ನಾಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಬೃಹತ್ ಪ್ರತಿಭಟನೆ

| Published : Jan 22 2025, 12:36 AM IST

ಸಾರಾಂಶ

ಈ ಪ್ರತಿಭಟನೆಗೆ ರಾಜ್ಯದ ಹಲವಾರು ಜಿಲ್ಲೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ದಲಿತಪರ ಸಂಘಟನೆಗಳ ಹೋರಾಟಗಾರರು ಆಗಮಿಸಲಿದ್ದಾರೆ. ಜೊತೆಗೆ ಹೊಸಕೋಟೆ ತಾಲೂಕಿನಿಂದ 2 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಲಿದ್ದು, ನಗರದ ತಾಲೂಕು ಕಚೇರಿ ಮುಂಭಾಗದಿಂದ ಫ್ರೀಡಂ ಪಾರ್ಕ್ ಗೆ 25ಕ್ಕೂ ಹೆಚ್ಚಿನ ಬಸ್ ಗಳಲ್ಲಿ ತೆರಳಿ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದೇವೆ.

ಕನ್ನಡಪ್ರಭ ವಾರ್ತೆ ಹೊಸಕೋಟೆ

ಸಂವಿಧಾನ ರಚನೆ ಮಾಡಿದ ಅಂಬೇಡ್ಕರ್ ಅವರನ್ನು ಗೃಹ ಸಚಿವ ಅಮಿತ್ ಶಾ ರವರು ಸಂಸತ್ ನಲ್ಲಿ ತುಚ್ಚವಾಗಿ ಮಾತನಾಡುವ ಮೂಲಕ ಅವಮಾನ ಮಾಡಿದ್ದು, ಅಮಿತ್ ಶಾ ಅವರನ್ನು ಸಂಪುಟದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿ ಜನವರಿ 23ರ ಗುರುವಾರದಂದು ದಲಿತ ಸಂಘರ್ಷ ಸಮಿತಿಗಳ ಒಕ್ಕೂಟ ವತಿಯಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಜಿಲ್ಲಾ ಪ್ರಧಾನ ಸಂಚಾಲಕ ಕೊರಳೂರು ಶ್ರೀನಿವಾಸ್ ತಿಳಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂಬೇಡ್ಕರ್ ಅವರು ಇಂದು ಭಾರತದ ರತ್ನ ಮಾತ್ರವಲ್ಲ, ವಿಶ್ವದ ರತ್ನವಾಗಿ ಹೊರಹೊಮ್ಮಿದ್ದಾರೆ. ಆದರೆ ಅಂಬೇಡ್ಕರ್ ಜನಿಸಿದ ಭಾರತದಲ್ಲಿ ಕೆಲವು ದುಷ್ಟ ಶಕ್ತಿಗಳು ಅವರ ಹೆಸರನ್ನು ಹಿಡಿದು ವ್ಯಂಗ್ಯ ಮಾಡುತ್ತಿವೆ. ಇತ್ತೀಚಿನ ಉದಾಹರಣೆ ಎಂದರೆ ಭಾರತ ಸರ್ಕಾರದ ಬಿಜೆಪಿಯ ಗೃಹ ಮಂತ್ರಿ ಅಮಿತ್ ಶಾ ಸಂಸತ್ತಿನಲ್ಲಿ ಆಡಿರುವ ಉದ್ದೇಶಪೂರ್ವಕ ಮಾತುಗಳಾಗಿವೆ. ಗೌರವಾನ್ವಿತ ಪದವಿಯನ್ನು ಅಲಂಕರಿಸಿರುವ ಅಮಿತ್ ಶಾ ಪುಡಿ ರೌಡಿಯಂತೆ ದೇಶದ ಕೇಂದ್ರ ಸ್ಥಾನವಾದ ಸಂಸತ್ತಿನಲ್ಲಿ ಅಂಬೇಡ್ಕರ್ ಕುರಿತು ಆಡಿರುವ ಮಾತುಗಳು ಆತನ ವಿಷಯುಕ್ತ ಮನಸ್ಸನ್ನು ಬಹಿರಂಗಪಡಿಸಿದೆ.

ಇವರ ಮಾತುಗಳಿಂದ ದಲಿತರಿಗೆ ಹಾಗೂ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದಂತೆ ಆಗಿದ್ದು, ಗೃಹ ಮಂತ್ರಿ ಅಮಿತ್ ಶಾ ಸಂಪುಟದಿಂದ ವಜಾ ಆಗಬೇಕು, ಅಂಬೇಡ್ಕರ್ ಪ್ರತಿಮೆ ಮುಂಭಾಗ ಮಂಡಿಯೂರಿ ಕ್ಷಮೆ ಕೇಳಲೇಬೇಕು ಎಂದು ಆಗ್ರಹಿಸಿ ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ.

ಈ ಪ್ರತಿಭಟನೆಗೆ ರಾಜ್ಯದ ಹಲವಾರು ಜಿಲ್ಲೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ದಲಿತಪರ ಸಂಘಟನೆಗಳ ಹೋರಾಟಗಾರರು ಆಗಮಿಸಲಿದ್ದಾರೆ. ಜೊತೆಗೆ ಹೊಸಕೋಟೆ ತಾಲೂಕಿನಿಂದ 2 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಲಿದ್ದು, ನಗರದ ತಾಲೂಕು ಕಚೇರಿ ಮುಂಭಾಗದಿಂದ ಫ್ರೀಡಂ ಪಾರ್ಕ್ ಗೆ 25ಕ್ಕೂ ಹೆಚ್ಚಿನ ಬಸ್ ಗಳಲ್ಲಿ ತೆರಳಿ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದೇವೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸಹಸ್ರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.

ತಾಲೂಕು ಪ್ರಧಾನ ಸಂಚಾಲಕ ಪಿಎಂ ಚಿನ್ನಸ್ವಾಮಿ, ಜಿಲ್ಲಾ ಸಂಘಟನೆ ಸಂಚಾಲಕ ಮುನಿಸ್ವಾಮಿ, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಲಕ್ಷ್ಮಣ್, ಮಂಜುನಾಥ್, ತಾಲೂಕು ಮಹಿಳಾ ಪ್ರಧಾನ ಸಂಚಾಲಕಿ ನಿರ್ಮಲ, ತಾಲೂಕು ಸಂಘಟನೆ ಸಂಚಾಲಕ ನಾಗೇಶ್, ರವಿಚಂದ್ರ, ತಾಲೂಕು ಕಾರ್ಯಕಾರಿ ಸಮಿತಿ ಸದಸ್ಯ ನಾರಾಯಣ ಸ್ವಾಮಿ, ಜಡಿಗೇನಹಳ್ಳಿ ಸಂಘಟನಾ ಸಂಚಾಲಕ ಗೋಪಾಲ್, ಪೂರ್ವ ತಾಲೂಕು ಸಂಘಟನೆ ಸಂಚಾಲಕ ಮುನಿರಾಜು ಹಾಜರಿದ್ದರು.