ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಧರ್ಮಸ್ಥಳದ ಕ್ಷೇತ್ರದ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ ಹಲವರು ಅಪಪ್ರಚಾರ ಮಾಡುತ್ತಿರುವುದನ್ನು ಖಂಡಿಸಿ ಧರ್ಮಸ್ಥಳ ಪರ ಭಕ್ತರು ಸೋಮವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.ನಗರದ ಸಿಲ್ವರ್ ಜ್ಯೂಬಿಲಿ ಉದ್ಯಾನವನದ ಬಳಿ ನೆರೆದ ನೂರಾರು ಭಕ್ತರು ಪ್ರತಿಭಟನಾ ಮೆರವಣಿಗೆಯಲ್ಲಿ ಸಾಗಿಬಂದರು. ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಬಳಿಕ ಜಿಲ್ಲಾಧಿಕಾರಿ ಕಚೇರಿವರೆಗೆ ಆಗಮಿಸಿ ಪ್ರತಿಭಟನಾ ಧರಣಿ ನಡೆಸಿದರು.
ಕೆಲವು ವರ್ಷಗಳಿಂದ ಗಿರೀಶ್ ಮಟ್ಟಣ್ಣನವರ್, ಮಹೇಶ್ ಶೆಟ್ಟಿ ತಿಮರೋಡಿ, ಎಂ.ಡಿ.ಸಮೀರ್, ಸಂತೋಷ್ ಶೆಟ್ಟಿ, ಟಿ.ಜಯಂತ್, ಅಜಯ್ ಅಂಚನ್ ಮತ್ತು ಅವನ ಸಹಚರರು ಸೇರಿಕೊಂಡು ಧರ್ಮಸ್ಥಳದ ಶ್ರೀಮಂಜುನಾಥ ಸ್ವಾಮಿ ದೇಗುಲ ಹಾಗೂ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಹೆಸರಿಗೆ ಕಳಂಕ ತರುವಂತಹ ಕೀಳುಮಟ್ಟದ ಭಾಷೆಯನ್ನು ಉಪಯೋಗಿಸುತ್ತಿದ್ದಾರೆ. ಅದರ ವಿಡಿಯೋ ತುಣುಕುಗಳನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಹರಿಯಬಿಡುತ್ತಿದ್ದಾರೆ. ಕ್ಷೇತ್ರವನ್ನು ಗುರಿಯಾಗಿಸಿಕೊಂಡು ಯಾವುದೇ ದಾಖಲೆಗಳಿಲ್ಲದೆ ನಿರಂತರವಾಗಿ ಸುಳ್ಳು ಸುದ್ದಿ ಪ್ರಸಾರ ಮಾಡುತ್ತಿರುವುದರಿಂದ ಕೋಟ್ಯಂತರ ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಆರೋಪಿಸಿದರು.ಅನಾಮಿಕ ವ್ಯಕ್ತಿಯೊಬ್ಬ ನೀಡಿದ ದೂರಿನ ಆಧಾರದ ಮೇಲೆ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ ರಚಿಸಿ ತನಿಖೆ ನಡೆಸುತ್ತಿದೆ. ಅದನ್ನು ಕ್ಷೇತ್ರದ ಭಕ್ತವೃಂದದವರಾದ ನಾವೆಲ್ಲರೂ ಸ್ವಾಗತಿಸುತ್ತೇವೆ. ಆದರೆ, ಇದೀಗ ಅನಾಮಿಕ ದೂರುದಾರನನ್ನು ಬಳಸಿಕೊಂಡು ಶ್ರೀಕ್ಷೇತ್ರದ ಬಗ್ಗೆ ದಿನಕ್ಕೊಂದು ರೀತಿಯಲ್ಲಿ ತಮ್ಮ ಯೂಟ್ಯೂಬ್, ಫೇಸ್‌ಬುಕ್ ಮುಂತಾದ ಸಾಮಾಜಿಕ ಜಾಲ ತಾಣಗಳ ಮೂಲಕ ಸುಳ್ಳು ಮಾಹಿತಿ ಬಿತ್ತರಿಸಿ ಭಕ್ತರಿಗೆ ನೋವುಂಟು ಮಾಡುತ್ತಿರುವುದನ್ನು ನಾವು ಸಹಿಸುವುದಿಲ್ಲ ಎಂದು ಟೀಕಿಸಿದ್ದಾರೆ.
