ಭೂಮಿಪುತ್ರ ರೈತನ ಗೌರವಾರ್ಥ ಇಂದು ಬೃಹತ್ ರಕ್ತದಾನ ಶಿಬಿರ

| Published : Aug 15 2025, 01:00 AM IST

ಸಾರಾಂಶ

ಮದ್ದೂರಿನ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ಭೂಮಿ ಪುತ್ರ ರೈತನ ಗೌರವಾರ್ಥ 79ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಹಮ್ಮಿಕೊಂಡಿರುವ ರೈತ ರಕ್ತದಾನ ಶಿಬಿರದ ಪೋಸ್ಟರ್‌ ಬಿಡುಗಡೆ ಮಾಡಿದ ಪ್ರಾಂಶುಪಾಲ ಪ್ರೊ.ಕೆ.ಬಿ.ನಾರಾಯಣ , ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿನಿಯರು.

ಕನ್ನಡಪ್ರಭ ವಾರ್ತೆ ಮದ್ದೂರು

ಟೀಮ್ ನಾಲ್ವಡಿ, ರಕ್ತದಾನಿಗಳ ಒಕ್ಕೂಟದಿಂದ ಆ.15ರಂದು 79ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಪಟ್ಟಣದ ಮಹಿಳಾ ಸರ್ಕಾರಿ ಕಾಲೇಜಿನಲ್ಲಿ ಬೆಳಗ್ಗೆ 8 ರಿಂದ ಸಂಜೆ 6 ಗಂಟೆವರೆಗೆವರೆಗೆ ರಕ್ತದಾನ ಶಿಬಿರ ಆಯೋಜಿಸಲಾಗಿದೆ.

ರೈತ ಅನ್ನದಾತ ದೇಶದ ಬೆನ್ನೆಲುಬು, ರೈತನೇ ದೈವ ಸ್ವರೂಪಿಯೆಂದು ಸ್ವಾತಂತ್ರ್ಯೋತ್ಸವದಂದು ಜೈ ಕಿಸಾನ್ ಘೋಷ ವಾಕ್ಯವೂ ಹಳ್ಳಿ-ಹಳ್ಳಿಗೂ ತಲುಪುವಂತೆ, ರೈತನೂ ಕೂಡ ದೇಶದ ನಿರ್ಮಾಣದಲ್ಲಿ ಅತೀ ದೊಡ್ಡ ಶ್ರಮಿಕ, ಪಾಲುದಾರನೆಂಬ ವಾಸ್ತವ ಸತ್ಯವನ್ನು ಗಟ್ಟಿ ಧ್ವನಿಯಲ್ಲಿ ಜಗತ್ತಿಗೆ ತಿಳಿಸಿಕೊಡುವ ಉದ್ದೇಶದೊಂದಿಗೆ ರೈತ ರಕ್ತದಾನ ಶಿಬಿರವನ್ನು ಸಂಘಟಕರು ಆಯೋಜಿಸಿದ್ದಾರೆ.

ಕಾವೇರಿ ನೀರಿನ ಹೋರಾಟದಲ್ಲಿ ರಕ್ತ ಕೊಟ್ಟೇವೂ... ನೀರು ಕೊಡೆವು ಎಂಬ ಮಂಡ್ಯ ರೈತರ ಹಳೇ ಘೋಷವಾಕ್ಯ ಅಂದು ದೇಶ ಆಳುವವರ ನಿದ್ದೆಗೆಡಿಸಿತ್ತು.... ಇಂದು ಅದೇ ಮಂಡ್ಯ ಜಿಲ್ಲೆಯ ರೈತರು.. ರೈತರ ಮಕ್ಕಳು.. ರೈತರ ಶ್ರಮದ ಪಾಲನ್ನು ಅವಲಂಬಿಸಿ ಬದುಕುತ್ತಿರುವವರೆಲ್ಲಾ ಸೇರಿ ಮಂಡ್ಯ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಬಡರೋಗಿಗಳ‌‌ ಜೀವಗಳಿಗಾಗಿ, ಅಮೂಲ್ಯ ಜೀವಗಳ ರಕ್ಷಣೆಗಾಗಿ ರಕ್ತ ಕೊಟ್ಟೇ ತೀರುವೆವು ಎಂಬ ಘೋಷ ವಾಕ್ಯದೊಂದಿಗೆ ರಕ್ತದಾನದ ಮೂಲಕ ರೈತ ಅನ್ನದಾತನಾಗಿ, ರಕ್ತದಾನಿಯೂ ಆಗಿದ್ದಾನೆ ಎಂದು ಸಾಬೀತು ಮಾಡುವುದು, ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ಅನ್ನದಾತನ ಹೆಸರಿನಲ್ಲಿ ರಕ್ತದಾನ ಶಿಬಿರ ನಡೆಯುತ್ತಿದೆ. ಶಿಬಿರವನ್ನು ಯಶಸ್ವಿಗೊಳಿಸುವಂತೆ ಕೋರಿದ್ದಾರೆ.

