ಕಾರಿಗನೂರು ಬಳಿ ಇರುವ ಕಂದಾಯ ಜಮೀನನ್ನು ಯಾವುದೇ ಕಾರಣಕ್ಕೂ ಖಾಸಗಿ ಆರ್.ಬಿ.ಎಸ್.ಎಸ್.ಎನ್. ಕಂಪನಿಗೆ ನೀಡಬಾರದು ಎಂದು ಒತ್ತಾಯಿಸಿ ಸ್ಥಳೀಯ ನಿವಾಸಿಗಳು ಹಾಗೂ ವಿವಿಧ ಸಂಘ- ಸಂಸ್ಥೆಗಳ ನೇತೃತ್ವದಲ್ಲಿ ಸೋಮವಾರ ಕಂಪನಿಯ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಲಾಯಿತು.

ಹೊಸಪೇಟೆ: ನಗರದ ಕಾರಿಗನೂರು ಬಳಿ ಇರುವ ಕಂದಾಯ ಜಮೀನನ್ನು ಯಾವುದೇ ಕಾರಣಕ್ಕೂ ಖಾಸಗಿ ಆರ್.ಬಿ.ಎಸ್.ಎಸ್.ಎನ್. ಕಂಪನಿಗೆ ನೀಡಬಾರದು ಎಂದು ಒತ್ತಾಯಿಸಿ ಸ್ಥಳೀಯ ನಿವಾಸಿಗಳು ಹಾಗೂ ವಿವಿಧ ಸಂಘ- ಸಂಸ್ಥೆಗಳ ನೇತೃತ್ವದಲ್ಲಿ ಸೋಮವಾರ ಕಂಪನಿಯ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಲಾಯಿತು.

ನಗರದ ಸಾರ್ವಜನಿಕರಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಮೀಸಲಾಗಿರುವ ಭೂಮಿಯನ್ನು ಆರ್‌ಬಿಎಸ್‌ಎಸ್‌ಎನ್‌ ಕಂಪನಿಗೆ ನೀಡಲು ಬಿಡುವುದಿಲ್ಲ. ಆರ್‌ಬಿಎಸ್ಎಸ್‌ಎನ್‌ ಕಂಪನಿಯಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರಿಗೆ ಮನೆ ಖಾಲಿ ಮಾಡುವಂತೆ ನೋಟಿಸ್‌ ನೀಡುವುದು ಸರಿಯಲ್ಲ. ಸರ್ಕಾರದ ಜಾಗದಲ್ಲಿರುವ ಮನೆಗಳನ್ನು ಖಾಲಿ ಮಾಡಿಸಲು ಕಾರ್ಮಿಕರಿಗೆ ನೋಟಿಸ್‌ ನೀಡಲು ಇವರಿಗೆ ಹಕ್ಕಿಲ್ಲ ಎಂದು ಕೂಲಿ ಕಾರ್ಮಿಕರು ಕಂಪನಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಆನಂದ್ ಸಿಂಗ್‌ ಬೆಂಬಲ

ಸ್ಥಳೀಯ ನಿವಾಸಿಗಳು ಹಾಗೂ ಕಂಪನಿಯ ಕೂಲಿ ಕಾರ್ಮಿಕರು ನಡೆಸುತ್ತಿರುವ ಪ್ರತಿಭಟನೆಗೆ ಮಾಜಿ ಸಚಿವ ಆನಂದ್ ಸಿಂಗ್‌ ಬೆಂಬಲ ವ್ಯಕ್ತಪಡಿಸಿ ಮಾತನಾಡಿ, ಹೊಸಪೇಟೆ ನಗರ ಪ್ರದೇಶದಲ್ಲಿರುವ ಆರ್‌ಬಿಎಸ್‌ಎಸ್‌ಎನ್‌ ಕಂಪನಿ ಲೀಸ್‌ ಅವಧಿ ಮುಗಿದಿದೆ. ಹಿಂದಿನ ಜಿಲ್ಲಾಧಿಕಾರಿಗಳು ಮತ್ತೊಮ್ಮೆ ಪರವಾನಗಿಗಾಗಿ ಶಿಫಾರಸು ಮಾಡಿ ಸರ್ಕಾರಕ್ಕೆ ಕಳುಹಿಸಿದ್ದಾರೆ. ಇದು ತಪ್ಪು, ಇದನ್ನು ತೀವ್ರ ಖಂಡಿಸುತ್ತೇವೆ. ನಗರಸಭೆ ವ್ಯಾಪ್ತಿಗೆ ಬರುವ 30 ಎಕರೆ ಸೇರಿ ಒಟ್ಟು 80 ಎಕರೆ ಲೀಸ್‌ ಪಡೆದಿದ್ದರು. ಈಗ ಲೀಸ್‌ ಮುಗಿದು ಮೂರು ತಿಂಗಳಾಗಿದೆ. ಆರ್‌ಬಿಎಸ್‌ಎಸ್‌ಎನ್‌ ಕಂಪನಿಗೆ ಯಾವುದೇ ಕಾರಣಕ್ಕೂ ಸರ್ಕಾರ ರಿನಿವಲ್‌ ಮಾಡಬಾರದು ಎಂದು ಈಗಾಗಲೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೇನೆ. ಸರ್ಕಾರದ ಮುಖ್ಯಕಾರ್ಯದರ್ಶಿ ಗಮಕ್ಕೂ ತರಲಾಗಿದೆ ಎಂದರು.