ಸೌಜನ್ಯಳಿಗೆ ನ್ಯಾಯ ದೊರಕಿಸುವ ನೆಪದಲ್ಲಿ ಧರ್ಮಸ್ಥಳವನ್ನು ಗುರಿಯಾಗಿಸಿಕೊಂಡು ಹಲವರು ಷಡ್ಯಂತ್ರ, ಅಪಪ್ರಚಾರ ಮಾಡುತ್ತಿರುವವರ ಹಿನ್ನೆಲೆ ಏನು. ಸುಳ್ಳು ಆರೋಪ ಮಾಡಲು ಪ್ರಚೋದಿಸುತ್ತಿರುವವರರು ಯಾರು, ಈ ತಂಡಕ್ಕೆ ಹಣಕಾಸಿನ ನೆರವು ಎಲ್ಲಿಂದ ಬರುತ್ತಿದೆ ಎಂಬುದನ್ನು ತಿಳಿಯಲು ಸೂಕ್ತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.ತಮ್ಮ ಮೊಬೈಲ್‌ನಲ್ಲಿ ಸಾಕ್ಷಿಗಳಿವೆ ಎಂದು ವೇದಿಕೆಗಳು, ಸಾಮಾಜಿಕ ಜಾಲ ತಾಣಗಳಲ್ಲಿ ಘಂಟಾಘೋಷವಾಗಿ ಭಾಷಣ ಬಿಗಿಯುವ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್, ಟಿ.ಜಯಂತ್, ಸಂತೋಷ್ ಶೆಟ್ಟಿ, ಅಜಯ್ ಅಂಚನ್ ಅವರನ್ನು ವಿಚಾರಣೆಗೆ ಒಳಪಡಿಸಿ ಸತ್ಯಾಸತ್ಯತೆಯನ್ನು ಬಹಿರಂಗಪಡಿಸಬೇಕು. ಈ ನಿಟ್ಟಿನಲ್ಲಿ ಈಗಿರುವ ಎಸ್‌ಐಟಿ ತಂಡ ಅಥವಾ ಮತ್ತೊಂದು ತನಿಖಾ ತಂಡ ರಚಿಸಿ ಕೂಡಲೇ ತನಿಖೆ ಕೈಗೊಳ್ಳುವಂತೆ ಆಗ್ರಹಪಡಿಸಿದರು.
ಹಾಲಿ ಎಸ್‌ಐಟಿ ನಡೆಸುತ್ತಿರುವ ತನಿಖೆ ಪೂರ್ಣಗೊಂಡಿಲ್ಲ. ತನಿಖೆ ಮುಗಿದು ಸರ್ಕಾರಕ್ಕೆ ವರದಿ ಕೊಡಲಿ. ವರದಿಯಲ್ಲಿ ಏನಿರುತ್ತೋ ನೋಡೋಣ. ತಪ್ಪಿತಸ್ಥರು ಯಾರೇ ಇದ್ದರೂ ಶಿಕ್ಷೆಯಾಗಲಿ. ಅದಕ್ಕೆ ನಮ್ಮ ಅಭ್ಯಂತರವಿಲ್ಲ. ವಿನಾಕಾರಣ ಧರ್ಮಸ್ಥಳ ಮತ್ತು ವೀರೇಂದ್ರ ಹೆಗ್ಗಡೆಯವರನ್ನೇ ಗುರಿಯಾಗಿಸಿಕೊಂಡು ಪಿತೂರಿ ನಡೆಸುತ್ತಿರುವಂತೆ ಕಂಡು ಬರುತ್ತಿದೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿದರು.ಪ್ರತಿಭಟನೆಯಲ್ಲಿ ತಗ್ಗಹಳ್ಳಿ ವೆಂಕಟೇಶ್, ಕಾರಸವಾಡಿ ಮಹದೇವು, ಬಿಜೆಪಿ ನಗರ ಘಟಕದ ಅಧ್ಯಕ್ಷ ವಸಂತಕುಮಾರ್, ಬಿಜೆಪಿ ವಕ್ತಾರ ಸಿ.ಟಿ.ಮಂಜುನಾಥ, ಬಜರಂಗಸೇನೆ ಮಂಜುನಾಥ, ಕೆ.ಸಿ.ರವೀಂದ್ರ, ಎಂ.ವಿ.ಧರಣೇಂದ್ರಯ್ಯ, ಮಂಜೇಶ್, ಶಾಂತಿಪ್ರಸಾದ್ ಸೇರಿದಂತೆ ಶ್ರೀ ಧರ್ಮಸ್ಥಳ ಸ್ವಸಹಾಯ ಸಂಘದ ಮಹಿಳಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.