ಕನ್ನಡಪ್ರಭ ವಾರ್ತೆ ತಿಪಟೂರು
ತಾಲೂಕಿನಲ್ಲಿ ಖಾತೆದಾರರು ಮತ್ತು ಬಗರ್ ಹುಕುಂ ಸಾಗುವಳಿದಾರ ರೈತರ ಮೇಲೆ ಅರಣ್ಯ ಇಲಾಖೆಯ ದೌರ್ಜನ್ಯ ಖಂಡಿಸಿ ರೈತರ ಬೃಹತ್ ಪ್ರತಿಭಟನೆ, ಕಾಲ್ನಡಿಗೆ ಜಾಥಾ ಜೂ. ೨೨ರ ಸೋಮವಾರ ಬೆಳಗ್ಗೆ ೧೦ ಗಂಟೆಗೆ ಈರಲಗೆರೆ ಗ್ರಾಮದಿಂದ ಉಪ ವಿಭಾಗಾಧಿಕಾರಿಗಳ ಕಚೇರಿವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಮುಖಂಡರಾದ ತಿಮ್ಲಾಪುರ ದೇವರಾಜು ಹೇಳಿದರು.ಈ ಸಂಬಂಧ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ತಾಲೂಕಿನ ರೈತರು ಸಾಕಷ್ಟು ಜಮೀನುಗಳ ದಾಖಲಾತಿ ವಿಷಯದಲ್ಲಿ ಸಮಸ್ಯೆಗಳಿಂದ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಇಲ್ಲಿನ ವಾಣಿಜ್ಯ ಬೆಳೆ ತೆಂಗು ನಾನಾ ಕಾರಣಗಳಿಂದ ನೆಲಕಚ್ಚಿದೆ. ಹಾಗಾಗಿ ಜೀವನೋಪಾಯಕ್ಕಾಗಿ ನಗರಗಳು ಸೇರಿದಂತೆ ವಿವಿಧ ಭಾಗಗಳಿಗೆ ಕಡಿಮೆ ಕೂಲಿಯ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಸಾಕಷ್ಟು ಯೋಜನೆಗಳಿಗೆ ಪುಡಿಗಾಸಿನ ಪರಿಹಾರದಲ್ಲಿ ರೈತರ ಭೂಮಿಯನ್ನು ಸರ್ಕಾರ ಸ್ವಾಧೀನ ಪಡಿಸಿಕೊಂಡು ಭೂಹೀನ ರೈತರನ್ನಾಗಿಸಿದೆ. ತಾಲೂಕಿನ ಅರಣ್ಯ ಇಲಾಖೆಯು ಸಹ ರೈತರ ಭೂಮಿಯನ್ನು ಕಬಳಿಸಲು ಹುನ್ನಾರ ಮಾಡುತ್ತಿದೆ. ಅರಣ್ಯ ಮತ್ತು ಕಂದಾಯ ಇಲಾಖೆಗಳ ಮಧ್ಯೆ ಇರುವ ಗೊಂದಲಗಳನ್ನು ಸರ್ಕಾರ ಬಗೆಹರಿಸುತ್ತಿಲ್ಲ. ತಾಲೂಕಿನ ಕಿಬ್ಬನಹಳ್ಳಿ ಹೋಬಳಿಯ ಕಾಗೆಹಳ್ಳ ಸರ್ವೆ ಸಂಖ್ಯೆಯಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೆ ಅರಣ್ಯ ಇಲಾಖೆಯು ಅನಾವಶ್ಯಕ ನೋಟಿಸ್ ಗಳನ್ನು ಜಾರಿ ಮಾಡುವುದರೊಂದಿಗೆ ಬೆದರಿಕೆ ಒಡ್ಡಿದ್ದು ಇವೆಲ್ಲ ನಿಲ್ಲಬೇಕಾಗಿರುವುದರಿಂದ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಕರ್ನಾಟಕ ಪ್ರಾಂತ ರೈತ ಸಂಘದ ಸಂಚಾಲಕ ಚನ್ನಬಸವಣ್ಣ ಮಾತನಾಡಿ ತಾಲೂಕಿನಲ್ಲಿ ಕಳೆದ ೩೫ ರಿಂದ ೪೦ ವರ್ಷ ರೈತರು ಸಾಗುವಳಿ ಮಾಡಿಕೊಂಡು ಬಂದಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ರೈತರ ಪರವಾಗಿ ಇರುತ್ತೇವೆ ಎಂದು ಹೇಳಿದರು. ಆದರೆ ಈಗ ದೊಡ್ಡ ದೊಡ್ಡ ಕಾರ್ಪೊರೇಟ್ ಕಂಪನಿಗೆ ಭೂಮಿ ನೀಡಲು ರೈತರನ್ನು ಒಕ್ಕಲಿಬ್ಬಿಸುತ್ತಿದ್ದಾರೆ. ಅರಣ್ಯ ಇಲಾಖೆ ಚಿರತೆಯಂತೆ ದೌರ್ಜನ್ಯ ದಬ್ಬಾಳಿಕೆ ಮಾಡುತ್ತಿದ್ದಾರೆ. ಈಗಾಗಲೇ ಬೆಸ್ಕಾಂ ಖಾಸಗೀಕರಣ ಮಾಡಲು ರಾಜ್ಯ ಸರ್ಕಾರ ಹೊರಟಿದೆ. ಇದರಿಂದ ಮೂಲ ಸೌಕರ್ಯಗಳು ಬಡವರಿಗೆ ಸಿಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಅವರು, ಉತ್ಪಾದಕತೆ ಇಲ್ಲದ ಸಮಯ ಅನಾವಶ್ಯಕ ಖರ್ಚು ಜೊತೆಗೆ ಅನಿಶ್ಚಿತತೆಯಿಂದ ಕೂಡಿರುವ ಬದುಕು ಎಲ್ಲಾ ಸೇರಿ ರೈತರ ಜೀವನವೇ ದುಸ್ತರವಾಗುತ್ತಿದೆ. ತಾಲೂಕಿನ ರೈತರ ಸಮಸ್ಯೆಗಳ ವಿರುದ್ಧ ಸಂಘಟಿತ ಹೋರಾಟ ಮಾಡಲಾಗುತ್ತಿದೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ರೈತ ಸಂಘದ ಮುಖಂಡರಾದ ರಾಜಮ್ಮ, ರಂಗಧಾಮಯ್ಯ, ಸಿದ್ದಪ್ಪ, ಅಲ್ಲ ಬಕಾಶ್, ಶ್ರೀಕಾಂತ್ ಕೇಳಹಟ್ಟಿ, ಬಿಳಿಗೆರೆ ನಾಗೇಶ್, ಬಸವರಾಜು ಮತ್ತಿತರರು ಇದ್ದರು.