ಅರಮನೆಯಲ್ಲಿ ಸಂಗೀತ ಲಹರಿ.

| Published : Oct 10 2024, 02:24 AM IST

ಸಾರಾಂಶ

ಉಸ್ತಾದ್ ಫಯಾಜ್ ಖಾನ್ ಗಾಯನ ಮತ್ತು ಉಸ್ತಾದ್ ಶಫೀಕ್ ಖಾನ್ ಸಿತಾರ್ ಜುಗಲ್ ಬಂದಿ

ಕನ್ನಡಪ್ರಭ ವಾರ್ತೆ ಮೈಸೂರುಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ ಮಹೋತ್ಸವ ಅಂಗವಾಗಿ ಅರಮನೆ ಮುಂಭಾಗದ ವೇದಿಕೆಯಲ್ಲಿ ಆಯೋಜಿಸಿರುವ ಸಾಂಸ್ಕೃತಿಕ ಕಾರ್ಯಕ್ರಮವು ಸಂಗೀತಾಸಕ್ತರಿಗೆ ರಸದೌತಣ ನೀಡಿತು.ಉಸ್ತಾದ್ ಫಯಾಜ್ ಖಾನ್ ಗಾಯನ ಮತ್ತು ಉಸ್ತಾದ್ ಶಫೀಕ್ ಖಾನ್ ಸಿತಾರ್ ಜುಗಲ್ ಬಂದಿಯು ಕೇಳುಗರ ಮೈ ರೋಮಾಂಚನಗೊಳಿಸಿತು. ಡಾ. ಜ್ಯೋಸ್ತ್ನ ಶ್ರೀಕಾಂತ್ ಮತ್ತು ತಂಡವು ಪ್ರಸ್ತುತಪಡಿಸಿದ ವೀಣಾವಾದನ ಸಂಗೀತಪ್ರಿಯರಿಗೆ ಸಂತಸಗೊಳಿಸಿತು.ಪದ್ಮಶ್ರೀ, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಸುಧಾ ರಘುನಾಥನ್ ಅವರ ಧ್ವನಿಯಲ್ಲಿ ಮೂಡಿ ಬಂದ ಕರ್ನಾಟಕ ಶಾಸ್ತ್ರೀಯ ಸಂಗೀತವು ಸಂಗೀತಾಸಕ್ತರನ್ನು ಮಂತ್ರಮುಗ್ಧರನ್ನಾಗಿಸಿತು.ಇದಕ್ಕೂ ಮುನ್ನ ಮಾವುತರು ಮತ್ತು ಕಾವಾಡಿಗಳ ಮಕ್ಕಳ ನೃತ್ಯ ನವ್ವಾಲೆ, ಅಕ್ಬರ್ ಮತ್ತು ತಂಡದ ಸುಗಮ ಸಂಗೀತ, ಚೈತನ್ಯ ಷಡಕ್ಷರಿ ಮತ್ತು ತಂಡವು ಪ್ರಸ್ತುತಪಡಿಸಿದ ಭರತನಾಟ್ಯವು ರಂಜಿಸಿತು. ವಿವಿಧೆಡೆ ಸಂಗೀತ ಸರಮಾಲೆಜಗನ್ಮೋಹನ ಅರಮನೆ ವೇದಿಕೆಯಲ್ಲಿ ಎಂ. ಸುಮೇದಾ ತಂಡದಿಂದ ಸುಗಮ ಸಂಗೀತ, ಡಿ.ಕೆ. ಮಾಧವಿ ಅವರಿಂದ ಭರತನಾಟ್ಯ, ಬಿ.ಆರ್. ಪೋಲಿಸ್ ಪಾಟೀಲ ತಂಡ ಲಾವಣಿ ಪದಗಳು, ವಿದ್ಯಾ ಮನೋಜ್ ಅವರ ಭರತನಾಟ್ಯ, ನವೀನ್ ಅಳಗಂಜಿ ತಂಡದ ಸುಗಮ ಸಂಗೀತ ಕಾರ್ಯಕ್ರಮ ಜರುಗಿತು.ಕಲಾಮಂದಿರದಲ್ಲಿ ಸುಗ್ಗಿ ಕುಣಿತ, ತಂಬೂರಿ ಜಾನಪದ, ಎ.