ಇದು ಸಾಲದೆಂಬಂತೆ ನಾನಾ ರೀತಿಯ ನೆಪ ಹುಡುಕಿ ನೌಕರರನ್ನು ಕೆಲಸದಿಂದ ತೆಗೆದು ಹಾಕಲು ಹಲವಾರು ರೀತಿಯ ಷಡ್ಯಂತ್ರ ಸಹ ನಡೆಸುತ್ತಿದೆ
ಕೊಪ್ಪಳ: ಕೊಪ್ಪಳ ತಾಲೂಕಿನ ಬಿಸರಳ್ಳಿ ಗ್ರಾಮದ ನೃಪತುಂಗ ಪ್ರೌಢಶಾಲೆಯ ಬಿಸಿಯೂಟ ತಯಾರಕರನ್ನು ಕೆಲಸದಿಂದ ತೆಗೆದು ಹಾಕಿರುವ ಭ್ರಷ್ಟ ಅಧಿಕಾರಿಗಳ ಕ್ರಮ ವಿರೋಧಿಸಿ ಕೊಪ್ಪಳದ ಬಿಸಿಯೂಟ ನೌಕರರು ಶನಿವಾರ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಯೂನಿಯನ್ (ಐ.ಎಫ್.ಟಿ.ಯು.ಸೇರ್ಪಡೆ) ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಜಿಪಂ ಉಪ ಕಾರ್ಯದರ್ಶಿ ಕೃಷ್ಣಮೂರ್ತಿ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ ಉಪ ನಿರ್ದೇಶಕ ಸೋಮಶೇಖರ ಗೌಡ ಮೂಲಕ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.
ನಗರದ ಇಂದಿರಾ ಕ್ಯಾಂಟಿನ್ ಮುಂಭಾಗದಿಂದ ಮೆರವಣಿಗೆ ಹೊರಟು ಬಸವೇಶ್ವರ ಸರ್ಕಲ್ ತಲುಪಿದ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೊಷಣೆಗಳನ್ನು ಕೂಗಿದರು. ನಂತರ ಪ್ರತಿಭಟನಾ ಸ್ಥಳಕ್ಕೆ ಬಂದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಮಧ್ಯಾಹ್ನದ ಉಪಹಾರ ಯೋಜನೆಯಲ್ಲಿ ದುಡಿಯುತ್ತಿರುವ ಬಡ ಮಹಿಳೆಯರಿಗೆ ಸರ್ಕಾರವು ತೀರಾ ಕಡಿಮೆ ಪ್ರಮಾಣದ ಗೌರವ ಧನ ಪಾವತಿಸುವ ಮೂಲಕ ಅಂದರೆ ತಿಂಗಳಿಗೆ ₹೪೬೦೦ / ೪೭೦೦ ಪಾವತಿಸಿ, ಕಡಿಮೆ ಕೂಲಿಗೆ ಮಹಿಳೆಯರನ್ನು ಹೆಚ್ಚು ಹೆಚ್ಚು ದುಡಿಸಿಕೊಳ್ಳುತ್ತಿದೆ. ಸರ್ಕಾರ ಬಿಸಿಯೂಟ ನೌಕರರಿಗೆ ಕನಿಷ್ಠ ವೇತನ, ಪಿಂಚಣಿ ಯೋಜನೆ, ಸೇವಾಭದ್ರತೆಯನ್ನು ನೀಡದೆ ಸತಾಯಿಸುತ್ತಿದೆ.ಇದು ಸಾಲದೆಂಬಂತೆ ನಾನಾ ರೀತಿಯ ನೆಪ ಹುಡುಕಿ ನೌಕರರನ್ನು ಕೆಲಸದಿಂದ ತೆಗೆದು ಹಾಕಲು ಹಲವಾರು ರೀತಿಯ ಷಡ್ಯಂತ್ರ ಸಹ ನಡೆಸುತ್ತಿದೆ. ಸರ್ಕಾರದ ಈ ಮಹಿಳಾ ವಿರೋಧಿ ಧೋರಣೆ ಖಂಡಿಸಿ ಪ್ರತಿಭಟನೆ ನಡೆಸಿದ ಬಿಸಿಯೂಟ ಮಹಿಳೆಯರು ತಾಲೂಕಿನ ಬಿಸರಳ್ಳಿ ಗ್ರಾಮದ ಪ್ರೌಢಶಾಲೆಯ ಬಿಸಿಯೂಟ ನೌಕರರನ್ನು ಪುನಃ ಕೆಲಸದಲ್ಲಿ ಮುಂದುವರಿಸುವಂತೆ ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಅಕ್ಷರ ದಾಸೋಹ ಬಿಸಿಯೂಟ ತಯಾರಕ ಯೂನಿಯನ್ (ಐ.ಎಫ್.ಟಿ.ಯು ಸೇರ್ಪಡೆ) ಜಿಲ್ಲಾಧ್ಯಕ್ಷೆ ಪುಷ್ಪಾ ಮೇಸ್ತ್ರಿ. ಜಿಲ್ಲಾ ಕಾರ್ಯದರ್ಶಿ ಕಮಲಮ್ಮ.ಗುಬ್ಬಮ್ಮ. ಶರಣಮ್ಮ.ನಿರ್ಮಲಾ, ಭಾರತೀಯ ಕಾರ್ಮಿಕ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕ ಬಸವರಾಜ್ ಶೀಲವಂತರ್. ಎಸ್.ಎ.ಗಫಾರ್, ಗಾಳೆಪ್ಪ ಮುಂಗೋಲಿ, ಮಖಬೂಲ್ ರಾಯಚೂರು, ಶೇಖರ್ ಬೆಟಗೇರಿ ಮುಂತಾದ ಅನೇಕರು ಭಾಗವಹಿಸಿದ್ದರು.