ವಿಜಯನಗರ ನೂತನ ಜಿಲ್ಲೆಯಾಗಿರುವುದರಿಂದ ಮೂಲಭೂತ ಸೌಲಭ್ಯಗಳಿಗೆ ಹಾಗೂ 80 ಎಕರೆ ಭೂಮಿಯನ್ನು ಸಕ್ಕರೆ ಕಾರ್ಖಾನೆಗಾಗಿ ಮೀಸಲಾಗಿಡಲಾಗಿತ್ತು. ಆರ್‌ಬಿಎಸ್ಎಸ್‌ಎನ್‌ ಕಂಪನಿ ಇನ್ನೂ 30 ವರ್ಷಗಳ ಕಾಲ ಭೂಮಿಯನ್ನು ಲೀಸ್‌ ಕೇಳಿದ್ದಾರೆ. ಯಾವುದೇ ಕಾರಣಕ್ಕೂ ಭೂಮಿಯನ್ನು ಲೀಸ್‌ ನೀಡಬಾರದು ಎಂದು ಮುಖ್ಯಮಂತ್ರಿಗಳನ್ನು ಒತ್ತಾಯಿಸುತ್ತೇವೆ ಎಂದು ಹೇಳಿದರು.

ಆರ್‌ಬಿಎಸ್‌ಎಸ್‌ಎನ್‌ ಕಂಪನಿಯು ಕಂದಾಯ ಇಲಾಖೆಗೆ ಸಂಬಂಧಿಸಿದ ಭೂಮಿಯನ್ನು ಕಡಿಮೆ ದರಕ್ಕೆ ಅಂದರೆ ಒಂದು ಚದರ ಅಡಿಗೆ ₹2.29 ಪೈಸೆಗೆ ತೆಗೆದುಕೊಂಡಿದ್ದು, ಇದರಿಂದ ರಾಜ್ಯ ಸರ್ಕಾರಕ್ಕೆ ₹5 ಸಾವಿರ ಕೋಟಿಯ ನಷ್ಟವಾಗುತ್ತದೆ. ಈ ಮೂಲಕ ಹೋಸಪೇಟೆ ನಗರದಲ್ಲಿ ಆರ್‌ಬಿಎಸ್‌ಎಸ್‌ಎನ್‌ ಕಂಪನಿ ₹5 ಸಾವಿರ ಕೋಟಿ ಹಗರಣ ಮಾಡುವುದಕ್ಕೆ ಮುಂದಾಗಿದೆ ಎಂದು ಆರೋಪಿಸಿದರು.

ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿ ಲೀಜ್ ಪಡೆಯಲು ಮುಂದಾಗಿದ್ದಾರೆ. ಹಿಂದಿನ ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿದ್ದಾರೆ. ಕೊಪ್ಪಳ ಜಿಲ್ಲೆಯಲ್ಲಿ ನಡೆದ ರೀತಿಯಲ್ಲಿ ಹೊಸಪೇಟೆಯಲ್ಲೂ ಪ್ರತಿಭಟನೆಗಳು ನಡೆಯುತ್ತವೆ. ಮುಂದಾಗುವ ಅನಾಹುತ ತಪ್ಪಿಸಲು ಹೋರಾಟ ನಡೆಸಬೇಕಾದ ಅನಿವಾರ್ಯವಿದೆ. ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಬರಬೇಕು. ಇಲ್ಲದಿದ್ದರೆ ನಾನೂ ಸಾರ್ವಜನಿಕರೊಂದಿಗೆ ಧರಣಿ ಕೂಡುತ್ತೇನೆ ಎಂದು ಎಚ್ಚರಿಸಿದರು.

ಈಗಾಗಲೇ ಲೀಜ್ ಅವಧಿ ಮುಗಿದು ಎರಡು ತಿಂಗಳು ಆಗಿರುವುದರಿಂದ ಜೆಸ್ಕಾಂ ಅಧಿಕಾರಿಗಳು ತಕ್ಷಣ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಬೇಕು. ಲೀಜ್ ಮುಗಿದಿರುವುದರಿಂದ ಕಂಪನಿಯು ಯಾವುದೇ ಚಟುವಟಿಕೆ ನಡೆಸಬಾರದು ಎಂದು ಒತ್ತಾಯಿಸಿದರು.

ಸೆ. 5ರಂದು ಕೂಡ್ಲಿಗಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಆಗಮಿಸುತ್ತಿರುವುದರಿಂದ ಅಲ್ಲಿಗೆ ಹೋಗಿ ಈ ಕುರಿತು ಗಮನಕ್ಕೆ ತರಲಾಗುವುದು ಎಂದರು.

ಪ್ರತಿಭಟನೆಯಲ್ಲಿ ನಗರಸಭೆ ಅಧ್ಯಕ್ಷ ರೂಪೇಶ್ ಕುಮಾರ್, ಉಪಾಧ್ಯಕ್ಷ ಬಿ. ಜೀವರತ್ನಂ, ಸ್ಥಾಯಿ ಸಮಿತಿ ಅಧ್ಯಕ್ಷ ಸರವಣ್, ನಗರಸಭೆ ಸದಸ್ಯರಾದ ಜಿ.ಎಸ್. ಹನುಮಂತಪ್ಪ, ತಾರಿಹಳ್ಳಿ ಜಂಬುನಾಥ, ಸ್ಥಳೀಯ ಸಂಘ ಸಂಸ್ಥೆಗಳ ಮುಖಂಡರಾದ ಸಿ.ಆರ್. ಭರತ್, ದ್ವಾರಕೀಶ್ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರು.