ಸಾರಾಂಶ
ಮಂಗಳೂರು: ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ ಸಹಯೋಗದಲ್ಲಿ 10 ದಿನಗಳ ‘ಬೃಹತ್ ಖಾದಿ ಉತ್ಸವ’ ನಗರದ ಲಾಲ್‌ಬಾಗ್‌ನಲ್ಲಿರುವ ಸ್ಕೌಟ್ಸ್ ಗೈಡ್ಸ್ ಭವನದಲ್ಲಿ ಬುಧವಾರ ಆರಂಭಗೊಂಡಿದೆ. ಶಾಸಕ ವೇದವ್ಯಾಸ ಕಾಮತ್ ಉತ್ಸವಕ್ಕೆ ಚಾಲನೆ ನೀಡಿದರು.
ಮಂಡಳಿಯಿಂದ ಧನಸಹಾಯ ಪಡೆದಿರುವ ರಾಜ್ಯದ ವಿವಿಧೆಡೆಗಳ ಖಾದಿ ಮತ್ತು ಗ್ರಾಮೋದ್ಯೋಗ ಘಟಕಗಳಿಗೆ ಮಾರುಕಟ್ಟೆ ಸೌಲಭ್ಯ ಕಲ್ಪಿಸಲು ಈ ಉತ್ಸವ ಆಯೋಜಿಸಲಾಗಿದೆ. ಒಟ್ಟು 66 ಮಳಿಗೆಗಳನ್ನು ತೆರೆಯಲಾಗಿದ್ದು, ಖಾದಿಯ ವೈವಿಧ್ಯಮಯ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆ ಏರ್ಪಡಿಸಲಾಗಿದೆ.ಏನೇನಿದೆ?:ರಾಜ್ಯದ ವಿವಿಧೆಡೆಗಳ ಖಾದಿ ಸಂಘ ಸಂಸ್ಥೆಗಳು ಉತ್ಪಾದಿಸಿರುವ ಅರಳೆಖಾದಿ, ರೇಷ್ಮೆ ಖಾದಿ, ಉಣ್ಣೆ ಬಟ್ಟೆಗಳು, ಪಾಲಿ ವಸ್ತ್ರ ಹಾಗೂ ಖಾದಿಯ ವೈವಿಧ್ಯಮಯ ಬಟ್ಟೆಗಳು, ಯುವ ಪೀಳಿಗೆ ಮೆಚ್ಚುವ ಮೋಹಕ ಖಾದಿ ಡಿಸೈನ್‌ಗಳ ಉಡುಪುಗಳು, ಅಂಗಿ- ಕುರ್ತಾ, ಕಸೂತಿ ಬಟ್ಟೆಗಳು, ಸೀರೆ, ಗುಡಿ ಕೈಗಾರಿಕಾ ಕಸುಬುದಾರರಿಂದ ತಯಾರಿಸಿದ ಮರದ ಕೆತ್ತನೆಯ ವಸ್ತುಗಳು, ಆಟಿಕೆಗಳು, ಚರ್ಮೋದ್ಯೋಗ, ಹಪ್ಪಳ- ಉಪ್ಪಿನಕಾಯಿ ಇತ್ಯಾದಿ ಗ್ರಾಮೀಣ ಕೈಗಾರಿಕೆಗಳ ಉತ್ಪನ್ನಗಳನ್ನು ಮಾರಾಟ ಮಾಡಲು ವ್ಯವಸ್ಥೆ ಕಲ್ಪಿಸಲಾಗಿದೆ.ಭಾರೀ ರಿಯಾಯ್ತಿ: ಅರಳೆಖಾದಿ ಬಟ್ಟೆಗಳಿಗೆ ಶೇ.35 ರಿಯಾಯ್ತಿ ಇದ್ದರೆ, ಖಾದಿ ರೇಷ್ಮೆ ಬಟ್ಟೆಗಳಿಗೆ ಶೇ.20 ರಿಯಾಯ್ತಿ ನೀಡಲಾಗುತ್ತದೆ. ಮೇಳದ ಆವರಣದಲ್ಲಿ ಉಚಿತವಾಗಿ ಬಿಪಿ, ಶುಗರ್ ಪರೀಕ್ಷೆಯನ್ನೂ ನಡೆಸಬಹುದು.
ಉದ್ಘಾಟನಾ ಸಮಾರಂಭದಲ್ಲಿ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ, ಮಸ್ಕಿ ಶಾಸಕ ಬಸನಗೌಡ ತುರುವಿಹಾಳ, ಮಂಡಳಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಡಿ.ಬಿ. ನಟೇಶ್, ಉಪ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಂಜಿತ್ ಇದ್ದರು. ಉಮೇಶ್ ಕಾರ್ಯಕ್ರಮ ನಿರೂಪಿಸಿದರು.ಮಂಗಳೂರಲ್ಲಿ 2 ಖಾದಿ ಘಟಕ: ಶಾಸಕ ಕಾಮತ್ಮಂಗಳೂರಿನಲ್ಲಿ ಸ್ತ್ರೀಶಕ್ತಿ ಗುಂಪುಗಳ ಮೂಲಕ ಖಾದಿ ಉದ್ಯಮದ ಕನಿಷ್ಠ ಎರಡು ಘಟಕಗಳನ್ನು ಆರಂಭಿಸುವ ಚಿಂತನೆ ಇದೆ ಎಂದು ಶಾಸಕ ಡಿ.ವೇದವ್ಯಾಸ ಕಾಮತ್ ತಿಳಿಸಿದರು. ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಬದಲಾಗುತ್ತಿರುವ ಕಾಲಘಟ್ಟದಲ್ಲಿ ಇಂದಿನ ಫ್ಯಾಷನ್ ಗೆ ಪೂರಕವಾಗಿ ಖಾದಿ ಉತ್ಪನ್ನಗಳು ಬರಬೇಕು. ಇದು ಸಾಧ್ಯವಾದರೆ ಗ್ರಾಹಕರನ್ನು ಸೆಳೆಯಲು ಸಾಧ್ಯವಾಗುತ್ತದೆ. ಪ್ರಧಾನಿ ಅವರ ಮೇಕ್ ಇನ್ ಇಂಡಿಯಾ ಪರಿಕಲ್ಪನೆ ಯಶಸ್ವಿಯಾಗಬೇಕಾದರೆ ಖಾದಿ ಘಟಕಗಳನ್ನು ಪ್ರೋತ್ಸಾಹಿಸುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಮಂಗಳೂರಿನಲ್ಲೂ ಖಾದಿ ಘಟಕ ಆರಂಭಿಸಲಾಗುವುದು ಎಂದರು.
ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಬಸನಗೌಡ ತುರುವಿಹಾಳ ಮಾತನಾಡಿ, ರಾಜ್ಯದ 23 ಜಿಲ್ಲೆಗಳಲ್ಲಿ ಖಾದಿ ಬಟ್ಟೆ ತಯಾರಾಗುತ್ತಿದ್ದು, ಸುಮಾರು 40 ಸಾವಿರದಷ್ಟು ಮಂದಿ ಜೀವನೋಪಾಯ ಕಂಡುಕೊಂಡಿದ್ದಾರೆ. ಇದೀಗ ಮಂಡಳಿ ವತಿಯಿಂದ ಪ್ರತಿ ಜಿಲ್ಲೆಯಲ್ಲೂ ಖಾದಿ ಉತ್ಸವ ನಡೆಸುತ್ತಾ ಕಸುಬುದಾರರಿಗೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂದರು.