ಶರಾವತಿ ಉಳಿಸಿ ಹೋರಾಟ ಸಮಿತಿ ನಿರ್ಧಾರ, ಹೊನ್ನಾವರದಲ್ಲಿ ಪ್ರಮುಖರ ಸಭೆ
ಕನ್ನಡಪ್ರಭ ವಾರ್ತೆ ಹೊನ್ನಾವರತಾಲೂಕಿನಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ಪರಿಸರ ವಿರೋಧಿ, ಅವೈಜ್ಞಾನಿಕ, ಉದ್ದೇಶಿತ ಶರಾವತಿ ಪಂಪ್ಡ್ ಸ್ಟೋರೇಜ್ ಭೂಗತ ವಿದ್ಯುತ್ ಯೋಜನೆಯ ಅನುಷ್ಠಾನದ ವಿರುದ್ಧ ವಿವಿಧ ಮಠಾಧೀಶರ ನೇತೃತ್ವದಲ್ಲಿ ಮಾ. 10ರಂದು ಹೊನ್ನಾವರದಲ್ಲಿ ಬೃಹತ್ ಪ್ರತಿಭಟನಾ ಜನಸಮಾವೇಶ ಆಯೋಜಿಸಲು ಶರಾವತಿ ಉಳಿಸಿ ಹೋರಾಟ ಸಮಿತಿ ನಿರ್ಧರಿಸಿದೆ.
ಜೆ.ಟಿ. ಪೈ ಅಧ್ಯಕ್ಷತೆಯಲ್ಲಿ ನಡೆದ ಸರ್ವ ಸಂಘಟನೆಗಳ ಪ್ರಮುಖರ ಸಭೆಯಲ್ಲಿ ಈ ಪ್ರಮುಖ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಸಮಾವೇಶದ ನೇತೃತ್ವ ವಹಿಸಲು ಪ್ರಮುಖ ಮಠಾಧೀಶರನ್ನು ಕೋರಲಾಗಿದ್ದು, ಶ್ರೀ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಶ್ರೀಗಳು ಈಗಾಗಲೇ ತಮ್ಮ ಒಪ್ಪಿಗೆ ನೀಡಿದ್ದಾರೆ. ಒಕ್ಕಲಿಗ, ದೈವಜ್ಞ, ನಾಮಧಾರಿ ಸಮುದಾಯಗಳ ಮಠಾಧೀಶರನ್ನು ಮತ್ತು ಬಂಗಾರಮಕ್ಕಿಯ ಧರ್ಮಧಿಕಾರಿಗಳನ್ನು ಸಮಾವೇಶದ ಸಾನ್ನಿಧ್ಯ ವಹಿಸುವಂತೆ ಕೋರಲು ನಿರ್ಧರಿಸಲಾಗಿದೆ.ಫೆ. 16ರಂದು ಮಧ್ಯಾಹ್ನ ತಾಲೂಕಿನ ವಿವಿಧ ಸಮುದಾಯಗಳ ಪ್ರಮುಖರ ಮತ್ತು ಸಂಘ-ಸಂಸ್ಥೆಗಳ ಪ್ರಮುಖರ ಮತ್ತು ಪರಿಸರ ಆಸಕ್ತರ ಹೋರಾಟ ಪ್ರಮುಖರ ಇನ್ನೊಂದು ಸುತ್ತಿನ ಸಭೆ ಕರೆದು ಸಮಾವೇಶದ ಸಿದ್ಧತೆಗಳ ಕುರಿತು ಚರ್ಚಿಸಲು ತೀರ್ಮಾನಿಸಲಾಗಿದೆ.
ಸಭೆಯಲ್ಲಿ ಶ್ರೀಕುಮಾರ ಸಾರಿಗೆ ಸಂಸ್ಥೆಯ ವೆಂಕಟ್ರಮಣ ಹೆಗಡೆ, ಹೋರಾಟ ಸಮಿತಿಯ ಚಂದ್ರಕಾಂತ ಕೊಚರೇಕರ, ಮಂಜುನಾಥ ಎಂ. ನಾಯ್ಕ ಗೇರುಸೊಪ್ಪ, ಜಿ.ಜಿ. ಶಂಕರ, ಯೋಗೇಶ ರಾಯ್ಕರ, ಕೇಶವ ನಾಯ್ಕ ಬಳ್ಕೂರ, ವಕೀಲ ವಿಕ್ರಮ ನಾಯ್ಕ, ಹೊನ್ನಾವರ ಉಳಿಸಿ ಸಂಘಟನೆಯ ಜಿ.ಎನ್. ಗೌಡ, ಎಂ.ಎಸ್. ಹೆಗಡೆ, ಪ್ರಭು ಪಟಗಾರ, ಶ್ರೀಧರ ಶೆಟ್ಟಿ ಜಂಬೆಬೆಟ್ಟ, ಶ್ರೀಕಲಾ ಶಾಸ್ತ್ರೀ, ಗಣೇಶ ಜಿ. ನಾಯ್ಕ ಉಪ್ಪೋಣಿ ಮತ್ತಿತರ ಪ್ರಮುಖರು ಇದ್ದರು.16ಕ್ಕೆ ಪೂರ್ವಭಾವಿ ಸಭೆ:
ಶರಾವತಿ ಪಂಪ್ಡ್ ಸ್ಟೋರೇಜ್ ಭೂಗತ ವಿದ್ಯುತ ಯೋಜನೆಯ ಅನುಷ್ಠಾನದ ವಿರುದ್ಧ ನಡೆಯುವ ಪ್ರತಿಭಟನಾ ಸಭೆಯ ಸಿದ್ಧತೆಗೆ ಫೆ. 16ರಂದು ಮಧ್ಯಾಹ್ನ 4 ಗಂಟೆಗೆ ಹೊನ್ನಾವರ ಮೂಡಗಣಪತಿ ಸಭಾಂಗಣದಲ್ಲಿ ಸರ್ವ ಸಂಘಟನೆಗಳ ಮತ್ತು ಸರ್ವ ಸಮುದಾಯಗಳ ಪ್ರಮುಖರ, ಪರಿಸರ ಆಸಕ್ತರ, ಹೋರಾಟ ಪ್ರಮುಖರ ವಿಶೇಷ ಸಭೆ ಕರೆಯಲಾಗಿದೆ. ಸರ್ವರೂ ಸಭೆಗೆ ಆಗಮಿಸಿ ತಮ್ಮ ಸಲಹೆ-ಸೂಚನೆಗಳನ್ನು ನೀಡಿ ಸಹಕರಿಸಬೇಕು ಎಂದು ಶರಾವತಿ ಉಳಿಸಿ ಹೋರಾಟ ಸಮಿತಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.