ಕಲಾದಗಿ: ಭಾರತೀಯ ಕಿಸಾನ್‌ ಸಂಘದ ನೇತೃತ್ವದಲ್ಲಿ ರೈತರು ಕಬ್ಬಿಗೆ ನ್ಯಾಯಯುತ ಲಾಭದಾಯಕ ಬೆಲೆ ನೀಡಲು ಆಗ್ರಹಿಸಿ ಗದ್ದನಕೇರಿ ಕ್ರಾಸ್ ಬಳಿ ಹುಬ್ಬಳ್ಳಿ ವಿಜಯಪುರ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಕಲಾದಗಿ

ಕಬ್ಬು ಬೆಳೆಗಾರರಿಗೆ ಪ್ರತಿ ಟನ್‍ಗೆ ₹5,500 ಬೆಲೆ ನೀಡಬೇಕು ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬಾಗಲಕೋಟೆ ತಾಲೂಕಿನ ಗದ್ದನಕೇರಿ ಕ್ರಾಸ್ ಬಳಿ ಭಾರತೀಯ ಕಿಸಾನ್ ಸಂಘದ ನೇತೃತ್ವದಲ್ಲಿ ನೂರಾರು ರೈತರು ಹುಬ್ಬಳ್ಳಿ–ವಿಜಯಪುರ ರಾಷ್ಟ್ರೀಯ ಹೆದ್ದಾರಿ ಹಾಗೂ ರಾಯಚೂರು–ಬೆಳಗಾವಿ ರಾಜ್ಯ ಹೆದ್ದಾರಿ ತಡೆದು, ಮಾನವ ಸರಪಳಿ ನಿರ್ಮಿಸಿ ಬೃಹತ್ ಪ್ರತಿಭಟನೆ ನಡೆಸಿದರು.

ಭಾರತೀಯ ಕಿಸಾನ್‌ ಸಂಘದ ಜಿಲ್ಲಾಧ್ಯಕ್ಷ ವಿರುಪಾಕ್ಷಯ್ಯ ಹಿರೇಮಠ ಮಾತನಾಡಿ, ಕೇಂದ್ರ ಸರ್ಕಾರ ಕಬ್ಬಿನ ನ್ಯಾಯಯುತ ಮತ್ತು ಲಾಭದಾಯಕ ಬೆಲೆಗೆ ಸಂಬಂಧಿಸಿದ ಎಫ್‍ಆರ್‌ಪಿ ದರ ಕೂಡಲೇ ಪರಿಷ್ಕರಿಸಬೇಕು. ರಾಜ್ಯ ಸರ್ಕಾರ ಪ್ರತಿ ಟನ್‍ಗೆ ₹1,000 ರಾಜ್ಯ ಸಲಹಾ ಬೆಲೆ (ಎಸ್.ಎ.ಪಿ) ಘೋಷಿಸಿ ತಕ್ಷಣ ಜಾರಿಗೊಳಿಸಬೇಕು. ಎಲ್ಲ ಸೇರಿ ರೈತರಿಗೆ ಪ್ರತಿ ಟನ್ ಕಬ್ಬಿಗೆ ₹5,500 ದರ ನೀಡಬೇಕು ಎಂದು ಆಗ್ರಹಿಸಿದರು.

ಸಕ್ಕರೆ ಕಾರ್ಖಾನೆಗಳಿಂದ ಉತ್ಪಾದನೆಯಾಗುವ ಸಕ್ಕರೆ, ಎಥೆನಾಲ್, ಮೊಲಾಸಿಸ್, ಬಗಾಸ್, ಪ್ರೆಸ್‍ಮಡ್ ಹಾಗೂ ವಿದ್ಯುತ್ ಸೇರಿದಂತೆ ಎಲ್ಲ ಉಪ ಉತ್ಪನ್ನಗಳ ಆದಾಯದಲ್ಲಿ ಶೇ.70ರಷ್ಟು ಪಾಲನ್ನು ಕಬ್ಬು ಬೆಳೆಗಾರರಿಗೆ ನೀಡಬೇಕು. ಕಬ್ಬು ಪೂರೈಸಿದ 15 ದಿನಗಳೊಳಗೆ ರೈತರ ಖಾತೆಗೆ ಬಿಲ್ ಹಣ ಜಮಾ ಮಾಡುವುದು ಕಡ್ಡಾಯವಾಗಬೇಕು. ವಿಳಂಬ ಮಾಡಿದ ಕಾರ್ಖಾನೆಗಳಿಗೆ ಬಡ್ಡಿ ಹಾಗೂ ದಂಡ ವಿಧಿಸಬೇಕು ಎಂದು ಹಿರೇಮಠ ಒತ್ತಾಯಿಸಿದರು.

ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಲಕ್ಷ್ಮಣ್ಣ ಶಿರಬೂರ ಮಾತನಾಡಿ, ಕಾರ್ಖಾನೆಗಳಲ್ಲಿ ಡಿಜಿಟಲ್ ತೂಕದ ಯಂತ್ರಗಳನ್ನು ಅಳವಡಿಸಿ ತೂಕದಲ್ಲಿ ನಡೆಯುವ ಮೋಸ ತಡೆಗಟ್ಟಬೇಕು. ಲಗಾಣಿ ಹಾಗೂ ಇತರೆ ಅನಗತ್ಯ ಕಡಿತ ನಿಲ್ಲಿಸಬೇಕು. ಜಿಲ್ಲೆಯಲ್ಲಿ ಕಬ್ಬಿನ ಹೊಲಗಳಿಗೆ ಬೆಂಕಿ ತಗುಲಿ ಅಪಾರ ಪ್ರಮಾಣದ ಬೆಳೆ ನಷ್ಟವಾಗಿರುವ ಪ್ರಕರಣಗಳ ಕುರಿತು ಸಮಗ್ರ ತನಿಖೆ ನಡೆಸಿ ಸಂತ್ರಸ್ತ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಬಾಗಲಕೋಟೆ ತಾಲೂಕು ಅಧ್ಯಕ್ಷ ಚಂದ್ರಶೇಖರ ಹಡಪದ ಮಾತನಾಡಿ ಬರಗಾಲ, ಅಂತರ್ಜಲ ಕುಸಿತ, ಹೆಚ್ಚುತ್ತಿರುವ ಬಿಸಿಲು ಹಾಗೂ ಕೃಷಿ ಉತ್ಪಾದನಾ ವೆಚ್ಚದ ಏರಿಕೆಯಿಂದ ಕಬ್ಬು ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರ ಶ್ರಮಕ್ಕೆ ತಕ್ಕ ಬೆಲೆ ದೊರೆಯದಿದ್ದರೆ ಕಬ್ಬು ಕೃಷಿಯೇ ನಾಶವಾಗುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಆದ್ದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ನ್ಯಾಯ ಒದಗಿಸಬೇಕು. ಇಲ್ಲದಿದ್ದರೆ ತಾಲೂಕಿನ ಕಬ್ಬು ಬೆಳೆಗಾರರೊಂದಿಗೆ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ರೈತ ಮುಖಂಡರಾದ ಸುಬ್ಬರಾಯಗೌಡ ಪಾಟೀಲ, ಡೋಂಗ್ರಿ ನದಾಪ, ಗಂಗಪ್ಪ ಮಾದರ, ನವೀನ ಕಪಾಲಿ, ಮಲ್ಲಪ್ಪ ಗಾಣಿಗೇರ, ಅಜೀತ ನಾಯ್ಕ, ಅಶೋಕ ಮಂತ್ರಿ,ಬಸವರಾಜ ಪುಂಡಿಕಟಿಗಿ, ತಿಮ್ಮಣ್ಣ ಬಟಕುರ್ಕಿ, ಸಿದ್ದು ಹುಣಸಿಕಟ್ಟಿ, ಅಜಯ ಕುಲಕರ್ಣಿ,ಬಸಯ್ಯ ಮೂತಿಮಠ, ರಮೇಶ ಅರಕೇರಿ, ಶ್ರೀಶೈಲ ಹಿರೇಮಠ, ಮಲ್ಲಪ್ಪ ಬಾವಿ, ಆನಂದ ಶೆಟ್ಟೆಪ್ಪನವರ, ಬಸವಂತಪ್ಪ ಸಂಕಾನಟ್ಟಿ, ಜಂಗಪ್ಪ ಕಲ್ಲಾರಿ ರಮೇಶ ಸಾರವಾಡ, ಶಾಂತಯ್ಯ ಪಂಚಗಟ್ಟಿಮಠ, ಇದ್ದರು.

ಬೆಂಬಲ: ಪ್ರತಿಭಟನೆಗೆ ಕರ್ನಾಟಕ ರಾಜ್ಯ ರೈತ ಸಂಘ ಕರ್ನಾಟಕ ಸ್ವಾಭಿಮಾನ ವೇದಿಕೆ, ಕೆ.ಆರ್.ಎಸ್ ಪಕ್ಷ ಕಾಲೇಜು ವಿದ್ಯಾರ್ಥಿಗಳು ಬೆಂಬಲ ನೀಡಿದರು.