ಹೊಸಪೇಟೆ: ವಿಶ್ವ ವಿಖ್ಯಾತ ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿಯಾಗಿರುವ ಹಂಪಿಯ ವಿರೂಪಾಕ್ಷೇಶ್ವರ ದೇವಸ್ಥಾನಕ್ಕೆ ಸೇರಿದ ಸುಮಾರು 42 ವರ್ಷದ ಆನೆ "ಲಕ್ಷ್ಮಿ "ಯ ಸ್ಥಳಾಂತರ ವಿರೋಧಿಸಿ ಸ್ಥಳೀಯ ನಿವಾಸಿಗಳು, ಭಕ್ತರು, ಪ್ರವಾಸಿ ಮಾರ್ಗದರ್ಶಕರು ಮಂಗಳವಾರ ಪ್ರತಿಭಟಿಸಿದರು.

ಅನಾರೋಗ್ಯದ ನೆಪ ಹೇಳಿ ಅರಣ್ಯ ಇಲಾಖೆಯವರು ಆನೆಯನ್ನು ಕೋಲಾರಕ್ಕೆ ಸ್ಥಳಾಂತರ ಮಾಡುವುದು ಸರಿಯಲ್ಲ. ಮೂರು ತಿಂಗಳುಗಳ ಕಾಲ ಚಿಕಿತ್ಸೆಗೆ ಸ್ಥಳಾಂತರ ಮಾಡಲಾಗುತ್ತಿದೆ ಎಂದು ಹೇಳುತ್ತಿರುವುದು ನೆಪ ಮಾತ್ರಕ್ಕೆ. ಇಲ್ಲಿಂದ ಆನೆಯನ್ನು ಸ್ಥಳಾಂತರಿಸಿದರೆ ಅದು ವಾಪಸಾಗಲ್ಲ. ಯಾವುದೇ ಕಾರಣಕ್ಕೂ ಆನೆಯನ್ನು ಸ್ಥಳಾಂತರ ಮಾಡಲು ಬಿಡುವುದಿಲ್ಲ ಎಂದು ಹಂಪಿ, ಕಮಲಾಪುರ, ಕಡ್ಡಿರಾಂಪುರ ಸೇರಿದಂತೆ ಇನ್ನಿತರ ಗ್ರಾಮಗಳ ನಿವಾಸಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದರು. ಒಂದು ವೇಳೆ ಆನೆಗೆ ಅನಾರೋಗ್ಯದ ಪರಿಸ್ಥಿತಿ ಇದ್ದರೆ ಹಂಪಿಯಲ್ಲಿಯೇ ಚಿಕಿತ್ಸೆ ನೀಡಬೇಕು ಎಂದು ಸ್ಥಳೀಯರು ಅಧಿಕಾರಿಗಳನ್ನು ಕೇಳಿಕೊಂಡರು.

ಪ್ರತಿಭಟನಾಕಾರರ ಮನವಿ ಆಲಿಸಲು, ಮನವಿ ಸ್ವೀಕರಿಸಲು ಯಾವುದೇ ಅಧಿಕಾರಿಗಳು ಮುಂದೆ ಬಾರದ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರು ಮತ್ತು ಅಧಿಕಾರಿಗಳ ನಡುವೆ ವಾಗ್ವಾದ ನಡೆಯಿತು. ಕೆಲ ಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಸಾರ್ವಜನಿಕರ ಆಕ್ರೋಶ ಹೆಚ್ಚಾಗುತ್ತಿದ್ದಂತೆ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಭಾರಿ ಪ್ರಮಾಣದಲ್ಲಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಯಿತು.

