ಹುಬ್ಬಳ್ಳಿ:

ಹು-ಧಾ ಪೂರ್ವ ಕ್ಷೇತ್ರದ ಶಾಸಕ ಪ್ರಸಾದ್‌ ಅಬ್ಬಯ್ಯಗೆ ಸಚಿವ ಸ್ಥಾನ ನೀಡಲು ಒತ್ತಾಯಿಸಿ ಕಾಂಗ್ರೆಸ್‌ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಬುಧವಾರ ನಗರದ ಇಂಡಿ ಪಂಪ್‌ ವೃತ್ತದಲ್ಲಿ ಗಂಟೆಗೂ ಹೆಚ್ಚುಕಾಲ ರಸ್ತೆ ತಡೆದು, ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್‌ ಹೈಕಮಾಂಡ್‌ ಶಾಸಕ ಅಬ್ಬಯ್ಯಗೆ ಸಚಿವ ಸ್ಥಾನ ಘೋಷಣೆ ಮಾಡುವ ವರೆಗೂ ಹೋರಾಟ ನಿಲ್ಲಿಸುವುದಿಲ್ಲ. ಸಂಪುಟ ವಿಸ್ತರಣೆ ವೇಳೆಯೂ ಸಚಿವ ಸ್ಥಾನ ನೀಡದಿದ್ದರೆ ಹು-ಧಾ ಮಹಾನಗರ ಸೇರಿದಂತೆ ಕಿತ್ತೂರು ಕರ್ನಾಟಕ ಸಂಪೂರ್ಣ ಬಂದ್‌ ಮಾಡಲಾಗುವುದು ಎಂದು ಎಚ್ಚರಿಸಿದರು. ಈ ವೇಳೆ ಕೆಲ ಕಾಲ ರಸ್ತೆ ಸಂಚಾರ ಸ್ಥಗಿತಗೊಂಡ ಕಾರಣಕ್ಕೆ ವಾಹನ ಸವಾರರು ಹಾಗೂ ಪಾದಚಾರಿಗಳು ಪರದಾಡಿದರು.

ಮಹಾನಗರ ಪಾಲಿಕೆ ವಿಪಕ್ಷ ನಾಯಕ ಇಮ್ರಾನ್‌ ಯಲಿಗಾರ ಮಾತನಾಡಿ, ಪ್ರಸಾದ ಅಬ್ಬಯ್ಯ ಅವರು ಜನಪರ ಕಾಳಜಿ ಹಾಗೂ ಅಭಿವೃದ್ಧಿಪರ ನಡೆ ಹೊಂದಿದ್ದು ಅವರಿಗೆ ಕೂಡಲೇ ಹೈಕಮಾಂಡ್‌ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿದರು.

ದಲಿತ ಮುಖಂಡ ಗುರುನಾಥ ಉಳ್ಳಿಕಾಶಿ ಮಾತನಾಡಿ, ಪ್ರಸಾದ್‌ ಅಬ್ಬಯವರಿಗೆ ಸಚಿವ ಸ್ಥಾನ ನೀಡಿದರೆ ಈ ಭಾಗದ ಕೆಳ ಸಮುದಾಯಕ್ಕೆ ನ್ಯಾಯ ಸಿಗಲಿದೆ ಎಂದು ಹೇಳಿದರು.


ಪೊಲೀಸರು ಪ್ರತಿಭಟನಾ ನಿರತರನ್ನು ಮನವೊಲಿಸಲು ಪ್ರಯತ್ನಿಸಿದರು. ಆದರೆ, ಪಟ್ಟು ಬಿಡದ ಪ್ರತಿಭಟನಾಕಾರರು ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್‌ ಮಹೇಶ ಗಸ್ತೆ ಮೂಲಕ ನೂತನ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.

ಈ ವೇಳೆ ಪಾಲಿಕೆ ಸದಸ್ಯರಾದ ದೊರೆರಾಜ್‌ ಮಣಿಕುಂಟ್ಲ, ಇಕ್ಬಾಲ್‌ ಮೊಹಮ್ಮದ್‌ ನವಲೂರು, ಹನುಮಂತಪ್ಪ ದೊಡಮನಿ, ಬಷೀರ್‌ ಅಹ್ಮದ್‌ ಗುಡಮಾಲ್‌ ಸೇರಿದಂತೆ ಸಾವಿರಾರು ಜನರು ಪಾಲ್ಗೊಂಡಿದ್ದರು.