ಹೇಮಾವತಿ ಜಲಾಶಯದಲ್ಲಿ 29 ಟಿಎಂಸಿ ನೀರಿದೆ. ಇನ್ನು 8 ಟಿಎಂಸಿ ನೀರು ಬಂದರೆ ಜಲಾಶಯ ತುಂಬುತ್ತದೆ. ಹೇಮಾವತಿ ನದಿಗೆ 6758 ಕ್ಯುಸೆಕ್ ಒಳಹರಿವಿದೆ. ಜಲಾಶಯದ ಎಡದಂಡೆ ನಾಲೆ ಮುಖಾಂತರ ತುಮಕೂರು ಭಾಗಕ್ಕೆ 2800 ಹಾಗೂ ಮಂಡ್ಯ ಭಾಗಕ್ಕೆ 1200 ಕ್ಯುಸೆಕ್ ನೀರಿ ಅಗತ್ಯವಿದೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ತಾಲೂಕಿನ ಕೆರೆ-ಕಟ್ಟೆಗಳಿಗೆ ತಕ್ಷಣವೇ ಹೇಮೆ ನೀರು ಹರಿಸದಿದ್ದರೆ ಆಗಸ್ಟ್ 11ರಿಂದ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ತಾಲೂಕು ರೈತಸಂಘ ಎಚ್ಚರಿಸಿದೆ.

ಪಟ್ಟಣದ ಹೇಮಾವತಿ ಕಚೇರಿಗೆ ರೈತ ಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ನೇತೃತ್ವದಲ್ಲಿ ಆಗಮಿಸಿದ ರೈತ ಮುಖಂಡರು ನೀರಿಗಾಗಿ ಆಗ್ರಹಿಸಿ ಚಳವಳಿ ಸಂಘಟಿಸುವ ಎಚ್ಚರಿಕೆ ನೀಡಿದರು.

ಹೇಮಾವತಿ ಜಲಾಶಯದಲ್ಲಿ 29 ಟಿಎಂಸಿ ನೀರಿದೆ. ಇನ್ನು 8 ಟಿಎಂಸಿ ನೀರು ಬಂದರೆ ಜಲಾಶಯ ತುಂಬುತ್ತದೆ. ಹೇಮಾವತಿ ನದಿಗೆ 6758 ಕ್ಯುಸೆಕ್ ಒಳಹರಿವಿದೆ. ಜಲಾಶಯದ ಎಡದಂಡೆ ನಾಲೆ ಮುಖಾಂತರ ತುಮಕೂರು ಭಾಗಕ್ಕೆ 2800 ಹಾಗೂ ಮಂಡ್ಯ ಭಾಗಕ್ಕೆ 1200 ಕ್ಯುಸೆಕ್ ನೀರಿ ಅಗತ್ಯವಿದೆ ಎಂದರು.

ನಮಗೆ ಬೆಳೆ ಬೆಳೆಯಲು ನೀರು ಬೇಡ. ಆದರೆ, ಜನ-ಜಾನುವಾರುಗಳ ಕುಡಿಯುವ ನೀರಿನ ಅಗತ್ಯತೆಗಾಗಿ ಕೆರೆಗಳಿಗೆ ನೀರು ಹರಿಸಲು ಕ್ರಮ ವಹಿಸಬೇಕು. ಕೆರೆಗಳನ್ನು ತುಂಬಿಸಿದರೆ ಅಂತರ್ಜಲ ಮಟ್ಟವೂ ಸುಧಾರಿಸಿ ರೈತ ಸಮುದಾಯಕ್ಕೆ ಅನುಕೂಲವಾಗಲಿದೆ ಎಂದರು.

ನೀರು ಹರಿಸದ ರಾಜ್ಯ ಸರ್ಕಾರ ಹೇಮಾವತಿ ಜಲಾನಯನ ಪ್ರದೇಶದ ರೈತರ ಬಗ್ಗೆ ಮೌನವಾಗಿದೆ. ಕೆರೆಕಟ್ಟೆಗಳನ್ನು ಜಲಾಶಯದ ನೀರಿನಿಂದ ತುಂಬಿಸುವುದಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರೈತರಿಗೆ ಭರವಸೆ ನೀಡಿದ್ದರೂ ಅದು ಇದುವರೆಗೂ ಜಾರಿಗೆ ಬಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಹೇಮೆಯ ಬಗೆಗಿನ ಸರ್ಕಾರದ ತಾರತಮ್ಯ ಸಲ್ಲದು. ನೀರಾವರಿ ಇಲಾಖೆ ಅಧಿಕಾರಿಗಳು ಈ ಭಾಗದ ರೈತರ ಅಸಹನೆಯನ್ನು ರಾಜ್ಯ ಸರ್ಕಾರದ ಗಮನಕ್ಕೆ ತಂದು ಕೆರೆ ಕಟ್ಟೆಗಳನ್ನು ತುಂಬಿಸಲು ಕ್ರವಹಿಸಬೇಕು. ಇಲ್ಲದಿದ್ದರೆ ಆಗಸ್ಟ್ 11ರಿಂದ ನೀರಿಗಾಗಿ ಹೋರಾಟ ಆರಂಭಿಸಲಾಗುವುದು ಎಂದು ಎಚ್ಚರಿಸಿ ಹೇಮಾವತಿ ಜಲಾಶಯದ ನಂ.3 ವಿಭಾಗದ ಕಾರ್ಯಪಾಲಕ ಅಭಿಯಂತರ ಬಿ.ಮಂಜುನಾಥ್, ಸಹಾಯಕ ಕಾರ್ಯಪಾಲಕ ಅಭಿಯಂತರ ವಿಶ್ವನಾಥ್ ಅವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ರೈತ ಮುಖಂಡರಾದ ಎಲ್.ಬಿ.ಜಗದೀಶ್, ಜಿಲ್ಲಾ ರೈತಸಂಘದ ಉಪಾಧ್ಯಕ್ಷ ಮರುವನಹಳ್ಳಿ ಶಂಕರ್, ಲಕ್ಷ್ಮೀಪುರ ನಾಗರಾಜು, ಕರೋಟಿ ತಮ್ಮಯ್ಯ, ಸಿಂಧುಘಟ್ಟ ಪ್ರಸನ್ನ ಮತ್ತಿತರರಿದ್ದರು.