ತಹಶೀಲ್ದಾರ್‌ ಎಂ.ಶೃತಿ, ಹಂಪಿ ದೇವಸ್ಥಾನದ ಕಾರ್ಯ ನಿರ್ವಾಹಕ ಅಧಿಕಾರಿ ಆಂಜನೇಯ, ಅಡಿಷನಲ್ ಎಸ್ಪಿ ಜಿ.ಮಂಜುನಾಥ, ಹೊಸಪೇಟೆ ಉಪವಿಭಾಗದ ಡಿವೈಎಸ್ಪಿ ಪಿ.ಮುರಳೀಧರ್‌, ಹಂಪಿ ಸಿಪಿಐ ರಾಜೇಶ್ ಸೇರಿದಂತೆ ಪೊಲೀಸರು ಸ್ಥಳದಲ್ಲಿಯೇ ಮೊಕ್ಕಾಂ ಹೂಡಿದ್ದರು.

ಇನ್ನೊಂದು ಕಡೆ ಸಾಮಾಜಿಕ ಜಾಲತಾಣದಲ್ಲಿ ‘ಹಂಪಿಯ ಆನೆ ಲಕ್ಷ್ಮೀಯನ್ನು ಇಲ್ಲೇ ಉಳಿಸಿ’ ಎಂಬ ಅಭಿಯಾನ ಜೋರಾಗಿ ನಡಿಯಿತು.


ಬಾಕ್ಸ್‌:

ಮಾವುತನ ಕುಟುಂಬಸ್ಥರು ಕಣ್ಣೀರು:

ಹಂಪಿಯ ವಿರೂಪಾಕ್ಷೇಶ್ವರ ದೇವಸ್ಥಾನದ ಹೆಮ್ಮೆಯ ಆನೆ ‘ಲಕ್ಷ್ಮಿ’ಯನ್ನು ಅನಾರೋಗ್ಯದ ಕಾರಣ ನೀಡಿ ಹಂಪಿಯಿಂದ ಕೋಲಾರಕ್ಕೆ ಸ್ಥಳಾಂತರಕ್ಕೆ ಮಾವುತನ ಕುಟುಂಬಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿ, ಕಣ್ಣೀರಿಟ್ಟರು.

ಆನೆಯನ್ನು ಲಾರಿಗೆ ಹತ್ತಿಸಿ ಕರೆದೊಯ್ಯಲು ಅಧಿಕಾರಿಗಳು ಸಿದ್ಧತೆ ನಡೆಸುತ್ತಿದ್ದಂತೆ, ಅನೇಕ ವರ್ಷಗಳಿಂದ ಆನೆಯನ್ನು ಮಗುವಿನಂತೆ ಸಾಕಿದ್ದ ಮಾವುತನ ಕುಟುಂಬಸ್ಥರ ರೋದನೆ ಮುಗಿಲು ಮುಟ್ಟಿತ್ತು. ಮಾವುತನ ಪತ್ನಿ, ಮಕ್ಕಳು ಆನೆಯ ಸೊಂಡಿಲನ್ನು ಹಿಡಿದು, ಆನೆಯ ಮುಂದೆ ಕುಳಿತು ಬಿಕ್ಕಿಬಿಕ್ಕಿ ಅತ್ತರು. “ನಮ್ಮ ಲಕ್ಷ್ಮಿಯನ್ನು ನಮ್ಮಿಂದ ದೂರ ಮಾಡಬೇಡಿ, ಅವಳು ಇಲ್ಲೇ ಇರಲಿ. ಹಂಪಿಯಿಂದ ಬೇರ್ಪಡಿಸಬೇಡಿ " ಎಂದು ಮಾವುತ ರಾಜಣ್ಣ ಗೋಳಾಡಿದರು.

ಆನೆಯ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದಿದೆ. ಸೂಕ್ತ ಚಿಕಿತ್ಸೆಗೆ ಕೊಲಾರದಲ್ಲಿನ ಆನೆ ಚಿಕಿತ್ಸಾ ಕೇಂದ್ರಕ್ಕೆ ಕಳಿಸಿಕೊಡಲಾಗುತ್ತಿದೆ. ಗುಣಮುಖವಾದ ನಂತರ ಪುನಃ ಹಂಪಿಗೆ ಕರೆ ತರಲಾಗವುದು. ಯಾರು ಕೂಡ ಈ ಬಗ್ಗೆ ಗಾಬರಿಯಾಗುವುದು ಬೇಡ ಎನ್ನುತ್ತಾರೆ ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ.