ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಜಿಲ್ಲಾ ಮಾದಿಗ ಸಂಘಟನೆಗಳ ಒಕ್ಕೂಟದ ವತಿಯಿಂದ ಒಳ ಮೀಸಲಾತಿ ಜಾರಿಗಾಗಿ ಅ.15 ರಂದು ಮಂಗಳವಾರ ಮಾದಾಪುರದಿಂದ ಜಿಲ್ಲಾಡಳಿತ ಭವನದವರಗೆ ಬೃಹತ್ ಪಾದಯಾತ್ರೆ ಆಯೋಜಿಸಲಾಗಿದೆ ಎಂದು ಒಕ್ಕೂಟದ ಎಂ.ಶಿವಮೂರ್ತಿ ಹೇಳಿದರು.ನಗರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಜಾರಿ ಮಾಡಲು ಆಯಾಯ ರಾಜ್ಯಗಳಿಗೆ ಪರಮಾಧಿಕಾರವಿದೆ ಎಂದು ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡಿದ್ದು, ಅದರಂತೆ ರಾಜ್ಯ ಸರ್ಕಾರ ಒಳ ಮೀಸಲಾತಿ ಜಾರಿಗೊಳಿಸಲು ಸರ್ಕಾರದ ಗಮನ ಸೆಳೆಯುವ ಸಲುವಾಗಿ ಒಳ ಮೀಸಲಾತಿ ಜಾರಿಗಾಗಿ ಬೃಹತ್ ಪಾದಯಾತ್ರೆ ಅಯೋಜಿಸಲಾಗಿದೆ ಎಂದರು.
ಸಮುದಾಯದ 30 ವರ್ಷಗಳಿಂದ ಒಳ ಮೀಸಲಾತಿಗಾಗಿ ಹೋರಾಟ ಮಾಡುತ್ತಿದ್ದು, ಸಿಎಂ ಮುಂದಿನ ಸಚಿವ ಸಂಪುಟದಲ್ಲಿ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ ಅಂಗೀಕರಿಸಿ ಒಳ ಮೀಸಲಾತಿ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು. ಕರ್ನಾಟಕ ರಾಜ್ಯದಲ್ಲಿ ಶತಶತಮಾನಗಳಿಂದ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ, ಔದ್ಯೋಗಿಕ ಹಾಗೂ ರಾಜಕೀಯವಾಗಿ ತೀರ ಹಿಂದುಳಿದಿದ್ದು ಇದಕ್ಕಾಗಿ ಕಳೆದ ಮೂರು ದಶಕಗಳಿಂದ ನಿರಂತರ ಹೋರಾಟ, ಚಳವಳಿ, ಸತ್ಯಾಗ್ರಹ ಮಾಡಿದ್ದೇವೆ ಎಂದರು. 1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದರೂ ಮಾದಿಗ ಜನಾಂಗಕ್ಕೆ ಇನ್ನೂ ಸ್ವಾತಂತ್ರ ಸಿಕ್ಕಲ್ಲ. ಡಾ.ಅಂಬೇಡ್ಕರ್ ಈ ದೇಶದ ಜಾತಿ ವ್ಯವಸ್ಥೆ, ಅಸ್ಪೃಶ್ಯತೆ ಆಚರಣೆ, ಅಸಮಾನತೆ ಇವೆಲ್ಲವನ್ನೂ ಮನೆಗಂಡು 1950ರಲ್ಲಿ ಶ್ರೇಷ್ಠ ಸಂವಿಧಾನ ರಚಿಸಿ ಕೊಟ್ಟಿದ್ದಾರೆ ಎಂದರು.1973ರಲ್ಲಿ ಎಲ್.ಜಿ ಹಾವನೂರು ವರದಿಯ ಪ್ರಕಾರ ಮಾದಿಗ ಜನಾಂಗವು ಪರಿಶಿಷ್ಟ ಜಾತಿಯಲ್ಲಿಯೇ ಅತಿಹೆಚ್ಚು ಜನ ಸಂಖ್ಯೆಯನ್ನು ಹೊಂದಿದೆ. ಕರ್ನಾಟಕದಲ್ಲಿ ಒಳಮೀಸಲಾತಿಗಾಗಿ ನಿರಂತರ ಹೋರಾಟ ನಡೆದ ಹಿನ್ನೆಲೆಯಲ್ಲಿ 2005ರಲ್ಲಿ ಅಂದಿನ ಸರ್ಕಾರ ಎ.ಜೆ ಸದಾಶಿವ ಆಯೋಗ ರಚನೆ ಮಾಡಿತು. ಈ ನಿಯೋಗವು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಪರಿಶಿಷ್ಟ ಜಾತಿಯಲ್ಲಿ ಬರುವ 101 ಜಾತಿಗಳ ಆರ್ಥಿಕ, ಶೈಕ್ಷಣಿಕ, ರಾಜಕೀಯ ಮತ್ತು ಉದ್ಯೋಗ ಸಮೀಕ್ಷೆ ನಡೆಸಿ ಅದರಲ್ಲಿ ಮಾದಿಗ ಜನಾಂಗವು ಸಂವಿದಾನ ಬದ್ಧ ಎಲ್ಲಾ ಸವಲತ್ತುಗಳಿಂದ ವಂಚಿತವಾಗಿರುವ ವರದಿಯನ್ನು ಸರ್ಕಾರಕ್ಕೆ ಒಪ್ಪಿಸಿದೆ ಎಂದು ತಿಳಿಸಿದರು.
ಒಳ ಮೀಸಲಾತಿಗಾಗಿ ಹೋರಾಟ ಮಾಡುವ ಸಂದರ್ಭದಲ್ಲಿ ಬೆಳಗಾವಿಯಲ್ಲಿ ನಡೆದ ಹೋರಾಟದಲ್ಲಿ ಪ್ರತಿಭಟನೆ ನಿರತರ ಮೇಲೆ ಲಾಠಿಚಾರ್ಜ್ ಆಗಿದೆ ಕೈಕಾಲುಗಳು ಮುರಿದಿದೆ. ಜೈಲುವಾಸ ಅನುಭವಿಸಿದ್ದಾರೆ. ಅರೆಬೆತ್ತಲೆ ಮೆರವಣಿಗೆ ನಡೆದಿವೆ. 2016ರಲ್ಲಿ ನಡೆದ ಹುಬ್ಬಳಿಯ ಸಮಾವೇಶದಲ್ಲಿ ಚಳವಳಿಗೆ ಆಗಮಿಸುವಾಗ ರಸ್ತೆ ಅಪಘಾತದಿಂದ ಸುಮಾರು 8 ಜನ ಪ್ರಾಣ ತೆತ್ತಿದ್ದಾರೆ. ಹೀಗೆ ನೂರಾರು ಹೋರಾಟಗಳ ಫಲವಾಗಿ 2024 ಆಗಸ್ಟ್ 1 ರಂದು ಸುಪ್ರಿಂಕೋರ್ಟ್ ನ್ಯಾಯಮೂರ್ತಿ ಚಂದ್ರಚೂಡ ಅವರ 7 ಸದಸ್ಯರ ಪೀಠ ಒಳಮೀಸಲಾತಿ ವರ್ಗೀಕರಣ ಜಾರಿ ಮಾಡಲು ಆಯಾ ರಾಜ್ಯ ಸರ್ಕಾರಗಳಿಗೆ ಅಧಿಕಾರವನ್ನು ನೀಡಿ ತೀರ್ಪು ನೀಡಿದೆ ಎಂದರು.ಈ ಆದೇಶವನ್ನು ರಾಜ್ಯದ ಸಿಎಂ ಸಿದ್ದರಾಮಯ್ಯರವರು ಸುಪ್ರಿಂಕೋರ್ಟ್ ತೀರ್ಪನ್ನು ಸ್ವಾಗತಿಸಿ ಇನ್ನೂ 15 ದಿನಗಳಲ್ಲಿ ಜಾರಿ ಮಾಡುತ್ತೇವೆ ಎಂದು ಹೇಳಿದ್ದಾರೆ. 3 ತಿಂಗಳಾದರೂ ಇನ್ನೂ ಇದರ ಬಗ್ಗೆ ಕ್ರಮ ಕೈಗೊಂಡಿಲ್ಲ. ಆದ್ದರಿಂದ ಈ ಕೂಡಲೇ ಸಿಎಂ, ಸಚಿವ ಸಂಪುಟ ಸಭೆ ಕರೆದು ಪರಿಶಿಷ್ಟ ಜಾತಿಯಲ್ಲಿ ಬರುವ 101 ಜಾತಿಗಳಿಗೆ ಜನಸಂಖ್ಯೆಗೆ ಅನುಗುಣವಾಗಿ ಒಳ ಮೀಸಲಾತಿ ಜಾರಿ ಮಾಡಬೇಕೆಂದು ಆಗ್ರಹಿಸಿದರು.
ಜಿಲ್ಲಾ ಮಾದಿಗ ಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷ ಬಸವನಪುರ ರಾಜಶೇಖರ ಮಾತನಾಡಿ, ರಾಜ್ಯದಲ್ಲಿ ಸುಮಾರು 35 ರಿಂದ 40 ಲಕ್ಷ ಜನಸಂಖ್ಯೆವಿದ್ದು, ಸಮುದಾಯ ಶೈಕ್ಷಣಿಕ, ಆರ್ಥಿಕ, ರಾಜಕೀಯ ತೀವ್ರ ಹಿಂದುಳಿದ್ದು ಸ್ವಾತಂತ್ರ್ಯ ಬಂದರೂ ಕೂಡ ಇನ್ನೂ ಗುಡಿಸಲಿನಲ್ಲಿ ವಾಸಮಾಡುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯನವರು ಪರಿಶಿಷ್ಟ ಜಾತಿಯಲ್ಲಿ ಬರುವ 101 ಜಾತಿಗಳಿಗೆ ಜನಸಂಖ್ಯೆಗೆ ಅನುಗುಣವಾಗಿ ಒಳ ಮೀಸಲಾತಿ ಜಾರಿ ಸಮುದಾಯ ನ್ಯಾಯ ಕೊಡಿಸಿಕೊಡಬೇಕು ಒತ್ತಾಯಿಸಿದರು.ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಮಾದಿಗ ಮೀಸಲಾತಿ ಹೋರಾಟ ಸಮಿತಿ ಗೌರವಾಧ್ಯಕ್ಷ ಪಾಳ್ಯ ರಾಚಪ್ಪ, ಜಿಲ್ಲಾ ಮಾದಿಗ ಒಕ್ಕೂಟದ ಮುಖಂಡರಾದ ಕೆಸ್ತೂರು ಮರಪ್ಪ, ಸಂತೇಮರಹಳ್ಳಿ ರಾಜು, ಗುರುಲಿಂಗಯ್ಯ ಹಾಜರಿದ್ದರು.