ಒಳ ಮೀಸಲಾತಿ ಜಾರಿಗಾಗಿ ಬೃಹತ್ ಬೈಕ್‌ ರ್‍ಯಾಲಿ: ಬೂದಿತಿಟ್ಟು ರಾಜೇಂದ್ರ

| Published : Oct 10 2024, 02:25 AM IST

ಒಳ ಮೀಸಲಾತಿ ಜಾರಿಗಾಗಿ ಬೃಹತ್ ಬೈಕ್‌ ರ್‍ಯಾಲಿ: ಬೂದಿತಿಟ್ಟು ರಾಜೇಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

ಚಾಮರಾಜನಗರದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಪರಿಶಿಷ್ಟ ಜಾತಿಗಳ ಮೀಸಲಾತಿ ಜಾರಿ ಹೋರಾಟ ಸಮಿತಿಗಳ ಒಕ್ಕೂಟದ ಕಾನೂನು ಸಲಹೆಗಾರ ಹಾಗೂ ವಕೀಲರಾದ ಬೂದಿತಿಟ್ಟು ರಾಜೇಂದ್ರ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ರಾಜ್ಯ ಸರ್ಕಾರವನ್ನು ಎಚ್ಚರಿಸಲು ಪರಿಶಿಷ್ಟ ಜಾತಿಗಳ ಮೀಸಲಾತಿ ಜಾರಿ ಹೋರಾಟ ಸಮಿತಿಗಳ ಒಕ್ಕೂಟ ಕೊಳ್ಳೇಗಾಲ ಮತ್ತು ಹನೂರು ತಾಲೂಕು ಸಮಿತಿ ವತಿಯಿಂದ ಅ.14 ರಂದು ಒಳ ಮೀಸಲಾತಿ ಜಾರಿಗಾಗಿ ಬೃಹತ್ ಬೈಕ್ ರ್‍ಯಾಲಿ ಆಯೋಜಿಸಲಾಗಿದೆ ಎಂದು ಒಕ್ಕೂಟ ಕಾನೂನು ಸಲಹೆಗಾರರು, ವಕೀಲರಾದ ಬೂದಿತಿಟ್ಟು ರಾಜೇಂದ್ರ ಹೇಳಿದರು.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನಂತೆ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಜಾರಿ ಮಾಡಲು ಆಯಾಯ ರಾಜ್ಯಗಳ ಪರಮಾಧಿಕಾರವಿದೆ ಎಂದು ಐತಿಹಾಸಿಕ ತೀರ್ಪು ನೀಡಿದ್ದು, ಅದರಂತೆ ರಾಜ್ಯ ಸರ್ಕಾರ ಒಳ ಮೀಸಲಾತಿ ಜಾರಿಗೊಳಿಸಲು ಸರ್ಕಾರದ ಗಮನ ಸೆಳೆಯುವ ಸಲುವಾಗಿ ಪರಿಶಿಷ್ಟ ಜಾತಿಗಳ ಮೀಸಲಾತಿ ಜಾರಿ ಹೋರಾಟ ಸಮಿತಿಗಳ ಒಕ್ಕೂಟ ಕೊಳ್ಳೇಗಾಲ ಮತ್ತು ಹನೂರು ತಾಲೂಕು ಸಮಿತಿ ವತಿಯಿಂದ ಅ.14 ರಂದು ಒಳ ಮೀಸಲಾತಿ ಜಾರಿಗಾಗಿ ಬೃಹತ್ ಬೈಕ್ ರ್‍ಯಾಲಿ ಆಯೋಜಿಸಲಾಗಿದೆ. ಈ ರ್‍ಯಾಲಿಯಲ್ಲಿ ವಕೀಲರು, ಸಮಾಜದ ಮುಖಂಡರು ಯುವಕರು ವಿವಿಧ ಸಂಘ ಸಂಸ್ಥೆ ಪದಾಧಿಕಾರಿಗಳು ಸಮುದಾಯ ಗಣ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ. ಸಮುದಾಯದ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶ್ವಸಿಗೊಳಿಸಿಕೊಡಬೇಕು ಎಂದು ಮನವಿ ಮಾಡಿದರು.ಕೊಳ್ಳೇಗಾಲದಲ್ಲಿ ಬಿ.ಆ‌ರ್. ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಅಲ್ಲಿಂದ ಬೈಕ್ ರ್‍ಯಾಲಿ ಹೊರಟು ಯಳಂದೂರು, ಸಂತೇಮರಹಳ್ಳಿ ಮಾರ್ಗವಾಗಿ ಭುವನೇಶ್ವರಿ ವೃತ್ತದ ಕಡೆಯಿಂದ ಜಿಲ್ಲಾಡಳಿತ ಭವನಕ್ಕೆ ತೆರಳಿ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದರು. ಸಮುದಾಯದವರು 30 ವರ್ಷಗಳಿಂದ ಒಳ ಮೀಸಲಾತಿಗಾಗಿ ಹೋರಾಟ ಮಾಡಿಕೊಂಡು ಬರಲಾಗಿದ್ದು, ಮುಖ್ಯಮಂತ್ರಿಗಳು ದ್ವಂದ್ವ ನೀತಿ ತಾಳದೆ ಮುಂದಿನ ಸಚಿವ ಸಂಪುಟದಲ್ಲಿ ನ್ಯಾಯಮೂರ್ತಿ ಎ.ಜೆ.ಸದಾಸಿವ ಆಯೋಗದ ವರದಿ ಅಂಗೀಕರಿಸಿ ಒಳ ಮೀಸಲಾತಿ ಜಾರಿ ಮಾಡಬೇಕು ಎಂದು ರಾಜೇಂದ್ರ ಒತ್ತಾಯಿಸಿದರು. ಪತ್ರಿಕಾಗೋಷ್ಠಿಯಲ್ಲಿ ಪಿ.ಶಿವಮಲ್ಲು, ಬಿ.ಬಸವರಾಜು ದ್ವಾರ್ಕಿ, ರವಳಪ್ಪ, ಎನ್‌.ರಾಚಪ್ಪ, ಸಿ.ಮಧು, ಹಾಜರಿದ್ದರು.