ಬೆಂಗಳೂರು : ಕೇಜ್ರಿವಾಲ್ ಬಂಧನ ಖಂಡಿಸಿ ಭಾರಿ ಪ್ರತಿಭಟನೆ

| Published : Apr 01 2024, 02:18 AM IST / Updated: Apr 01 2024, 08:12 AM IST

ಬೆಂಗಳೂರು : ಕೇಜ್ರಿವಾಲ್ ಬಂಧನ ಖಂಡಿಸಿ ಭಾರಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಆಮ್‌ ಆದ್ಮಿ ಪಾರ್ಟಿ ಸಂಸ್ಥಾಪಕ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರ ಬಂಧನ ವಿರೋಧಿಸಿ ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ‘ಇಂಡಿಯಾ’ ಒಕ್ಕೂಟದಿಂದ ಬೃಹತ್‌ ಪ್ರತಿಭಟನೆ

 ಬೆಂಗಳೂರು :  ಜಾರಿ ನಿರ್ದೇಶನಾಲಯ, ಸಿಬಿಐ, ತೆರಿಗೆ ಇಲಾಖೆ ಮತ್ತಿತರ ಸ್ವತಂತ್ರ ಸಂಸ್ಥೆಗಳ ಅಧಿಕಾರಿಗಳು ಸ್ವತಂತ್ರ ಅಧಿಕಾರಿಗಳಾಗಿ ಕೆಲಸ ಮಾಡುತ್ತಿಲ್ಲ. ಬದಲಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಗುಲಾಮರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಆಮ್‌ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಡಾ। ಮುಖ್ಯಮಂತ್ರಿ ಚಂದ್ರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆಮ್‌ ಆದ್ಮಿ ಪಾರ್ಟಿ ಸಂಸ್ಥಾಪಕ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರ ಬಂಧನ ವಿರೋಧಿಸಿ ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ‘ಇಂಡಿಯಾ’ ಒಕ್ಕೂಟದಿಂದ ನಡೆಸಲಾದ ಬೃಹತ್‌ ಪ್ರತಿಭಟನೆ ವೇಳೆ ಮಾತನಾಡಿದ ಅವರು, ಕಳೆದ 10 ವರ್ಷಗಳಲ್ಲಿ ನಾವು ನೋಡಿದ್ದು ಪ್ರಜಾಪ್ರಭುತ್ವದ ಕಗ್ಗೋಲೆ. ವಿವಿಧತೆಯಲ್ಲಿ ಏಕತೆಯಿಂದಿರುವ ಭಾರತದ ನಾಶ, ಜನತಂತ್ರ ವ್ಯವಸ್ಥೆಯ ಸರ್ವನಾಶ. ಸಂವಿಧಾನ ಬದಲಿಸುವ ಪ್ರಯತ್ನ, ಪಾರದರ್ಶಕತೆ ಇಲ್ಲದ ಆಡಳಿತ ಹಾಗೂ ಕೋಮುಗಲಭೆಗಳು ಎಂದು ಕಿಡಿಕಾರಿದರು.

ಬಿಜೆಪಿಯೇತರ ಆಡಳಿತವಿರುವ ರಾಜ್ಯಗಳಲ್ಲಿ ರಾಜ್ಯಪಾಲರ ಮೂಲಕ ಕಡಿವಾಣ ಹಾಕುತ್ತಿದ್ದಾರೆ. ದೆಹಲಿಯಲ್ಲಿ ಲೆಫ್ಟಿನೆಂಟ್‌ ಗವರ್ನರ್‌ ಮೂಲಕ ರಾಜ್ಯದ ಆಡಳಿತವನ್ನು ಹತೋಟಿಯಲ್ಲಿಡಲು ಯತ್ನಿಸುತ್ತಿದ್ದಾರೆ. ಜೈಲಿನಲ್ಲಿರಬೇಕಾದ ಕಡುಭ್ರಷ್ಟರನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಂಡು ಮಂತ್ರಿ, ಮುಖ್ಯಮಂತ್ರಿಗಳನ್ನಾಗಿಸುತ್ತಿದ್ದಾರೆ. ರಾಜಕೀಯ ಎದುರಾಳಿಗಳನ್ನು ಇಡಿ, ಸಿಬಿಐ, ತೆರಿಗೆ ಇಲಾಖೆ ಮತ್ತಿತರ ತನಿಖಾ ಸಂಸ್ಥೆಗಳ ಮೂಲಕ ಸುಳ್ಳು ಪ್ರಕರಣಗಳಡಿ ಆರೋಪಿಗಳಾಗಿಸಿ ಕಿರುಕುಳ ನೀಡುತ್ತಿದ್ದಾರೆ. ಈ ದೇಶ ಉಳಿಯಬೇಕೆಂದರೆ ಸರ್ವಾಧಿಕಾರಿಯ ಆಡಳಿತಕ್ಕೆ ಅಂತ್ಯವಾಡಬೇಕು ಎಂದರು.

ದುಡ್ಡು ಇರುವವರ ಹತ್ತಿರ ಇ.ಡಿ ಹೋಗುತ್ತೆ. ಆಮೇಲೆ ಒಳಗೆ ಹೋಗುವಿರಾ? ಹೊರಗೆ ಇರುವಿರಾ ಎಂದು ಕೇಳುತ್ತೆ. ಹೊರಗಿರಬೇಕಾದರೆ, ಬಿಜೆಪಿ ಹುಂಡಿಗೆ ಕಾಸು ಹಾಕಿ. ಇಲ್ಲವಾದರೆ, ಒಳಗೆಹೋಗಿ. ಇದು ನೂರಾರು ಉದ್ಯಮಿಗಳ ಪರಿಸ್ಥಿತಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರಿ ಆಸ್ತಿ ಮಾರಾಟ:

ಸಾವಿರಾರು ಕೋಟಿ ರು. ಅಕ್ರಮ ಹಣವನ್ನು ಚುನಾವಣಾ ಬಾಂಡ್‌ ಮೂಲಕ ತನ್ನ ಹುಂಡಿಗೆ ಹಾಕಿಸಿಕೊಂಡು ಸಕ್ರಮ ಮಾಡುತ್ತಿದೆ. ಸ್ವಿಸ್‌ ಬ್ಯಾಂಕಿನಲ್ಲಿರುವ ಎಲ್ಲ ಕಳ್ಳ ದುಡ್ಡನ್ನು ತಂದು ಭಾರತದ ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರು. ಹಾಕುತ್ತೇನೆ ಎಂದು 10 ವರ್ಷಗಳ ಹಿಂದೆ ನರೇಂದ್ರ ಮೋದಿ ಅವರು ಹೇಳಿದ್ದರು. ಆದರೆ ಅವರೇ ಚುನಾವಣೆ ಬಾಂಡ್‌ ಮೂಲಕ ಸಾವಿರಾರು ಕೋಟಿ ಅಕ್ರಮ ಹಣವನ್ನು ಗುಡ್ಡೆ ಹಾಕಿಕೊಂಡಿದ್ದಾರೆ. ಸರ್ಕಾರಿ ಆಸ್ತಿಗಳನ್ನು ಒಂದುಕಡೆಯಿಂದ ಮಾರಾಟ ಮಾಡುತ್ತಿದ್ದಾರೆ. ದೇಶದ ಸಾಲವನ್ನು ಕೇವಲ 10 ವರ್ಷಗಳಲ್ಲಿ 200 ಪಟ್ಟು ಹೆಚ್ಚಿದ್ದಾರೆ. ಮೊದಲೆಲ್ಲ ಭಾರತದಲ್ಲಿ ಹುಟ್ಟುವ ಪ್ರತಿ ಮಗುವಿನ ಮೇಲೆ 50 ಸಾವಿರ ರು. ಸಾಲವಿತ್ತು. ಆದರೆ ಈಗ ಬರೋಬ್ಬರಿ 1.5 ಲಕ್ಷ ರು. ಸಾಲವಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಸಚಿವ ರಾಮಲಿಂಗಾ ರೆಡ್ಡಿ ಮಾತನಾಡಿ, ದೆಹಲಿಯಲ್ಲಿ ಅರವಿಂದ ಕೇಜ್ರಿವಾಲ್‌ ಅವರು ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸಿರುವುದನ್ನು ನೋಡಿ ಸ್ಫೂರ್ತಿಗೊಂಡು ನಮ್ಮ ಕ್ಷೇತ್ರದ 22 ಶಾಲೆಗಳನ್ನು ಅಭಿವೃದ್ಧಿಪಡಿಸಿದೆವು. ಮೊದಲು 4 ಸಾವಿರವಿದ್ದ ವಿದ್ಯಾರ್ಥಿಗಳ ಸಂಖ್ಯೆ ಈಗ 5,500ಕ್ಕೆ ಏರಿಕೆಯಾಗಿದೆ ಎಂದರು.

