ತಾಲೂಕಿನ ಆವಿನಹಳ್ಳಿ ಹೋಬಳಿ ಕೋಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬೇಸೂರು ಗ್ರಾಮದಲ್ಲಿ ಅಣು ವಿದ್ಯುತ್ ಸ್ಥಾವರ ನಿರ್ಮಿಸುವುದನ್ನು ಖಂಡಿಸಿ ಗುರುವಾರ ಜನ ಹೋರಾಟ ವೇದಿಕೆ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಿತು. ಪಟ್ಟಣದ ಶಿವಪ್ಪನಾಯಕ ವೃತ್ತದಿಂದ ಹೊರಟ ಪ್ರತಿಭಟನಾ ಮೆರವಣಿಗೆ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಗಾಂಧಿ ಮೈದಾನದಲ್ಲಿ ಮುಕ್ತಾಯಗೊಂಡಿತು. ಪ್ರತಿಭಟನಾ ಸಭೆ ನಂತರ ಉಪವಿಭಾಗಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಸಾಗರ

ತಾಲೂಕಿನ ಆವಿನಹಳ್ಳಿ ಹೋಬಳಿ ಕೋಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬೇಸೂರು ಗ್ರಾಮದಲ್ಲಿ ಅಣು ವಿದ್ಯುತ್ ಸ್ಥಾವರ ನಿರ್ಮಿಸುವುದನ್ನು ಖಂಡಿಸಿ ಗುರುವಾರ ಜನ ಹೋರಾಟ ವೇದಿಕೆ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಿತು. ಪಟ್ಟಣದ ಶಿವಪ್ಪನಾಯಕ ವೃತ್ತದಿಂದ ಹೊರಟ ಪ್ರತಿಭಟನಾ ಮೆರವಣಿಗೆ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಗಾಂಧಿ ಮೈದಾನದಲ್ಲಿ ಮುಕ್ತಾಯಗೊಂಡಿತು. ಪ್ರತಿಭಟನಾ ಸಭೆ ನಂತರ ಉಪವಿಭಾಗಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನಾ ಸಭೆಯಲ್ಲಿ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿ, ನಾಡಿಗೆ ಬೆಳಕು ನೀಡಲು ಮೂರು ಬಾರಿ ನಿರಾಶ್ರಿತರಾದ ಜನರ ಮೇಲೆ ಮತ್ತೆಮತ್ತೆ ಹೊಸಹೊಸ ಯೋಜನೆ ಹೇರುವುದನ್ನು ಸಹಿಸುವುದಿಲ್ಲ. ನನ್ನ ಶಾಸಕತ್ವ ಹೋದರೂ ಚಿಂತೆಯಿಲ್ಲ. ಯಾವುದೇ ಕಾರಣಕ್ಕೂ ಅಣು ಸ್ಥಾವರವಾಗಲು ಬಿಡುವುದಿಲ್ಲ ಎಂದರಲ್ಲದೆ, ಬೇಸೂರು ಗ್ರಾಮ ಮಾತ್ರವಲ್ಲ ರಾಜ್ಯದ ಯಾವ ಭಾಗದಲ್ಲಿಯೂ ಅಣುವಿದ್ಯುತ್ ಸ್ಥಾವರಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಬಾರದು ಎಂದು ಆಗ್ರಹಿಸಿದರು.

ರಾಜ್ಯ ಸರ್ಕಾರದ ಹಂತದಲ್ಲಿ ಸ್ಥಾವರಕ್ಕೆ ಭೂಮಿ ಮಂಜೂರು ಆಗದಂತೆ ನಾನು ನೋಡಿಕೊಳ್ಳುತ್ತೇನೆ. ಕೇಂದ್ರ ಹಂತದಲ್ಲಿ ಯೋಜನೆಗೆ ಅನುಮತಿ ನೀಡದಂತೆ ಸಂಸದ ಬಿ.ವೈ.ರಾಘವೇಂದ್ರ ಅವರ ಮೇಲೆ ಒತ್ತಡ ಹಾಕಬೇಕು. ಅಣು ವಿದ್ಯುತ್ ಸ್ಥಾವರವಾದರೆ ಈ ಭಾಗ ಸಂಪೂರ್ಣ ನಾಶವಾಗುತ್ತದೆ. ಜನರಿಗೆ ಮಾರಕವಾಗುವ ಯಾವುದೇ ಯೋಜನೆಯ ಅನುಷ್ಠಾನಕ್ಕೆ ನಾನು ಬಿಡುವುದಿಲ್ಲ ಎಂದು ಹೇಳಿದರು.

