ಟಿಬೆಟ್ ನಿಂದ ಚೀನಾ ತಕ್ಷಣ ಹೊರ ಹೋಗುವ ಮೂಲಕ ತಮ್ಮ ದೇಶಕ್ಕೆ ಸ್ವಾತಂತ್ರ್ಯ ನೀಡುವಂತೆ ಒತ್ತಾಯಿಸಿ ಕುಶಾಲನಗರ ಸಮೀಪದ ಬೈಲುಕುಪ್ಪೆ ಟಿಬೆಟಿಯನ್ ನಿರಾಶ್ರಿತರ ಶಿಬಿರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು.

ಕುಶಾಲನಗರ: ಟಿಬೆಟ್ ನಿಂದ ಚೀನಾ ತಕ್ಷಣ ಹೊರ ಹೋಗುವ ಮೂಲಕ ತಮ್ಮ ದೇಶಕ್ಕೆ ಸ್ವಾತಂತ್ರ್ಯ ನೀಡುವಂತೆ ಒತ್ತಾಯಿಸಿ ಕುಶಾಲನಗರ ಸಮೀಪದ ಬೈಲುಕುಪ್ಪೆ ಟಿಬೆಟಿಯನ್ ನಿರಾಶ್ರಿತರ ಶಿಬಿರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು.

ಟಿಬೆಟ್ ಚೀನಾ ಭಾಗವಲ್ಲ. ಚೀನಾ ಕಮ್ಯುನಿಸ್ಟ್ ಸರ್ಕಾರದ ಮೂಲಕ ಟಿಬೆಟ್ ನಲ್ಲಿ ಸಂಸ್ಕೃತಿ, ಭಾಷೆ ನಾಶವಾಗುತ್ತಿದೆ. ಟಿಬೆಟ್ ವಿರೋಧಿ ನೀತಿಯನ್ನು ಅನುಸರಿಸುವ ಮೂಲಕ ಮಕ್ಕಳಿಗೆ ದೌರ್ಜನ್ಯ ಎಸಗಲಾಗುತ್ತಿದೆ ಎಂದು ಆರೋಪಿಸಿ ಕುಶಾಲನಗರ ಸಮೀಪದ ಬೈಲುಕೊಪ್ಪೆ ಒಂದನೇ ಕ್ಯಾಂಪ್‌ನಲ್ಲಿ ಬೃಹತ್ ರ್‍ಯಾಲಿ ನಡೆಸಿ ನಂತರ ಮೆರವಣಿಗೆ ತೆರಳಿ ಚೀನಾದ ವಿರುದ್ಧ ಘೋಷಣೆ ಕೂಗಿದರು. ನ್ಯಾಯಕ್ಕಾಗಿ ಜಾಗೃತಿ ಸ್ವಾತಂತ್ರ್ಯಕ್ಕಾಗಿ ಏಕತೆ ಹೆಸರಿನಲ್ಲಿ ನಡೆದ ಹೋರಾಟಕ್ಕೆ ಎಲ್ಲರೂ ಧ್ವನಿ ಎತ್ತುವ ಮೂಲಕ ಬೆಂಬಲ ನೀಡಿ ಎಂದು ಬೈಲುಕೊಪ್ಪೆ ವಲಯ ಟಿಬೆಟಿಯನ್ ಯುವ ಕಾಂಗ್ರೆಸ್ ಮುಖಂಡರು ಮನವಿ ಮಾಡಿದ್ದಾರೆ.ಚೀನಾ ದೌರ್ಜನ್ಯ ವಿರೋಧಿಸಿ ಹಲವು ಟಿಬೆಟಿಯನ್ ಯುವಕರು ಟಿಬೆಟ್ ದೇಶದಲ್ಲಿ ಆತ್ಮಾಹುತಿ ಮಾಡಿಕೊಂಡಿದ್ದಾರೆ. ಚೀನಾ ಬಂಧಿಸಿರುವ ಟಿಬೆಟಿಯನ್ನರನ್ನು ತಕ್ಷಣ ಬಿಡುಗಡೆ ಮಾಡಬೇಕು. ಭಾಷೆ ಮತ್ತು ಸಂಸ್ಕೃತಿ ಸಂಪೂರ್ಣ ನಾಶವಾಗುತ್ತಿದೆ. ಅಭಿವೃದ್ಧಿ ಹೆಸರಿನಲ್ಲಿ ಸಂಸ್ಕೃತಿಯ ಸಂಹಾರ ನಡೆಯುತ್ತಿದೆ. ಟಿಬೆಟ್ ಸ್ವತಂತ್ರ ಆಗಲೇಬೇಕು. ಚೀನಾ ತಕ್ಷಣ ಟಿಬೆಟ್ ದೇಶ ಬಿಟ್ಟು ಹೊರ ಹೋಗಬೇಕು ಎಂದು ಘೋಷಣೆ ಕೂಗಿದರು.

ನೂರಾರು ಸಂಖ್ಯೆಯ ಬೌದ್ದ ಬಿಕ್ಷುಗಳು ಟಿಬೆಟಿಯನ್ ನಾಗರಿಕರು ಟಿಬೆಟ್ ಧಾರ್ಮಿಕ ಗುರುಗಳಾದ 14ನೇ ದಲೈಲಾಮ ಅವರ ಭಾವಚಿತ್ರದೊಂದಿಗೆ ಟಿಬೆಟ್ ದೇಶದ ಧ್ವಜವನ್ನು ಮೈಗೆ ಸುತ್ತಿಕೊಂಡು ಚೀನಾದ ವಿರುದ್ಧ ಘೋಷಣೆ ಕೂಗುತ್ತಾ ಶಿಬಿರದಿಂದ ಮುಖ್ಯ ರಸ್ತೆಯಲ್ಲಿ ತೆರಳಿ ಮೆರವಣಿಗೆ ಸಾಗಿದರು.