ಪಿ. ಜಗದೀಶ್ ತಂಡದಿಂದ ಜನಪದ ಗಾಯನ, ಭಾವನಾ ಗಣೇಶ್ ತಂಡದ ಭರತನಾಟ್ಯ, ರೇಖಾ ಅಪ್ಪಾರಾವ ಸೌದಿ ಅವರಿಂದ ಸುಗಮ ಸಂಗೀತ ಕಾರ್ಯಕ್ರಮವು ಕೇಳುಗರನ್ನು ರಂಜಿಸಿತು.ಗಾನಭಾರತಿ ವೇದಿಕೆಯಲ್ಲಿ ಜನಪದ ಮುಳ್ಳುಕುಣಿತ, ಭೀಮರಾಯ ಶರಣಪ್ಪ ಭಜಂತ್ರಿ ಅವರ ಶಹನಾಯಿ ವಾದನ, ವಚನಶ್ರೀ ತಂಡದ ಸುಗಮ ಸಂಗೀತ, ನಿಖಿಲಾ ಎಂ. ರಾವ್ ತಂಡದಿಂದ ಭರತನಾಟ್ಯ, ಪಿ. ಸೋಮಶೇಖರ್ ತಂಡದ ಜಾನಪದ ಗಾಯನ ನಡೆಯಿತು.ನಾದಬ್ರಹ್ಮ ಸಂಗೀತಸಭಾ ವೇದಿಕೆಯಲ್ಲಿ ರತ್ನಮ್ಮ ತಂಡದ ಮಂಗಳವಾದ್ಯ, ಮೋಹನ ದೇವಯ್ಯ ತಂಡದಿಂದ ಸುಗಮ ಸಂಗೀತ, ಹಾಲಕ್ಕಿ ಸುಗ್ಗಿ ಕುಣಿತ, ಶ್ರೇಯಾ ಹಂದಿಗೋಳ ತಂಡದಿಂದ ಶಾಸ್ತ್ರೀಯ ಸಂಗೀತ, ಗುರುಬಸವಗೌಡ ಪಾಟೀಲ ಸುಗಮ ಸಂಗೀತ, ಕೃಷ್ಣನೃತ್ಯ ಶಾಲೆಯಿಂದ ಭರತನಾಟ್ಯ ಪ್ರದರ್ಶನವಾಯಿತು.ಚಿಕ್ಕಗಡಿಯಾರ ವೇದಿಕೆಯಲ್ಲಿ ಡೊಳ್ಳುಕುಣಿತ, ಎಚ್.ವಿ. ಲೋಕೇಶ್ ತಂಡದ ಸ್ಯಾಕ್ಸೋಫೋನ್ ವಾದನ, ಟಿ.ಎನ್. ರಾಜೇಶ್ವರಿ ತಂಡದ ಕೋಲಾಟ, ಕೃಷ್ಣಪ್ಪ ತಂಡದ ಹೋರಾಟದ ಹಾಡುಗಳು, ನಾಗಮ್ಮ ತಂಡದ ಸುರಗಿ ಪದ, ಜೀವನಸಾಬ ವಾಲಿಕಾರ್ ತಂಡದ ಜಾನಪದ ಗಾಯನ ಜರುಗಿತು.ಇನ್ನೂ ಪುರಭವನದಲ್ಲಿ ಕೃಷ್ಣ ಸಂಧಾನ, ಕುರುಕ್ಷೇತ್ರ ಪೌರಾಣಿಕ ನಾಟಕ, ವೀರ ಸಿಂಧೂರ ಲಕ್ಷ್ಮಣ ಐತಿಹಾಸಿಕ ನಾಟಕ ಪ್ರದರ್ಶನವಾಯಿತು. ಕಿರು ರಂಗಮಂದಿರದಲ್ಲಿ ಶ್ಯಾಲಿನಿ ತಂಡದ ಸಮೂಹ ಶಾಸ್ತ್ರೀಯ ನೃತ್ಯ, ಜ್ಯೋತಿ ಪಾಪುಲೆ ನಾಟಕ, ಮುಸ್ಸಂಜೆಯಲ್ಲಿ ನಡೆದ ಘಟನೆ ಎಂಬ ನಾಟಕ ಪ್ರದರ್ಶನವಾಯಿತು.ರಾಮಕೃಷ್ಣನಗರದಲ್ಲಿರುವ ರಮಾಗೋವಿಂದ ರಂಗಮಂದಿರದಲ್ಲಿ ಸಿದ್ದೇಶ್ವರ ಬದನವಾಳು ಅವರಿಂದ ರಂಗಗೀತೆ, ಸೌಹಾರ್ದ ಸಾಂಸ್ಕೃತಿಕ ಕಲಾಸಂಘದಿಂದ ಜನಪದ ಗಾಯನ, ತೆರೆಗಳು ಎಂಬ ನಾಟಕ ಹಾಗೂ ನಟನ ರಂಗಮಂದಿರದಲ್ಲಿ ಜಗದೀಶ್ ತಂಡದಿಂದ ಸುಗಮ ಸಂಗೀತ ಮತ್ತು ಗಜಾನನ ಜನಪದ ನಾಟ್ಯ ಸಂಘದಿಂದ ದೇವ ಗೆದ್ದ ಮಾನವ ಎಂಬ ನಾಟಕ ಪ್ರಸ್ತುತಪಡಿಸಿದರು.