ಹುಬ್ಬಳ್ಳಿ:
ಉತ್ತರ ಕರ್ನಾಟಕದ ಗ್ರಾಮೀಣ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಯುಪಿಎಸ್‌ಸಿ, ಕೆಎಎಸ್, ಐಎಎಸ್, ಐಪಿಎಸ್ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಗುಣಮಟ್ಟದ ತರಬೇತಿ ನೀಡಲು 2000 ವಿದ್ಯಾರ್ಥಿಗಳ ಸಾಮರ್ಥ್ಯದ ಬೃಹತ್ ಕೋಚಿಂಗ್ ಹಾಗೂ ತರಬೇತಿ ಕೇಂದ್ರ ಸ್ಥಾಪಿಸಲು ನಿರ್ಧರಿಸಲಾಗಿದೆ ಎಂದು ಕನ್ಹೇರಿಮಠದ ಅದೃಶ್ಯ ಕಾಡಸಿದ್ದೇಶ್ವರ ಶ್ರೀ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಉತ್ತರ ಕರ್ನಾಟಕದ 14 ಜಿಲ್ಲೆಗಳ 82 ಹಿರಿಯರ, ಮುಖಂಡರ ಸಭೆ ಸೇರಿ ಈ ಕುರಿತು ನಿರ್ಣಯ ಕೈಗೊಳ್ಳಲಾಗಿದೆ. ಕೇಂದ್ರದಲ್ಲಿ 1 ಸಾವಿರ ಬಾಲಕಿಯರು ಹಾಗೂ 1 ಸಾವಿರ ಬಾಲಕರು ಸೇರಿದಂತೆ 2 ಸಾವಿರ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುವುದು. ವಸತಿ, ಊಟ, ಡಿಜಿಟಲ್ ಮತ್ತು ಭೌತಿಕ ಗ್ರಂಥಾಲಯ, ಕಂಪ್ಯೂಟರ್ ಲ್ಯಾಬ್, ಕ್ರೀಡಾ ಸೌಲಭ್ಯ ಸೇರಿದಂತೆ ಅಗತ್ಯ ಮೂಲಸೌಕರ್ಯ ಕಲ್ಪಿಸಲಾಗುವುದು ಎಂದರು.
ಬಡವರಿಗೆ ₹1ಕ್ಕೆ ತರಬೇತಿ:ಆರ್ಥಿಕವಾಗಿ ಸಬಲ ವಿದ್ಯಾರ್ಥಿಗಳಿಗೆ ವಾರ್ಷಿಕ ₹30ರಿಂದ ₹ 40 ಸಾವಿರ, ಮಧ್ಯಮ ವರ್ಗದವರಿಗೆ ₹20ರಿಂದ ₹ 25 ಸಾವಿರ ಶುಲ್ಕ ವಿಧಿಸುವ ಚಿಂತನೆಯಿದ್ದು, ಬಡ ವಿದ್ಯಾರ್ಥಿಗಳಿಗೆ ವರ್ಷಕ್ಕೆ ಕೇವಲ ₹1ಕ್ಕೆ ತರಬೇತಿ ನೀಡುವ ಉದ್ದೇಶವಿದೆ. ಕೋಚಿಂಗ್ ಕೇಂದ್ರದ ಜತೆಗೆ ಕಲೆ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗಗಳನ್ನು ಒಳಗೊಂಡ 3 ವರ್ಷದ ಇಂಟಿಗ್ರೇಟೆಡ್ ಡಿಗ್ರಿ ಕಾಲೇಜು ಆರಂಭಿಸಲಾಗುವುದು ಎಂದು ಹೇಳಿದರು.
ಸೆ. 13ರಂದು ಸಭೆ:
ಶಾಶ್ವತ ಕ್ಯಾಂಪಸ್ ನಿರ್ಮಿಸಲು ಕನಿಷ್ಠ 100 ಎಕರೆ ಭೂಮಿ ಪಡೆಯುವ ಉದ್ದೇಶವಿದ್ದು, ತಾತ್ಕಾಲಿಕವಾಗಿ ಹುಬ್ಬಳ್ಳಿ, ಬೆಳಗಾವಿ ಅಥವಾ ಕಲಬುರಗಿಯಲ್ಲಿ ಲಭ್ಯವಿರುವ ಕಟ್ಟಡಗಳಲ್ಲಿ ಮುಂದಿನ ಏಪ್ರಿಲ್‌ನಿಂದ ತರಬೇತಿ ಆರಂಭಿಸಲು ಚಿಂತಿಸಲಾಗಿದೆ. ಸಂಸ್ಥೆಯ ಸ್ಥಳ ಹಾಗೂ ಸ್ವರೂಪದ ಕುರಿತು ಸೆ. 13ರಂದು ಹುಬ್ಬಳ್ಳಿಯಲ್ಲಿ ನಡೆಯುವ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು. ಈ ಯೋಜನೆಗೆ ಸುಮಾರು ₹140 ಕೋಟಿ ವೆಚ್ಚವಾಗುವ ನಿರೀಕ್ಷೆಯಿದ್ದು, ಹಲವು ದಾನಿಗಳು ಸಹಕಾರ ನೀಡುವ ವಾಗ್ದಾನ ಮಾಡಿದ್ದಾರೆ ಎಂದರು.
ಪ್ರತಿ ಜಿಲ್ಲೆಯಲ್ಲಿ ಸಮಿತಿ ರಚಿಸಿ 7-8ನೇ ತರಗತಿಯಿಂದಲೇ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ವಿಶೇಷ ತರಬೇತಿ ನೀಡುವ ಉದ್ದೇಶವಿದೆ. ಉತ್ತರ ಕರ್ನಾಟಕದ ಮಕ್ಕಳಲ್ಲಿ ಪ್ರತಿಭೆ ಇದ್ದರೂ ಅವಕಾಶದ ಕೊರತೆಯಿದೆ. ಆ ಕೊರತೆ ನೀಗಿಸಿ ಗ್ರಾಮೀಣ ಮಕ್ಕಳಿಗೆ ರಾಷ್ಟ್ರೀಯ ಮಟ್ಟದ ಅವಕಾಶ ಕಲ್ಪಿಸುವುದು ಯೋಜನೆಯ ಉದ್ದೇಶ ಎಂದರು.ಸುದ್ದಿಗೋಷ್ಠಿಯಲ್ಲಿ ಚಳಕಾಪುರದ ಶಿವಕುಮಾರ ಶ್ರೀಗಳು, ಬಸವಲಿಂಗ ಶ್ರೀ, ಮಾಜಿ ಸಂಸದರಾದ ಅಣ್ಣಾಸಾಹೇಬ್ ಜೊಲ್ಲೆ, ರಮೇಶ ಕತ್ತಿ, ಗುರುಲಿಂಗಪ್ಪ ಅಂಗಡಿ ಸೇರಿದಂತೆ ವಿವಿಧ ಮಠಾಧೀಶರು ಪಾಲ್ಗೊಂಡಿದ್ದರು.