ಧಾರಾಕಾರ ಮಳೆಗೆ ಅಪಾರ ಹಾನಿ

| Published : Jul 20 2024, 12:47 AM IST

ಸಾರಾಂಶ

ಅಘನಾಶಿನಿ ನದಿಯು ತುಂಬಿ ಹರಿಯುತ್ತಿರುವುದರಿಂದ ಕಾನಸೂರು, ಸರಕುಳಿ, ಹೊಸಗದ್ದೆ ಸೇತುವೆಗಳ ಮೇಲೆ ಮೂರ್ನಾಲ್ಕು ಅಡಿಗಳನ್ನು ನೀರು ಹರಿದು ಕೆಲ ಸಮಯ ಸಂಪರ್ಕ ಕಡಿತಗೊಂಡಿತ್ತು.

ಶಿರಸಿ: ತಾಲೂಕಿನಲ್ಲಿ ಶುಕ್ರವಾರ ಗಾಳಿ ಸಹಿತ ಮಳೆಗೆ ಮನೆಗಳ ಮೇಲೆ ಮರಗಳು ಉರುಳಿ ಸಾಕಷ್ಟು ಪ್ರಮಾಣದಲ್ಲಿ ಹಾನಿಯಾಗಿದೆ.ರಮೇಜಾಬಿ ನನ್ನೆಸಾಬ್ ದಿವಾಲರ ಮನೆಯ ಗೋಡೆ ಬಿದ್ದು ₹೧೫ ಸಾವಿರ, ರುದ್ರಗೌಡ ದೇವಪ್ಪ ಪಾಟೀಲ ಅವರ ಮನೆ ಗೋಡೆ ಬಿದ್ದು ಅಂದಾಜು ₹೧೨ ಸಾವಿರ, ತಾಲೂಕಿನ ಮಧುರವಳ್ಳಿ ಗ್ರಾಮದ ರಮೇಶ ಈರಪ್ಪ ನಾಯ್ಕ ಅವರ ಮನೆಯ ಗೋಡೆ ಕುಸಿದು ಅಂದಾಜು ₹೧೦ ಸಾವಿರ ಹಾನಿಯಾಗಿದೆ. ಸೇತುವೆ ಮೇಲೆ ಹರಿದ ನೀರು:

ಅಘನಾಶಿನಿ ನದಿಯು ತುಂಬಿ ಹರಿಯುತ್ತಿರುವುದರಿಂದ ಕಾನಸೂರು, ಸರಕುಳಿ, ಹೊಸಗದ್ದೆ ಸೇತುವೆಗಳ ಮೇಲೆ ಮೂರ್ನಾಲ್ಕು ಅಡಿಗಳನ್ನು ನೀರು ಹರಿದು ಕೆಲ ಸಮಯ ಸಂಪರ್ಕ ಕಡಿತಗೊಂಡಿದೆಯಲ್ಲದೇ, ಶಾಲ್ಮಲಾ ನದಿ ಉಕ್ಕಿ ಹರಿಯುತ್ತಿರುವುದರಿಂದ ಕೆಂಗ್ರೆ ಸೇತುವೆ ಮೇಲೆ ಕೆಲ ಸಮಯ ನೀರು ಹರಿದು ರಸ್ತೆ ಸಂಪರ್ಕ ಕಡಿತಗೊಂಡಿತು.ಶಿಥಿಲ, ಸೋರುವ ಮನೆಯಲ್ಲಿ ವಾಸ ಮಾಡದಂತೆ ಮನವಿ

ಮುಂಡಗೋಡ: ತಾಲೂಕಿನಲ್ಲಿ ನಿರಂತರ ಮಳೆ ಹಿನ್ನೆಲೆ ತಾಲೂಕಾಡಳಿತದಿಂದ ಸಾರ್ವಜನಿಕರಿಗೆ ಹಲವು ಮುನ್ನೆಚ್ಚರಿಕೆಯ ಪ್ರಕಟಣೆ ನೀಡಲಾಗಿದೆ. ತಾಲೂಕಿನಾದ್ಯಂತ, ಸದ್ಯ ನಿರಂತರ ಮಳೆ ಆಗುತ್ತಿರುವ ಕಾರಣ ತಾಲೂಕಿನ ಗ್ರಾಮಗಳ ಮತ್ತು ಮುಂಡಗೋಡ ಪಟ್ಟಣದ ಸಾರ್ವಜನಿಕರು ತಮ್ಮ ಮನೆ ಮಳೆಯಿಂದ ಸೋರುವ ಹಾಗೂ ಬೀಳುವ ಶಿಥಿಲ ಸ್ಥಿತಿಯಲ್ಲಿ ಇದ್ದಲ್ಲಿ ಅಂತಹ ಮನೆಯಲ್ಲಿ ವಾಸ ಮಾಡಬಾರದು.ಸುರಕ್ಷಿತ ಮನೆಗಳಿಗೆ ಸ್ಥಳಾಂತರವಾಗಬೇಕು ಅಥವಾ ಸಂಬಂಧಿಕರ ಮನೆಗಳಿಗೆ ಹೋಗಬೇಕು. ನಿಮ್ಮ ಮನೆ ಮಳೆಯಿಂದ ಹಾನಿ ಆಗಿದ್ದಲ್ಲಿ, ಸೋರುವ ಶಿಥಿಲ ಸ್ಥಿತಿಯಲ್ಲಿ ಇದ್ದಲ್ಲಿ ಕೂಡಲೇ ಪಿಡಿಒ ಅಥವಾ ಗ್ರಾಮ ಆಡಳಿತ ಅಧಿಕಾರಿ ಗಮನಕ್ಕೆ ತರಬೇಕು.ನಿರಂತರ ಮಳೆಯಿಂದ ಮನೆಗೆ ಹಾನಿ ಆಗಿದ್ದಲ್ಲಿ ಅಂಥವರಿಗೆ ವಾಸಕ್ಕೆ ಬೇರೆ ವ್ಯವಸ್ಥೆ ಮಾಡಲಾಗುವುದು. ಈ ಕುರಿತು ಸ್ಥಳಿಯ ಅಧಿಕಾರಿಗಳ ಗಮನಕ್ಕೆ ತರಬೇಕು. ಅತಿವೃಷ್ಟಿಯ ಕಾರಣ ಸಮಸ್ಯೆಗಳನ್ನು ಹೊಂದಿದ್ದರೆ, ಮುಂಡಗೋಡ ತಹಸೀಲ್ದಾರ್ ಕಚೇರಿಯ ಸಹಾಯವಾಣಿ ೦೮೩೦೧- ೨೨೨೧೨೨ ಸಂಪರ್ಕಿಸಬೇಕು. ತಹಸೀಲ್ದಾರ್ ಅವರ ಮೊ. ೯೧೬೪೮೭೪೨೩೧ಕ್ಕೆ ಕರೆ ಮಾಡಬಹುದು ಎಂದು ತಹಸೀಲ್ದಾರ್ ಶಂಕರ ಗೌಡಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ, ಟಿ.ವೈ. ದಾಸನಕೊಪ್ಪ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಚಂದ್ರಶೇಖರ್ ಅವರು ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.