಧಿ ಭವನ ಅಮರ್ ಜವಾನ್ ಲೋಗೋ ಪ್ರತಿಮೆ ಬಳಿ ಜಾಥಾ ಕೊನೆಗೊಳ್ಳಲಿದೆ ಎಂದರು.ನಿವೃತ್ತ ಯೋಧ ಉದಯಕುಮಾರ್ ಮಾತನಾಡಿ, ಶಿಬಿರದಲ್ಲಿ ಸಂಗ್ರಹವಾಗುವ ರಕ್ತವನ್ನು ಸೈನಿಕರ ಆರೋಗ್ಯ ದೃಷ್ಟಿಯಿಂದ ಸೈನಿಕ ಆಸ್ಪತ್ರೆಗೆ ನೀಡಲಾಗುತ್ತಿದೆ. ಈಗಾಗಲೇ ಆಸ್ಪತ್ರೆ ಮುಖ್ಯಸ್ಥರನ್ನು ಸಂಪರ್ಕಿಸಿದ್ದೇವೆ. ಸಾಮಾನ್ಯವಾಗಿ ಸೈನಿಕರಿಗೆ ರಕ್ತ ಬೇಕಿದ್ದರೆ ಸಾಮಾಜಿಕ ಜಾಲತಾಣ ಅಥವಾ ಅವರ ಬಳಿ ಇರುವ ದೂರವಾಣಿಗಳನ್ನು ಸಂಪರ್ಕಿಸಿ ರಕ್ತ ತರಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದರು. ಇದೇ ಮೊದಲ ಬಾರಿಗೆ ಶಿಬಿರದಲ್ಲಿ ಸಂಗ್ರಹ ಮಾಡುವತ್ತ ಗಮನ ಹರಿಸಿದ್ದಾರೆ ಎಂದರು.
ಸೈನಿಕ ವಿಭಾಗದ ಮುಖ್ಯಸ್ಥರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಶಿಬಿರದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದೇವೆ. ಅವರು ಬರಲು ಒಪ್ಪಿಕೊಂಡಿದ್ದಾರೆ. ಅವರಿಗೆ ಅಗತ್ಯವಿರುವ ರಕ್ತವನ್ನು ನೀಡಲಾಗುತ್ತದೆ. ಉಳಿದಿದ್ದನ್ನು ಸರ್ಕಾರಿ ಆಸ್ಪತ್ರೆಗೆ ನೀಡಲಾಗುವುದು ಎಂದರು.ಸುದ್ದಿಗೋಷ್ಠಿಯಲ್ಲಿ ನಿವೃತ್ತ ಯೋಧ ರವಿ, ಜೀವಧಾರೆ ಟ್ರಸ್ಟ್‌ನ ಮಹದೇವು, ಯೋಗಣ್ಣ, ಕುಮಾರ್, ಸುನಿಲ್, ಹನುಮಂತು ಇದ್ದರು.