ಕನ್ನಡಪ್ರಭ ವಾರ್ತೆ ಕಾರವಾರ
ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಕ್ರಿಮ್ಸ್) ಸಮುದಾಯ ವೈದ್ಯಕೀಯ ವಿಭಾಗ ಹಾಗೂ ಅಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರ ಇವುಗಳ ಸಹಯೋಗದಲ್ಲಿ ಕಾರವಾರ ತಾಲೂಕಿನ ಅಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶನಿವಾರ ಆಯೋಜಿಸಲಾದ ಬೃಹತ್ ಉಚಿತ ಆರೋಗ್ಯ ಶಿಬಿರವು ಯಶಸ್ವಿಯಾಗಿ ನಡೆಯಿತು.ಕ್ರಿಮ್ಸ್ ಡೀನ್ ಮತ್ತು ನಿರ್ದೇಶಕಿ ಡಾ. ಪೂರ್ಣಿಮಾ ಆರ್.ಟಿ. ಶಿಬಿರ ಉದ್ಘಾಟಿಸಿದರು. ಶಿಬಿರದಲ್ಲಿ ಒಟ್ಟು 210 ಫಲಾನುಭವಿಗಳು ಪಾಲ್ಗೊಂಡು ಉಚಿತ ಆರೋಗ್ಯ ಸೇವೆಯ ಸೌಲಭ್ಯ ಪಡೆದುಕೊಂಡರು. ಕಾರವಾರ ಕ್ರಿಮ್ಸ್ ನ 12 ವಿಭಾಗಗಳ ತಜ್ಞ ವೈದ್ಯರು ಶಿಬಿರದಲ್ಲಿ ರೋಗಿಗಳಿಗೆ ತಜ್ಞರ ಸಮಾಲೋಚನೆ, ರೋಗನಿರ್ಣಯ, ಚಿಕಿತ್ಸೆ, ಆರೋಗ್ಯ ಶಿಕ್ಷಣ ಹಾಗೂ ಅಗತ್ಯವಿದ್ದ ಕಡೆಗಳಲ್ಲಿ ಹೆಚ್ಚಿನ ಚಿಕಿತ್ಸೆಗೆ ಶಿಫಾರಸು (ರೆಫರಲ್) ಸೇವೆ ಒದಗಿಸಿದರು. ಗ್ರಾಮೀಣ ಜನರಿಗೆ ತಮ್ಮ ಮನೆ ಬಾಗಿಲಲ್ಲೇ ತಜ್ಞ ವೈದ್ಯಕೀಯ ಸೇವೆಗಳನ್ನು ಪಡೆಯಲು ಈ ಶಿಬಿರವು ಅತ್ಯಮೂಲ್ಯ ಅವಕಾಶ ಕಲ್ಪಿಸಿತು.
ರಾಷ್ಟ್ರೀಯ ವೈದ್ಯಕೀಯ ಆಯೋಗವು, ಎಂಬಿಬಿಎಸ್ ವಿದ್ಯಾರ್ಥಿಗಳಿಗಾಗಿ ರೂಪಿಸಿರುವ ಸಾಮರ್ಥ್ಯ ಆಧಾರಿತ ವೈದ್ಯಕೀಯ ಶಿಕ್ಷಣ ಪಠ್ಯಕ್ರಮದ ಅಡಿಯಲ್ಲಿ ಕಡ್ಡಾಯಗೊಳಿಸಿರುವ, ಸಮುದಾಯ ಆಧಾರಿತ ನವೀನ ಕಲಿಕಾ ಉಪಕ್ರಮವಾದ ಕುಟುಂಬ ದತ್ತು ಕಾರ್ಯಕ್ರಮದ ಭಾಗವಾಗಿ ಈ ಶಿಬಿರ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಡಿ ಎಂಬಿಬಿಎಸ್ ವಿದ್ಯಾರ್ಥಿಗಳು ಸಮುದಾಯದ ಕುಟುಂಬಗಳನ್ನು ದತ್ತು ಪಡೆದು, ಅವರ ಆರೋಗ್ಯ ಅಗತ್ಯಗಳು, ಆರೋಗ್ಯದ ಮೇಲಾಗುವ ಸಾಮಾಜಿಕ ಪರಿಣಾಮಗಳು ಮತ್ತು ಅವರ ಆರೋಗ್ಯ ರಕ್ಷಣೆಯ ನಡವಳಿಕೆಗಳನ್ನು ಅರ್ಥಮಾಡಿಕೊಳ್ಳಲು ಅವರೊಂದಿಗೆ ನಿರಂತರವಾಗಿ ತೊಡಗಿಸಿಕೊಳ್ಳುತ್ತಾರೆ.ಕ್ರಿಮ್ಸ್ ನ ಎಂಬಿಬಿಎಸ್ ವಿದ್ಯಾರ್ಥಿಗಳು ಶಿಬಿರದಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ತಾವು ದತ್ತು ಪಡೆದ ಕುಟುಂಬಗಳ ಸದಸ್ಯರು ಶಿಬಿರಕ್ಕೆ ಬಂದು ಪ್ರಯೋಜನ ಪಡೆಯುವಂತೆ ಪ್ರೇರೇಪಿಸಿ, ಈ ಕುಟುಂಬಗಳಿಗೆ ಸಮಗ್ರ ತಜ್ಞ ವೈದ್ಯಕೀಯ ಸೇವೆಗಳು ದೊರೆಯುವಂತೆ ಮಾಡಿದರು.
ಕ್ರಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ. ನರೇಶ್ ಪಾವಸ್ಕರ್, ಸಮುದಾಯ ವೈದ್ಯಕೀಯ ವಿಭಾಗದ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥ ಡಾ. ಹೇಮಗಿರಿ ಕೆ., ಕ್ರಿಮ್ಸ್ ಸ್ಥಾನಿಕ ವೈದ್ಯಾಧಿಕಾರಿ ಡಾ. ವಿಜಯರಾಜ್ ಎನ್. ಸಮುದಾಯ ವೈದ್ಯಕೀಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ರಚನಾ ಎ. ಆರ್. ಅಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸುದೀತಾ ಪೆಡೇಕರ್ ಮತ್ತು ದೇಸಾಯಿ ಉಪಸ್ಥಿತರಿದ್ದರು.
ಡಾ. ಮಾಲತೇಶ್ ಉಚಿಡಿ ನಿರೂಪಿಸಿದರು, ಡಾ. ಗಿರೀಶ್ ಎಚ್.ಓ. ವಂದಿಸಿದರು.