ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ೨೬ವರ್ಷ ಕಳೆದರೂ ಪೂರ್ಣಗೊಂಡಿಲ್ಲ. ತುಮಕೂರು ನಾಲೆ ಯೋಜನೆಗೆ ಒಳಪಡುವ ಹೊಸದುರ್ಗ, ಚಿಕ್ಕನಾಯಕನಹಳ್ಳಿ ಭಾಗದ ಕಾಮಗಾರಿ ಇನ್ನೂ ಅರ್ಧದಷ್ಟು ಪೂರ್ಣಗೊಂಡಿಲ್ಲ. ಆದ್ದರಿಂದ ತುಮಕೂರು ನಾಲೆ ಕಾಮಗಾರಿ ಪೂರ್ಣಗೊಳಿಸಲು ಸರ್ಕಾರ ಹಣ ಬಿಡುಗಡೆ ಮಾಡಿ ನೀರು ಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಕೆ.ಎಸ್. ಧನಂಜಯರಾಧ್ಯ ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ಶಿರಾ

ಭದ್ರ ಮೇಲ್ದಂಡೆ ಯೋಜನೆ ತುಮಕೂರು ನಾಲೆ ಕಾಮಗಾರಿ ಪೂರ್ಣಗೊಳಿಸಿ ನೀರು ಹರಿಸಲು ಒತ್ತಾಯಿಸಿ ಮಂಗಳವಾರ ನಗರದ ಅಂಬೇಡ್ಕರ್ ಸರ್ಕಲ್‌ನಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿ, ಈ ವರ್ಷ ಮುಂಗಾರು ವಿಫಲವಾಗಿದೆ. ಭೀಕರ ಬರ ಆವರಿಸಿದೆ. ನೂರಾರು ಕೊಳವೆ ಬಾವಿಗಳು ಬತ್ತಿವೆ. ಕೇಂದ್ರ ಸರಕಾರ ಭದ್ರಾ ಮೇಲ್ದಂಡೆ ಯೋಜನೆ ರಾಷ್ಟ್ರೀಯ ಯೋಜನೆ ಎಂದು ಘೋಷಿಸಿ ೫೩೦೦ ಕೋಟಿ ಅನುದಾನ ನೀಡುವುದಾಗಿ ತಿಳಿಸಿತ್ತು. ಅದಾಗಿ ೩ ವರ್ಷ ಕಳೆದರೂ ಹಣ ಬಿಡುಗಡೆ ಮಾಡಿಲ್ಲ. ಆದ್ದರಿಂದ ಕುಂಟುತ್ತ ಸಾಗುತ್ತಿರುವ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಅಡೆತಡೆಗಳನ್ನು ನಿವಾರಿಸಿ ಹಣ ಬಿಡುಗಡೆ ಮಾಡಿ ಶೀಘ್ರ ಕಾಮಗಾರಿ ಪೂರ್ಣಗೊಳಿಸಿ ಎಂದು ಆಗ್ರಹಿಸಿದರು.

ಎಐಬಿಎಸ್ಪಿ ಜಿಲ್ಲಾ ಸಂಯೋಜಕ ಜಿ.ಎಸ್. ಮಂಜುನಾಥ್ ಮಾತನಾಡಿ, ಸ್ವಾತಂತ್ರ್ಯ ಬಂದು ೭೫ ವರ್ಷ ಕಳೆದರೂ ಸರಕಾರಗಳು ಜನರಿಗೆ ಶುದ್ಧ ಕುಡಿಯುವ ನೀರನ್ನು ನೀಡಲು ವಿಫಲವಾಗಿವೆ. ಇತ್ತೀಚಿಗೆ ಮಳೆಯ ಕೊರತೆಯಿಂದ ಶಿರಾ ತಾಲೂಕಿನಲ್ಲಿ ಅಂತರ್ಜಲ ಕುಸಿದಿದ್ದು, ಕುಡಿಯುವ ನೀರು ಮತ್ತು ತೋಟಗಾರಿಕೆ ಬೆಳೆಗಳನ್ನು ಉಳಿಸಿಕೊಳ್ಳಲು ಕಷ್ಟವಾಗಿದೆ. ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಭೂಮಿ ಕಳೆದುಕೊಂಡಿರುವ ರೈತರಿಗೆ ಕೂಡಲೇ ಹಣ ಬಿಡುಗಡೆ ಮಾಡಬೇಕು. ಯೋಜನೆಯಲ್ಲಿ ಸೇರದೆ ಕೈಬಿಟ್ಟಿರುವ ಕೆರೆಗಳನ್ನು ಯೋಜನೆ ವ್ಯಾಪ್ತಿಗೆ ಸೇರಿಸಬೇಕು. ಹೇಮಾವತಿ ನಾಲೆಯಿಂದ ಕಳ್ಳಂಬೆಳ್ಳ ಕಾಲುವೆಗೆ ನೀರು ಬಿಡುಗಡೆ ಮಾಡಿ ಕಳ್ಳಂಬೆಳ್ಳ, ಶಿರಾ, ಮದಲೂರು ಸೇರಿ ೧೫ಕೆರೆಗಳಿಗೆ ನೀರು ಹರಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ರೈತ ಸಂಘದ ತಾಲೂಕು ಅಧ್ಯಕ್ಷ ಮಹಂತೇಶ್ ಬಿ., ಹಸಿರು ಸೇನೆ ತಾಲೂಕು ಅಧ್ಯಕ್ಷ ಗಿರೀಶ್. ಬಿ.ಟಿ., ಕಸಬಾ ಹೋಬಳಿ ಅಧ್ಯಕ್ಷ ನಾಗರಾಜು, ತಾಲೂಕು ಅಧ್ಯಕ್ಷ ವೀರಕ್ಯಾತಯ್ಯ, ಉಪಾಧ್ಯಕ್ಷೆ ರಂಗಮ್ಮ, ರೈತ ಮುಖಂಡರಾದ ಹನುಮಂತಪ್ಪ, ಚಿಕ್ಕಗೂಳ ನಾಗರಾಜು, ತೇರುಮಲ್ಲಪ್ಪ, ಕಳ್ಳಂಬೆಳ್ಳ ನಾಗರಾಜು, ಕುದುರೇ ಕುಂಟೆ ಲಕ್ಕಣ್ಣ, ರಾಜಣ್ಣ ಬುಕ್ಕಾಪಟ್ಟಣ, ಎಂ.ಮುದ್ದರಾಜು, ರೇಣುಕಾರಾಧ್ಯ, ರಮೇಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.