ಆ.೧೭ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ

ಕನ್ನಡಪ್ರಭ ವಾರ್ತೆ ಮಂಡ್ಯ

ಭಾರತೀಯ ರೆಡ್‌ಕ್ರಾಸ್ ಸಂಸ್ಥೆ, ಶ್ರೀಜಗದ್ಗುರು ಬಸವೇಶ್ವರ ಪತ್ತಿನ ಸಹಕಾರ ಸಂಘ, ಅಂತಾರಾಷ್ಟ್ರೀಯ ಅಲಯನ್ಸ್ ಸಂಸ್ಥೆಯಿಂದ ಬೃಹತ್ ಆರೋಗ್ಯ ತಪಾಸಣೆ ಮತ್ತು ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಆ.೧೭ರ ಬೆಳಗ್ಗೆ ೯ ಗಂಟೆಗೆ ನಗರದ ಶ್ರೀಲಕ್ಷ್ಮೀಜನಾರ್ದನ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಅಂತಾರಾಷ್ಟ್ರೀಯ ಅಲಯನ್ಸ್ ಸಂಸ್ಥೆ ಅಧ್ಯಕ್ಷ ಕೆ.ಟಿ.ಹನುಮಂತು ತಿಳಿಸಿದರು.

ಶಿಬಿರದಲ್ಲಿ ೧೫ ಮಂದಿ ತಜ್ಞ ವೈದ್ಯರಿಂದ ಆರೋಗ್ಯ ತಪಾಸಣೆ ನಡೆಸಲಾಗುವುದು. ಶಿಬಿರವನ್ನು ಶಾಸಕ ಪಿ.ರವಿಕುಮಾರ್ ಉದ್ಘಾಟಿಸಲಿದ್ದು, ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಸಭಾಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ ಅಧ್ಯಕ್ಷತೆ ವಹಿಸುವರು, ಮುಖ್ಯ ಅತಿಥಿಗಳಾಗಿ ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್, ಉಪಾಧ್ಯಕ್ಷ ಅರುಣ್‌ಕುಮಾರ್, ಶ್ರೀಲಕ್ಷ್ಮೀ ಜನಾರ್ಧನ ಶಿಕ್ಷಣ ಸಮಿತಿ ಅಧ್ಯಕ್ಷೆ ಅಂಜನಾ ಶ್ರೀಕಾಂತ್, ಕಾರ್ಯದರ್ಶಿ ಡಾ.ಗೋಪಾಲಕೃಷ್ಣ ಗುಪ್ತ, ಶ್ರೀಜಗದ್ಗುರು ಬಸವೇಶ್ವರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಷಡಕ್ಷರಿ ಭಾಗವಹಿಸುವರು. ಆರೋಗ್ಯ ತಪಾಸಣಾ ಶಿಬಿರದಲ್ಲಿ ೧೦೦೦ಕ್ಕೂ ಹೆಚ್ಚು ಮಂದಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ವಿವರಿಸಿದರು.

ಗೋಷ್ಠಿಯಲ್ಲಿ ಶ್ರೀ ಜಗದ್ಗುರು ಬಸವೇಶ್ವರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಷಡಕ್ಷರಿ, ಉಪಾಧ್ಯಕ್ಷ ಜಗದೀಶ್, ನಿರ್ದೇಶಕರಾದ ಎಂ.ಎಸ್.ಶಿವಪ್ರಕಾಶ್, ಗುಳ್ಳಪ್ಪ ಇದ್ದರು.