ಸಾರಾಂಶ
ರೈತರ ಬದುಕಿನ ಜೊತೆ ಚೆಲ್ಲಾಟವಾಡುತ್ತಿದೆ: ಮಾಜಿ ಸಚಿವ ಡಿ.ಎನ್.ಜೀವರಾಜ್ । ಪಟ್ಟಣದ ಸಂತೇ ಮಾರುಕಟ್ಟೆ ಬಳಿ ಹೋರಾಟ
ಕನ್ನಡಪ್ರಭ ವಾರ್ತೆ, ಶೃಂಗೇರಿರಾಜ್ಯ ಸರ್ಕಾರ ಆಡಳಿತ ನಡೆಸುವಲ್ಲಿ ಸಂಪೂರ್ಣ ವಿಫಲವಾಗಿದ್ದು, ರೈತರ ಒತ್ತುವರಿ ಜಮೀನನ್ನು ಬಲವಂತವಾಗಿ ತೆರವುಗೊಳಿಸುವ ಮೂಲಕ ರೈತರ ಬದುಕಿನ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಮಾಜಿ ಸಚಿವ ಡಿ.ಎನ್.ಜೀವರಾಜ್ ಆರೋಪಿಸಿದರು.
ಪಟ್ಟಣದ ಸಂತೇ ಮಾರುಕಟ್ಟೆ ಬಳಿ ತಾಲೂಕು ಬಿಜೆಪಿಯಿಂದ ರೈತರ ಒತ್ತುವರಿ ತೆರವು, ಸರ್ಕಾರದ ವಿಫಲತೆ ವಿರುದ್ಧ ಆಯೋಜಿಸಿದ್ದ ಬೃಹತ್ ಪ್ರತಿಭಟನಾ ಸಭೆಯಲ್ಲಿ ಮಾತನಾಡಿ, ಕಾಂಗ್ರೆಸ್ 5 ಗ್ಯಾರಂಟಿ ಗಳನ್ನು ನೀಡಿತು. ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆ ಜೊತೆಗೆ ಜಾಗ ತೆರವುಗೊಳಿಸುವ ಕರೆಂಟ್ ಶಾಖ್ ನೀಡಿದರು. ನಿರುದ್ಯೋಗ ಭತ್ಯೆ ಜೊತೆಗೆ ಚಳುವಳಿ ಭತ್ಯೆ ನೀಡಿದ್ದಾರೆ. ಶಕ್ತಿ ಯೋಜನೆ ಜೊತೆಗೆ ಬಸ್ ಪ್ರಯಾಣ ಮಾಡಿ ಬರುವಷ್ಟರಲ್ಲಿ ಜಮೀನು, ಮನೆ ತೆರವುಗೊಳಿಸುತ್ತಿದ್ದಾರೆ .ಅನ್ನಭಾಗ್ಯ ಯೋಜನೆ ಜೊತೆಗೆ ಅನ್ನ ನೀಡುವ ಭೂಮಿಯನ್ನೇ ಕಿತ್ತುಕೊಳ್ಳುತ್ತಿದ್ದಾರೆ.ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಕುಸಿದುಬಿದ್ದಿದೆ. ರೈತರು, ಕಾರ್ಮಿಕರು ನಿರ್ಗತಿಕರಾಗುತ್ತಿದ್ದಾರೆ. ಈಗ ತಲೆ ತಲಾಂತರದಿಂದ ರೈತರು ಮಾಡಿಕೊಂಡು ಬದುಕುತ್ತಿರುವ ಒತ್ತುವರಿ ಜಮೀನನ್ನು ತೆರವುಗೊಳಿಸುವ ಮೂಲಕ ರೈತರ ಬದುಕಿಗೆ ಕೊಡಲಿಯೇಟು ಹಾಕುತ್ತಿದ್ದಾರೆ. ಅರಣ್ಯ ಸಚಿವ ಈಶ್ವರ್ ಖಂಡ್ರೆ ಮಲೆನಾಡಿನ ಪರಿಸ್ಥಿತಿ ಅರಿವಿಲ್ಲದಂತೆ ಮಾತನಾಡುತ್ತಿದ್ದಾರೆ. ರೈತರ ಅರಣ್ಯ ಭೂಮಿ ಒತ್ತುವರಿ ತೊರವುಗೊಳಿಸುವ ಆದೇಶ ನೀಡಿದ್ದಾರೆ. ಇದು ರೈತರ ಬದುಕಿನ ಪ್ರಶ್ನೆ. ಸರ್ಕಾರ ರೈತ, ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದೆ. ಕ್ಷೇತ್ರ ಶಾಸಕರು ಸಂಪೂರ್ಣ ವಿಫಲರಾಗಿದ್ದಾರೆ ಎಂದರು.
