ನಾಳೆ ರೈತರ ಬೃಹತ್ ಸಮಾವೇಶ: ಧನಂಜಯ್‌ ಆರಾಧ್ಯ

| Published : Jan 17 2024, 01:47 AM IST

ಸಾರಾಂಶ

ತುಮಕೂರಿನಲ್ಲಿ ನಾಳೆ ರೈತರ ಬೃಹತ್‌ ಸಮಾವೇಶ

ಕನ್ನಡಪ್ರಭ ವಾರ್ತೆ ತುಮಕೂರು

ಕೊಬ್ಬರಿ ಖರೀದಿಗೆ ನೆಪೆಡ್ ಕೇಂದ್ರ ತೆರೆಯಬೇಕು, 15 ಸಾವಿರ ಕ್ವಿಂಟಲ್ ದರದಲ್ಲಿ ಕೊಬ್ಬರಿ ಖರೀದಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ರೈತರು ಹಮ್ಮಿಕೊಂಡಿರುವ ಆಹೋರಾತ್ರಿ ಧರಣಿಗೆ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ದೊರೆಯದ ಹಿನ್ನೆಲೆಯಲ್ಲಿ ಜ.18 ರಂದು ಬೃಹತ್ ರೈತರ ಸಮಾವೇಶ ಹಮ್ಮಿಕೊಂಡಿರುವುದಾಗಿ ರೈತ ಸಂಘದ ಜಿಲ್ಲಾಧ್ಯಕ್ಷ ಧನಂಜಯ್ ಆರಾಧ್ಯ ತಿಳಿಸಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಹಮ್ಮಿಕೊಂಡಿರುವ ಧರಣಿ ಸ್ಥಳದಲ್ಲಿ ರೈತರನ್ನು ಉದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಈಗಾಗಲೇ ಕ್ವಿಂಟಲ್ ಕೊಬ್ಬರಿಯನ್ನು 12 ಸಾವಿರ ರು.ಗಳಿಗೆ ಖರೀದಿಸಲು ಆದೇಶ ಮಾಡಿದೆ. ಆದರೆ ರಾಜ್ಯ ಸರ್ಕಾರ ಒಂದು ಕ್ವಿಂಟಲ್ ಕೊಬ್ಬರಿಗೆ 3 ಸಾವಿರ ರು. ಪ್ರೋತ್ಸಾಹ ಧನ ನೀಡಬೇಕೆಂಬ ವಿಚಾರದಲ್ಲಿ ಇದುವರೆಗೂ ಯಾವುದೇ ನಿರ್ಣಯಕ್ಕೆ ಬಂದಿಲ್ಲ. ಹಾಗಾಗಿ ಜ.18 ರಂದು ಕೊಬ್ಬರಿ ಬೆಳೆಯುವ ಎಲ್ಲಾ ಪ್ರದೇಶಗಳ ರೈತರೊಂದಿಗೆ ಸೇರಿ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಬೃಹತ್ ಸಮಾವೇಶ ನಡೆಸಲು ತೀರ್ಮಾನಿಸಲಾಗಿದೆ ಎಂದರು.

ಕಳೆದ 9 ದಿನಗಳಿಂದ ರೈತ ಮುಖಂಡರು ಮನೆ, ಮಠ ಬಿಟ್ಟು, ಹಬ್ಬದ ದಿನವೂ ಆಹೋರಾತ್ರಿ ಧರಣಿ ನಡೆಸುತ್ತಿದ್ದೇವೆ. ಮನೆಗಳಲ್ಲಿ ದನ, ಕರುಗಳಿಗೆ ಹುಲ್ಲು, ನೀರು ನೀಡುವವರು ಇಲ್ಲದಂತಾಗಿದೆ. ಸರ್ಕಾರ ಬಹಳ ಹಠಮಾರಿ ಧೋರಣೆ ಅನುಸರಿಸುತ್ತಿದೆ. ಹಾಗಾಗಿ ಅನಿವಾರ್ಯವಾಗಿ ಕೊಬ್ಬರಿ ಬೆಳೆಯುವ ರಾಜ್ಯದ ಸುಮಾರು 20 ಜಿಲ್ಲೆಗಳ ಸಾವಿರಾರು ರೈತರು ಜ.18 ರಂದು ತಾವು ಕೃಷಿಗೆ ಬಳಸುವ ಟ್ರಾಕ್ಟರ್, ಟ್ರಿಲ್ಲರ್ ಇನ್ನಿತರ ವಾಹನಗಳ ಮೂಲಕ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಅಂದು 10 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಸೇರುವ ರೈತರು ತಮ್ಮ ವಾಹನಗಳೊಂದಿಗೆ ಮಂಡಿಪೇಟೆ ರಸ್ತೆ, ಜೆ.ಸಿ.ರಸ್ತೆ, ಬಿ.ಎಚ್. ರಸ್ತೆ ಮೂಲಕ ಬಟವಾಡಿ ತಲುಪಿ, ಅಲ್ಲಿಂದ ಹಳೆಯ ರಾಷ್ಟ್ರೀಯ ಹೆದ್ದಾರಿ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಯವರಗೆ ಮೆರವಣಿಗೆ ನಡೆಸಲಿದ್ದೇವೆ. ಸೂಕ್ತ ಮತ್ತು ವೈಜ್ಞಾನಿಕ ಬೆಂಬಲ ಬೆಲೆ ಪಡೆಯುವುದು ನಮ್ಮ ಹಕ್ಕು ಹಾಗಾಗಿ ಹೋರಾಟವನ್ನು ತೀವ್ರಗೊಳಿಸಲು ಮುಂದಾಗಿರುವುದಾಗಿ ಧನಂಜಯ್ ಆರಾಧ್ಯ ತಿಳಿಸಿದರು.

ಈ ವೇಳೆ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆಂಕೆರೆ ಸತೀಶ್, ಲೋಕೇಶ್ ಕೆ.ವಿ. ಸೇರಿದಂತೆ ಹಲವರು ಉಪಸ್ಥಿತರಿದ್ದರು.