ಸಾರಾಂಶ
ಬೆಂಗಳೂರು : ನಗರದ ಕಾಡುಗೋಡಿ ಮೀಸಲು ಅರಣ್ಯ ಪ್ರದೇಶದಲ್ಲಿ ಭಾನುವಾರ ದೊಡ್ಡ ಪ್ರಮಾಣದಲ್ಲಿ ಬೆಂಕಿ ಹೊತ್ತಿಕೊಂಡು ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ವೈಟ್‌ಫೀಲ್ಡ್ ಅಗ್ನಿಶಾಮಕ ಠಾಣೆಯಿಂದ ನಾಲ್ಕೈದು ಅಗ್ನಿಶಾಮಕ ವಾಹನಗಳು ಮತ್ತು ಸಿಬ್ಬಂದಿ ಸುಮಾರು 7 ತಾಸುಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದರು. ಬೆಂಕಿಯ ಜೊತೆಗಿನ ದಟ್ಟವಾದ ಕಪ್ಪುಹೊಗೆ ಕೆಲವು ಕಿ.ಮೀ ದೂರದವರೆಗೆ ಕಾಣಿಸುತ್ತಿತ್ತು. ಅನೇಕರು ಪೋಟೋ, ವಿಡಿಯೋ ಸೆರೆ ಹಿಡಿದು ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಐಟಿಪಿಎಲ್ ಎದುರಿನ ಅರಣ್ಯದಲ್ಲಿ ಬೆಂಕಿ ಹೊತ್ತಿಕೊಂಡಿರುವ ಬಗ್ಗೆ ಮಧ್ಯಾಹ್ನ 2 ಗಂಟೆ 6 ನಿಮಿಷಕ್ಕೆ ಕರೆ ಬಂದಿತ್ತು. ಕೂಡಲೇ ನಾಲ್ಕೈದು ಅಗ್ನಿಶಾಮಕ ವಾಹನಗಳು ಹಾಗೂ ಬೇರೆ ಬೇರೆ ತಂಡಗಳಲ್ಲಿ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ತೆರಳಿ ಬೆಂಕಿ ನಂದಿಸುವ ಕಾರ್ಯಾಚರಣೆ ಆರಂಭಿಸಿದರು. ಕಾಡಿನ ಬೇರೆ ಬೇರೆ ಕಡೆಗಳಲ್ಲಿ ಚದುರಿದಂತೆ ಬೆಂಕಿ ಹೊತ್ತಿಕೊಂಡಿತ್ತು. ಹೀಗಾಗಿ, ನಂದಿಸಲು ಹೆಚ್ಚು ಸಮಯ ತೆಗೆದುಕೊಂಡಿದೆ. ಬೇಸಿಗೆ ಬಿಸಿಲಿನ ಕಾರಣ ಬೆಂಕಿಯ ತೀವ್ರತೆ ಹೆಚ್ಚಾಗಿತ್ತು. ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಆದರೆ, ಕುರುಚಲು ಗಿಡ, ಮರಗಳು ಬೆಂಕಿಗೆ ಆಹುತಿಯಾಗಿವೆ ಎಂದು ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಮಾಹಿತಿ ನೀಡಿದರು.
ರೈಲ್ವೆ ಉತ್ಪಾದನಾ ಘಟಕ ಸೇರಿದಂತೆ ಅನೇಕ ಕಚೇರಿ, ಕಾರ್ಖಾನೆಗಳು ಸಮೀಪದಲ್ಲೇ ಇವೆ. ಬೆಂಕಿ ಹೊತ್ತಿಕೊಳ್ಳಲು ಕಾರಣ ಏನು ಎಂದು ಗೊತ್ತಾಗಿಲ್ಲ. ಜನರು ಧೂಮಪಾನಕ್ಕೆ ಕಡ್ಡಿ ಗೀರಿ ಬಿಸಾಡಿರುವುದರಿಂದ, ಬೇಸಿಗೆ ಕಾರಣ ನೈಸರ್ಗಿಕವಾಗಿ ಮತ್ತಿತರ ಕಾರಣಗಳಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಸಿಬ್ಬಂದಿ ಹೇಳಿದರು.
ಜಾಲತಾಣಗಳಲ್ಲಿ ಬೆಂಕಿ ಅನಾಹುತದ ಬಗ್ಗೆ ಬಗೆ ಬಗೆಯ ಅಭಿಪ್ರಾಯಗಳು ವ್ಯಕ್ತವಾಗಿದ್ದು, ರಿಯಲ್ ಎಸ್ಟೇಟ್ ಮಾಫಿಯಾಗಳು ಬೆಂಕಿ ಘಟನೆಯ ಹಿಂದೆ ಇರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.