ಪಶ್ಚಿಮಘಟ್ಟ, ಕಸ್ತೂರಿ ರಂಗನ್ ವರದಿ, ಭೂಕುಸಿತಕ್ಕೂ ರೈತರ ಒತ್ತುವರಿ ಸಮಸ್ಯೆಗೂ ಸಂಬಂಧವಿಲ್ಲ. ಕಾಂಗ್ರೇಸ್ ನ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ನಿಜವಾಗಿ ಇವರಿಗೆ ರೈತರ, ಕಾರ್ಮಿಕರ ಬಗ್ಗೆ ಕಾಳಜಿ ಇದ್ದರೆ ಈ ರೀತಿ ಮಾಡುತ್ತಿರಲಿಲ್ಲ. ಕಸ್ತೂರಿ ರಂಗನ್ ವರದಿ ಜಾರಿಗೊಳಿಸಲು ಒತ್ತುವರಿ ತೆರವು ಮಾಡುತ್ತಿದ್ದಾರೆ ಎಂದು ಸುಳ್ಳುಹೇಳುತ್ತಿದ್ದಾರೆ. ವಯನಾಡಿನ ಭೂಕುಸಿತ, ಶಿರೂರು ಗುಡ್ಡಕುಸಿತದ ಕಾರಣ ನೀಡಿ,ಇಲ್ಲಿ ಒತ್ತುವರಿ ತೆರವು ಕಾರ್ಯಾಚರಣೆಗೆ ಮುಂದಾಗಿದ್ದಾರೆ. ಕಾಂಗ್ರೆಸ್ ನವರದ್ದು ಒತ್ತುವರಿ ಇದೆ. ಅವರೂ ಕೂಡ ರೈತರು ಎಂಬುದನ್ನು ತಿಳಿದುಕೊಳ್ಳಲಿ.ಕಸ್ತೂರಿ ರಂಗನ್ ವರದಿಗೆ ಇನ್ನೂ ಜೀವಬಂದಿಲ್ಲ. ಆಕ್ಷೇಪಣೆ ಸಲ್ಲಿಸಲು ರಾಜ್ಯಗಳಿಗೆ 90 ದಿನಗಳ ಕಾಲಾ ವಕಾಶ ನೀಡಲಾಗಿದೆ. ಆದರೆ ಅವಧಿ ಮುಗಿಯುತ್ತಾ ಬಂದಿದೆ. ಸರ್ಕಾರ ಇನ್ನೂ ಎಚ್ಚೆತ್ತುಕೊಂಡಿಲ್ಲ. ಗ್ರಾಮಸಭೆಗಳಲ್ಲಿ ನಿರ್ಣಕೈಗೊಂಡು ಕಳುಹಿಸಬೇಕಿತ್ತು. ಆದರೆ ಇನ್ನೂ ಗ್ರಾಮಸಭೆಗಳೇ ನಡೆದಿಲ್ಲ.ಈಗ ಸಚಿವ ಸಂಪುಟದಲ್ಲಿ ತೀರ್ಮಾನ ಮಾಡುತ್ತೇವೆ ಎನ್ನುತ್ತಿದ್ದಾರೆ. ಇನ್ನೂ ತೀರ್ಮಾನ ಮಾಡಿಲ್ಲ. ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡುತ್ತಾರೆ ಎಂದ ಅವರು ರೈತರ ಒತ್ತುವರಿ ತೆರವು ಮಾಡಲು ಮುಂದಾದರೆ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದರು.
ಜೆಡಿಎಸ್ ಮುಖಂಡ ಭರತ್ ಮಾತನಾಡಿ ಬಿಟ್ಟಿ ಭಾಗ್ಯಗಳ ಯೋಜನೆ ಮೂಲಕ ಸರ್ಕಾರ ರಾಜ್ಯವನ್ನು ಲೂಟಿ ಹೊಡೆಯುತ್ತಿದೆ. ಇದು ಭ್ರಷ್ಟ ಸರ್ಕಾರ. ಹಗರಣಗಳೇ ಸರ್ಕಾರದ ಸಾಧನೆ. ದೇಶಕ್ಕೆ ಅನ್ನ ನೀಡುವ ರೈತನ ಭೂಮಿ ಕಿತ್ತುಕೊಳ್ಳಲು ಹೊರಟಿದ್ದಾರೆ. ಕ್ಷೇತ್ರದಲ್ಲಿ ಅಭಿವೃದ್ಧಿ ಇಲ್ಲ. ಅತಿವೃಷ್ಠಿ, ನೆರೆ ಪರಿಹಾರವಿಲ್ಲ. ರೈತರು, ಜನಸಾಮಾನ್ಯರು ಕಂಗೆಟ್ಟಿದ್ದಾರೆ. ಸರ್ಕಾರ ತನ್ನ ನಿರ್ಲಕ್ಷ ಧೋರಣೆ ಮುಂದುವರೆಸಿದೆ ಎಂದು ಆರೋಪಿಸಿದರು.ಮುಖಂಡರಾದ ಪುಣ್ಯಪಾಲ್,ಕೆ.ಎಂ.ಶ್ರೀನಿವಾಸ್, ತಲಗಾರು ಉಮೇಶ್, ಚೇತನ್ ಹೆಗ್ಡೆ, ಕೆ.ಎಸ್.ರಮೇಶ್, ಕೆ.ಎಂ.ಶ್ರೀನಿವಾಸ್ ಸೇರಿದಂತೆ ಪ್ರಮುಖರ ಉಪಸ್ಥಿತರಿದ್ದರು. ಇದಕ್ಕೂ ಮೊದಲು ಬೆಳಿಗ್ಗೆ ಬಸ್ ನಿಲ್ದಾಣ ದಿಂದ ಪ್ರತಿಭಟನಾ ಮೆರವಣಿಗೆ ಹೊರಟು ಪಟ್ಟಣದ ಮುಖ್ಯ ರಸ್ತೆಯಲ್ಲಿ ಸಾಗಿ ಸಂತೇಮಾರುಕಟ್ಟೆ ಬಳಿ ಸಮಾವೇಶಗೊಂಡಿತು.
26 ಶ್ರೀ ಚಿತ್ರ 1-ಶೃಂಗೇರಿ ಪಟ್ಟಣದ ಸಂತೇಮಾರುಕಟ್ಟೆ ಬಳಿ ಬಿಜೆಪಿ ಪ್ರತಿಭಟನೆ ಸಭೆ ಉದ್ದೇಶಿಸಿ ಮಾಡಿ ಸಚಿವ ಡಿ.ಎನ್.ಜೀವರಾಜ್ ಮಾತನಾಡಿದರು.
26 ಶ್ರೀ ಚಿತ್ರ 2-ಶೃಂಗೇರಿಯಲ್ಲಿ ಬಿಜೆಪಿ ಕಾರ್ಯಕರ್ತರು ಒತ್ತುವರಿ ತೆರವು ,ರಾಜ್ಯ ಸರ್ಕಾರದ ವಿಫಲತೆ ವಿರುದ್ದ ಪ್ರತಿಭಟನಾ ಮೆರವಣಿಗೆ ನಡೆಸಿದರು.