ತುಂಗಭದ್ರಾ ಎಡದಂಡೆ ನಾಲೆಗೆ ಡಿ. ೨೦ರ ವರೆಗೆ ನೀರು ಹರಿಸಬೇಕು ಹಾಗೂ ರೈತರ ಪಂಪ್‌ಸೆಟ್‌ಗಳಿಗೆ ನಿರಂತರ ೧೨ ಗಂಟೆ ವಿದ್ಯುತ್ ಸರಬರಾಜು ಮಾಡಬೇಕು ಎಂದು ಪಟ್ಟಣದಲ್ಲಿ ಸೋಮವಾರ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ರೈತರು ಬೃಹತ್ ಪ್ರತಿಭಟನೆ ನಡೆಸಿದರು.

ಕಾರಟಗಿ: ತುಂಗಭದ್ರಾ ಎಡದಂಡೆ ನಾಲೆಗೆ ಡಿ. ೨೦ರ ವರೆಗೆ ನೀರು ಹರಿಸಬೇಕು ಹಾಗೂ ರೈತರ ಪಂಪ್‌ಸೆಟ್‌ಗಳಿಗೆ ನಿರಂತರ ೧೨ ಗಂಟೆ ವಿದ್ಯುತ್ ಸರಬರಾಜು ಮಾಡಬೇಕು ಎಂದು ಪಟ್ಟಣದಲ್ಲಿ ಸೋಮವಾರ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ರೈತರು ಬೃಹತ್ ಪ್ರತಿಭಟನೆ ನಡೆಸಿದರು.

ಕರ್ನಾಟಕ ರೈತ ಸಂಘದ ರೈತ ಬಣದ ನೇತೃತ್ವದಲ್ಲಿ ಇಲ್ಲಿನ ವಿಶೇಷ ಎಪಿಎಂಸಿ ಆವರಣದಲ್ಲಿ ಸೇರಿದ ೩೧ನೇ ವಿತರಣಾ ಕಾಲುವೆ ವ್ಯಾಪ್ತಿಯ ವಿವಿಧ ಗ್ರಾಮಗಳ ನೂರಾರು ರೈತರು, ಅಲ್ಲಿಂದ ಪ್ರತಿಭಟನಾ ಮೆರವಣಿಗೆ ಪ್ರಾರಂಭಿಸಿ, ಆರ್‌ಜಿ ರಸ್ತೆ ಮೂಲಕ ಕನಕದಾಸ ವೃತ್ತದ ವರೆಗೆ ಸಾಗಿ, ಅಲ್ಲಿ ಸಮಾವೇಶಗೊಂಡು ರಾಜ್ಯ ಸರ್ಕಾರ ಮತ್ತು ನೀರಾವರಿ ಸಲಹಾ ಸಮಿತಿ ಸಭೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಮೆರವಣಿಗೆ ಮಾರ್ಗಮಧ್ಯದ ಹಳೇ ಬಸ್‌ನಿಲ್ದಾಣ, ಸಾಲೋಣಿ ವೃತ್ತ ಮತ್ತು ನವಲಿ ವೃತ್ತದಲ್ಲಿ ತಾತ್ಕಾಲಿಕ ರಸ್ತೆ ತಡೆ ನಡೆಸಿದ ರೈತರು, ರೈತರ ಬೆಳೆ ಸಂಪೂರ್ಣವಾಗಿ ಕಟಾವು ಆಗುವ ವರೆಗೂ ಡಿ. ೩೦ರ ವರೆಗೆ ನೀರು ಪೂರೈಸಬೇಕು ಎಂದು ಒತ್ತಾಯಿಸಿದರು.

ರೈತ ಮುಖಂಡ ವಿಶ್ವನಾಥ ರೆಡ್ಡಿ ಮಾತನಾಡಿ, ಅಣೆಕಟ್ಟೆಯಲ್ಲಿ ಈಗ ೫೦ ಟಿಎಂಸಿ ನೀರು ಇದ್ದು ಮೊದಲು ರೈತರ ಹಿತ ಕಾಪಾಡುವ ಕೆಲಸವನ್ನು ನೀರಾವರಿ ಸಲಹಾ ಸಮಿತಿ ಮಾಡಲಿ. ಡಿಸೆಂಬರ್ ಅಂತ್ಯದ ವರೆಗೆ ರಾಜ್ಯ ಸರ್ಕಾರ ನೀರು ಕೊಡದಿದ್ದರೆ ಪ್ರತಿಭಟನೆ, ಕಾರಟಗಿ ಬಂದ್ ಮಾಡುವ ಮೂಲಕ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸಂಘದ ಅಧ್ಯಕ್ಷ ನಾರಾಯಣ ಈಡಿಗೇರ್ ಮತ್ತು ಹನುಮಂತಪ್ಪ ನಾಯಕ ಉಳೇನೂರು ಮಾತನಾಡಿ, ರಾಜ್ಯ ಸರ್ಕಾರ ಕನಿಷ್ಠ ಡಿ. ೨೦ರ ವರೆಗೆ ನೀರು ಪೂರೈಸಿದರೆ ೩೧ನೇ ವಿತರಣಾ ಕಾಲುವೆ ವ್ಯಾಪ್ತಿಯ ಎಲ್ಲ ಉಪಕಾಲುವೆ ಭಾಗದ ರೈತರ ಬೆಳೆಗಳು ಬದುಕಲು ಸಾಧ್ಯ. ರಾಜ್ಯ ಸರ್ಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಮೊದಲು ರೈತರ ಹಿತ ಕಾಪಾಡಬೇಕು ಎಂದು ಒತ್ತಾಯಿಸಿದರು.

ಕೆಲವು ರೈತ ಮಹಿಳೆಯರು ರಾಜ್ಯ ಸರ್ಕಾರಕ್ಕೆ ಹಿಡಿಶಾಪ ಹಾಕಿದರು. ಮುದುಕಪ್ಪ, ದುರುಗಪ್ಪ, ಶರಣಪ್ಪ ಚಂದ್ರಣ್ಣ ಕೊಪ್ಪಳ ಮತ್ತು ಹನುಮಂತ ರಡ್ಡಿ ಮಾತನಾಡಿದರು. ಸ್ಥಳಕ್ಕೆ ಆಗಮಿಸಿದ ಜೆಸ್ಕಾಂ, ನೀರಾವರಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳ ಮೂಲಕ ಜಲಸಂಪನ್ಮೂಲ ಸಚಿವ, ಕಂದಾಯ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಸಂಜೀವಪ್ಪ ಸಾಲೋಣಿ, ಖಾಜಾ ಹುಸೇನ್ ಮುಲ್ಲಾ, ಮರಿಯಪ್ಪ ಸಾಲೋಣಿ, ಹಸಿರು ಸೇನೆ ಯುವ ಘಟಕದ ಫಯಾಜ್ ಮೈಸೂರು, ಹನುಮಂತಪ್ಪ ನಾಯಕ್, ಬೀರಪ್ಪ ದೇಶನೂರು, ರಮೇಶ ಭಂಗಿ, ರಂಗಪ್ಪ ನಾಡಿಗೇರ್, ಹನುಮನಗೌಡ, ಅಯ್ಯಪ್ಪ ಸುದ್ದಿ, ವೆಂಕೋಬ ಮೂಲಿಮನಿ, ಪರಸಪ್ಪ ಉಪ್ಪಾರ್, ಮುದಿಯಪ್ಪ ಛಲವಾದಿ, ಬಾಷಾಸಾಬ್ ಬಂಡಿ, ಪರಸಪ್ಪ ಭಾವಾಜಿ, ಶಾಂತಮ್ಮ ಜಂಗಲಿ, ದುರುಗಮ್ಮ ಭಾವಾಜಿ, ಮಲ್ಲಮ್ಮ ಹುಲ್ಲೂರು, ಅಯ್ಯಮ್ಮ ಕಲ್ಗುಡಿ, ತಿಪ್ಪಮ್ಮ, ಗುಂಜಳ್ಳಿ ಅಮರಮ್ಮ, ಚೆನ್ನಮ್ಮ ರತ್ನಮ್ಮ ಕಟಾಂಬ್ಲಿ ಇದ್ದರು.