ಮಾಜಿ ಸಚಿವ ಎಚ್.ಹಾಲಪ್ಪ ಮಾತನಾಡಿ, ಅಣು ವಿದ್ಯುತ್ ಸ್ಥಾವರವಾದರೆ ಕೇವಲ ಬೇಸೂರಿಗೆ ಮಾತ್ರ ತೊಂದರೆ ಎನ್ನುವ ಮನೋಭಾವದಿಂದ ಜನರು ಮೊದಲು ಹೊರಗೆ ಬರಬೇಕು. ಮಲೆನಾಡು ಪ್ರದೇಶದಲ್ಲಿ ಈ ಯೋಜನೆ ಸಾಧುವಲ್ಲವೆಂದು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಮನದಟ್ಟು ಮಾಡಿಕೊಡಬೇಕಾಗಿದೆ. ಸುಮಾರು ನಾಲ್ಕು ಸಾವಿರ ಮೆ.ವ್ಯಾ. ವಿದ್ಯುತ್ ಉತ್ಪಾದನೆ ಮಾಡಲು ಚಿಂತನೆ ನಡೆದಿದ್ದು, ಇದಕ್ಕೆ ೨ಸಾವಿರ ಎಕರೆ ಭೂಮಿ ಕೇಳಿದ್ದಾರೆ. ಆದರೆ ಇಷ್ಟೊಂದು ವಿದ್ಯುತ್ ಸರಬರಾಜು ಮಾಡಲು ವಿದ್ಯುತ್ ತಂತಿ ಎಳೆಯಲು ಸಾವಿರಾರು ಎಕರೆ ಅರಣ್ಯ ನಾಶವಾಗುತ್ತದೆ. ಈಗಾಗಲೆ ಸಂಸದರು ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಸಹ ಅಣು ಸ್ಥಾವರ ಸ್ಥಾಪನೆ ಕುರಿತ ಮಾಹಿತಿ ನೀಡಲಾಗಿದ್ದು, ಅವರ ಮೂಲಕ ಸಹ ಕೇಂದ್ರದ ಮೇಲೆ ಒತ್ತಡ ಹೇರಲಾಗುತ್ತದೆ ಎಂದು ಹೇಳಿದರು.

ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಬಿ.ಆರ್.ಜಯಂತ್ ಮಾತನಾಡಿ, ತಾಲೂಕಿನ ಆವಿನಹಳ್ಳಿ ಹೋಬಳಿಯಲ್ಲಿ ಇರುವವರೆಲ್ಲ ಬಹುತೇಕ ಶರಾವತಿ ಮುಳುಗಡೆ ಸಂತ್ರಸ್ತರು. ನಾಡಿಗೆ ಬೆಳಕು ನೀಡಲು ಸರ್ವಸ್ವವನ್ನು ಕಳೆದುಕೊಂಡು ಹೊಸದಾಗಿ ಬದುಕು ಕಟ್ಟಿಕೊಂಡಿರುವ ಈ ಭಾಗದ ಜನರ ಮೇಲೆ ಈಗ ಮತ್ತೊಂದು ಯೋಜನೆಯನ್ನು ಹೇರಲಾಗುತ್ತಿದೆ. ಮೂರು ತಲೆಮಾರು ಕಳೆದರೂ ಶರಾವತಿ ಸಂತ್ರಸ್ತರಿಗೆ ಯಾವ ಸರ್ಕಾರಗಳು ಭೂಮಿಯ ಹಕ್ಕನ್ನು ಕೊಟ್ಟಿಲ್ಲ. ಅದು ಬಿಟ್ಟು ಯೋಜನೆಯ ಮೇಲೆ ಯೋಜನೆಗಳನ್ನು ಹೇರಲಾಗುತ್ತಿದೆ. ಜನರನ್ನು ಕತ್ತಲಲ್ಲಿ ಇಡುವ ಸರ್ಕಾರದ ವರ್ತನೆಯನ್ನು ಖಂಡಿಸುತ್ತೇನೆ. ನಾವು ಆಯ್ಕೆ ಮಾಡಿರುವ ಜನಪ್ರತಿನಿಧಿಗಳು ಜನಪರವಾಗಿರಬೇಕು. ಜನರ ಬದುಕಿಗೆ ಮಾರಕವಾದ ಯೋಜನೆಯ ವಿರುದ್ಧ ಜನಪ್ರತಿನಿಧಿಗಳು ಗಟ್ಟಿಧ್ವನಿ ಎತ್ತಬೇಕು ಎಂದು ಒತ್ತಾಯಿಸಿದರು.

ಹೋರಾಟ ಸಮಿತಿ ಅಧ್ಯಕ್ಷ ಬಿ.ಎ.ಇಂದೂಧರ ಬೇಸೂರು ಮಾತನಾಡಿ, ಯಾವುದೇ ಕಾರಣಕ್ಕೂ ಬೇಸೂರು ಭಾಗದಲ್ಲಿ ಅಣು ವಿದ್ಯುತ್ ಸ್ಥಾವರ ಬೇಡವೆಂದು ಸರಣಿ ಸಭೆ ನಡೆಸಿ ಹೋರಾಟ ರೂಪಿಸಲಾಗಿದೆ. ಯೋಜನೆ ಕೈಬಿಡುವ ತನಕ ನಮ್ಮ ಹೋರಾಟ ನಿಲ್ಲುವುದಿಲ್ಲ. ಈಗಾಗಲೆ ಯೋಜನೆ ಬೇಡವೆಂದು ಶಾಸಕರು ಸರ್ಕಾರಕ್ಕೆ, ಮುಖ್ಯಮಂತ್ರಿಗಳಿಗೆ, ಸಚಿವರಿಗೆ ಮನವಿ ನೀಡಿದ್ದಾರೆ. ಸಂಸದರಿಗೆ ಸಹ ಯೋಜನೆ ಕೈಬಿಡುವಂತೆ ಮನವಿ ಮಾಡಲಾಗಿದೆ ಎಂದು ಹೇಳಿದರು.

ವಿಜ್ಞಾನ ಉಪನ್ಯಾಸಕ ರೋಹಿತ್ ಅಣುಸ್ಥಾವರದಿಂದಾಗುವ ಅಪಾಯದ ಅಗಾಧತೆಯನ್ನು ಮನಮುಟ್ಟುವಂತೆ ವಿವರಿಸಿದರು. ಮಾಜಿ ಸಚಿವ ಕಾಗೋಡು ತಿಮ್ಮಪ್ಪನವರು ಡೋಲು ಬಾರಿಸಿ ಸಭೆಯನ್ನು ಉದ್ಘಾಟಿಸಿದರು. ಧರ್ಮಗುರು ಅನ್ಸರ್ ಸಖಾಫಿ, ರೈತಸಂಘದ ದಿನೇಶ್ ಶಿರವಾಳ, ಪರಿಸರವಾದಿ ಅಖಿಲೇಶ್ ಚಿಪ್ಳಿ, ತಾಪಂ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ, ಕೇಂದ್ರ ಸಾಂಬಾರು ಮಂಡಳಿ ಸದಸ್ಯ ಪ್ರಸನ್ನ ಕೆರೆಕೈ, ರವಿಕುಮಾರ್ ಸಿಗಂದೂರು, ಪೋಷಿಣಿ ಬೇಸೂರು, ತೀ.ನಾ.ಶ್ರೀನಿವಾಸ್ ಇನ್ನಿತರರು ಮಾತನಾಡಿದರು. ಪ್ರತಿಭಟನೆಯಲ್ಲಿ ಶಿವಾನಂದ ಕುಗ್ವೆ, ವ.ಶಂ.ರಾಮಚಂದ್ರ ಭಟ್, ಹೊನಗೋಡು ರತ್ನಾಕರ್, ರವಿಕುಮಾರ್ ಎಚ್.ಎಂ., ಎಂ.ವಿ.ಪ್ರತಿಭಾ, ಸಫಿಯಾ ಅಬೂಬಕರ್, ಸುವರ್ಣ ಟೀಕಪ್ಪ, ಚೇತನರಾಜ ಕಣ್ಣೂರು, ಡಾ.ಜೀವನ್ ಇನ್ನಿತರರು ಹಾಜರಿದ್ದರು. ಜಿ.ಟಿ.ಸತ್ಯನಾರಾಯಣ ಕಾರ್ಯಕ್ರಮ ನಿರ್ವಹಿಸಿದರು.