ಬಿಜೆಪಿಗರ ಪೂರ್ವಜರು ಆರ್‌ಎಸ್‌ಎಸ್‌, ವಿಶ್ವ ಹಿಂದೂ ಪರಿಷತ್‌ನವರಾಗಿದ್ದಾರೆ. ಅವರು ಯಾರೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದವರಲ್ಲ. ಮನುವಾದಿ, ಸರ್ವಾಧಿಕಾರಿ ಧೋರಣೆಯಲ್ಲಿ ನಂಬಿಕೆ ಇಟ್ಟವರಾಗಿದ್ದಾರೆ. ಸಂವಿಧಾನ ವಿರೋಧಿಗಳಾಗಿದ್ದಾರೆ. ಭಾರತದಲ್ಲಿ ಈಗ ಸರ್ವಾಧಿಕಾರ ಚಾಲ್ತಿಯಲ್ಲಿದೆ. ಸಂವಿಧಾನ ಬದಲಾದರೆ ಸ್ವಾತಂತ್ರ್ಯ ಪೂರ್ವದಲ್ಲಿ ನಮ್ಮ ದೇಶ ಹೇಗಿತ್ತೋ ಆ ಪರಿಸ್ಥಿತಿಗೆ ಕೊಂಡೊಯ್ಯುತ್ತಾರೆ ಎಂದು ಆತಂಕ ವ್ಯಕ್ತಪಡಿಸಿದರು.ಸಿಪಿಐಎಂ ಮುಖಂಡ ಜಿ.ಎನ್‌.ನಾಗರಾಜ್‌, ಎಸ್‌ಡಿಪಿಐನ ಅಬ್ದುಲ್‌ ಮಜಿದ್‌, ಸಾಮಾಜಿಕ ಹೋರಾಟಗಾರ ನೂರ್‌ ಶ್ರೀಧರ್‌, ಸಲೀಲ್‌ ಶೆಟ್ಟಿ, ಎಎಪಿ ರಾಜ್ಯ ಉಪಾಧ್ಯಕ್ಷರಾದ ಮೋಹನ್‌ ದಾಸರಿ, ವಿಜಯ್‌ ಶರ್ಮಾ, ರಮೇಶ್‌ ಬೆಲ್ಲಂಕೊಂಡ, ಡಾ. ವೆಂಕಟೇಶ್‌, ಶಾಂತಲಾ ದಾಮ್ಲೆ, ಸಂಪತ್‌ ಶೆಟ್ಟಿ, ನಸೀಮುದ್ದಿನ್‌ ಪಟೇಲ್‌, ರುದ್ರಯ್ಯ ನವಲೀಹೀರೇಮಠ್‌ ಭಾಗವಹಿಸಿದ್ದರು.ಬಿಜೆಪಿಯ ಭ್ರಷ್ಟರು ಜೈಲು ಸೇರುವರು:

2ಜಿ ಹಗರಣದಲ್ಲಿ, ಕಲ್ಲಿದ್ದಲು ಹಗರಣದಲ್ಲಿ ಅಕ್ರಮ ನಡೆದಿರುವುದನ್ನು ಸಾಬೀತು ಪಡಿಸಲಾಗಲಿಲ್ಲ. ಆದರೂ ಅವುಗಳು ಭಾರತದ ಅತಿದೊಡ್ಡ ಹಗರಣಗಳೆಂದು ಸುಳ್ಳು ಬಿತ್ತಿದರು. ಅಬಕಾರಿ ನೀತಿ ಹಗರಣದಲ್ಲಿಯೂ ಎಎಪಿ ಪಾತ್ರದ ಬಗ್ಗೆ ನಿರಂತರವಾಗಿ ಸುಳ್ಳು ಹಬ್ಬಿಸಲಾಗುತ್ತಿದೆ. ಆದರೆ ಎರಡು ವರ್ಷಗಳೇ ಕಳೆದರೂ ಒಂದು ರೂಪಾಯಿ ಅಕ್ರಮ ಹಣವನ್ನು ವಶಪಡಿಸಿಕೊಳ್ಳಲಾಗಿಲ್ಲ. ಚುನಾವಣೆ ಬಾಂಡ್‌ ಮೂಲಕ ಸಾವಿರಾರು ಕೋಟಿ ಅಕ್ರಮ ಎಸಗಿರುವುದು ಕಣ್ಮುಂದೆ ಇದ್ದರೂ ಬಿಜೆಪಿ ವಿರುದ್ಧ ತನಿಖಾ ಸಂಸ್ಥೆಗಳು ಕ್ರಮ ಕೈಗೊಳ್ಳುತ್ತಿಲ್ಲ. ಮುಂದೆ ಒಳ್ಳೆಯ ದಿನಗಳು ಬರಲಿವೆ. ಕೇಜ್ರಿವಾಲ್‌ ಆರೋಪ ಮುಕ್ತರಾಗಲಿದ್ದಾರೆ. ಬಿಜೆಪಿಯ ಎಲ್ಲ ಭ್ರಷ್ಟರು ಜೈಲು ಸೇರಲಿದ್ದಾರೆ ಎಂದು ಮುಖ್ಯಮಂತ್ರಿ ಚಂದ್ರು ಭವಿಷ್ಯ ನುಡಿದರು.