ಸಾರಾಂಶ
ಶಿರಸಿ: ಸಮರ್ಪಕ ವಿದ್ಯುತ್ ಪೂರೈಕೆ ಹಾಗೂ ವಿದ್ಯುತ್ ಸರಬರಾಜು ಕೇಂದ್ರದ ಸಮಸ್ಯೆಯನ್ನು ಶೀಘ್ರದಲ್ಲಿ ಪರಿಹರಿಸಬೇಕೆಂದು ಆಗ್ರಹಿಸಿ ತಾಲೂಕಿನ ಬನವಾಸಿ ಭಾಗದ ವಿದ್ಯುತ್ ಬಳಕೆದಾರರು ಹಾಗೂ ರೈತರು ಪಂಪ ವೃತ್ತದ ಬಳಿ ಜಮಾಯಿಸಿ, ಬೃಹತ್ ಪ್ರತಿಭಟನೆ ನಡೆಸಿದರು. ಸರ್ಕಾರ, ಹೆಸ್ಕಾಂ ವಿರುದ್ಧ ಧಿಕ್ಕಾರ ಕೂಗಿದರು.
ಅಂಗಡಿ-ಮುಂಗಟ್ಟನ್ನು ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಬಂದ್ ಮಾಡಿ, ವಿದ್ಯುತ್ ಸಮಸ್ಯೆಯಿಂದ ರೈತರ ಕೃಷಿ ಜಮೀನುಗಳಿಗೆ ನೀರು ಪೂರೈಕೆಯಾಗದೇ ಬೆಳೆಗಳೆಲ್ಲವೂ ಒಣಗುತ್ತಿದೆ. ಸಹಕಾರಿ ಸಂಘ ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸಾಲ ಪಡೆದ ಬೆಳೆದ ಬೆಳೆಗಳಿಗೆ ನೀರು ನೀಡಲಾಗದೇ ಕೈ ಸುಟ್ಟುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ವೋಲ್ಟೇಜ್ ಸಮಸ್ಯೆಯಿಂದ ಬೋರ್ ವೆಲ್ ಪಂಪ್ ಗಳು ಕಾರ್ಯ ನಿರ್ವಹಿಸುತ್ತಿಲ್ಲ. ಕೆಲ ಪಂಪ್ ಗಳು ಸುಟ್ಟು ಹೋಗಿವೆ. ಕೂಡಲೇ ವಿದ್ಯುತ್ ಸಮಸ್ಯೆಗೆ ಪರಿಹಾರ ಮಾಡದಿದ್ದರೆ ರಾಜ್ಯ ಮಟ್ಟದ ಕದಂಬೋತ್ಸವ ಬಹಿಷ್ಕರಿಸುವುದರ ಜತೆ ಕರಾಳ ಉತ್ಸವವನ್ನಾಗಿ ಆಚರಿಸುತ್ತೇವೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಆಗಮಿಸಿ, ಇಲ್ಲಿನ ಜನರಿಗೆ ಭರವಸೆ ನೀಡಿದ ಬಳಿಕ ಪ್ರತಿಭಟನೆ ಮುಕ್ತಾಯಗೊಳಿಸುತ್ತೇವೆ. ಅಲ್ಲಿಯವರಗೆ ಹೋರಾಟ ನಡೆಯುತ್ತೇವೆ ಎಂದು ಪಟ್ಟು ಹಿಡಿದಾಗ ಶಿರಸಿ ತಹಸೀಲ್ದಾರ ಶೈಲೇಶ ಪರಮಾನಂದ ಸ್ಥಳಕ್ಕಾಗಮಿಸಿ, ಪ್ರತಿಭಟನಾಕಾರರನ್ನು ಮನವೋಲಿಸಿದರು.
ಜಯಶೀಲ ಗೌಡ ಮಾತನಾಡಿ, ಬನವಾಸಿಯಲ್ಲಿ ವಿದ್ಯುತ್ ಸರಬರಾಜು ಕೇಂದ್ರ ಇಲ್ಲದಿರುವುದು ಹಾಗೂ ವಿದ್ಯುತ್ ಸರಬರಾಜು ಕೇಂದ್ರ ಉದ್ಘಾಟನೆಯಾಗಲು ಸಾಕಷ್ಟು ಅಡೆ-ತಡೆಗಳು ಉಂಟಾಗಿರುವುದರಿಂದ ಸಮಸ್ಯೆಗೆ ಕಾರಣವಾಗಿದೆ. ಈ ಭಾಗದ ಸಾರ್ವಜನಿಕರು ಹಲವು ಬಾರಿ ಮನವಿ ನೀಡಿದ್ದರೂ ಪರಿಹಾರ ದೊರಕದಿರುವ ಕಾರಣ ಪ್ರತಿಭಟನೆಯ ಹಾದಿ ಹಿಡಿಯುವ ಪರಿಸ್ಥಿತಿ ಎದುರಾಗಿದೆ ಎಂದರು.ವಿನಯ ಗೌಡ, ಶಾಂತಲಾ ಕಾನಳ್ಳಿ ಮಾತನಾಡಿದರು.
ತಹಸೀಲ್ದಾರ ಶೈಲೇಶ ಪರಮಾನಂದ ಪ್ರತಿಕ್ರಿಯಿಸಿ, ಜಡೆ ಭಾಗದ ೨೮ ರಲ್ಲಿ ೧೮ ಬಾಕಿ ಇದೆ. ಬನವಾಸಿ ಭಾಗದಲ್ಲಿ ೧೦ ಟಾವರ್ ಸಂಪೂರ್ಣಗೊಂಡಿದ್ದು, ೩ ಬಾಕಿ ಇದೆ. ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿ ವಿಚಾರಣೆ ಬಾಕಿ ಇರುವುದಿಂದ ೩ ವಿದ್ಯುತ್ ಕಂಬ ಅಳವಡಿಸಲು ಸಾಧ್ಯವಾಗಿಲ್ಲ. ಬನವಾಸಿ ಗ್ರೀಡ್ ಆರಂಭಕ್ಕೆ ತೊಂದರೆಯಾಗಿದೆ. ಮುಂದಿನ ವಾರ ವಿಚಾರ ನಡೆಯುತ್ತದೆ ಎಂಬ ಮಾಹಿತಿ ಲಭ್ಯವಾಗಿದ್ದು, ನ್ಯಾಯಾಲಯದಲ್ಲಿ ಪ್ರಕರಣ ಇತ್ಯರ್ಥವಾದರೆ ಒಂದು ವಾರದಲ್ಲಿ ಕಾಮಗಾರಿ ಆರಂಭಿಸಲಾಗುತ್ತದೆ. ಹೆಚ್ಚುವರಿ ಫೀಡರ್ ಅಳವಿಡಿಸಿ ತಾತ್ಕಾಲಿಕವಾಗಿ ಸಮಸ್ಯೆಗೆ ಪರಿಹಾರ ದೊರಕಿಸುತ್ತೇವೆ ಎಂದು ಹೆಸ್ಕಾಂನವರು ಭರವಸೆ ನೀಡಿದ್ದಾರೆ. ಅಲ್ಲಿಯವರೆಗೆ ಈ ಭಾಗದ ರೈತರು ಹಾಗೂ ಸಾರ್ವಜನಿಕರು ಸಹಕಾರ ನೀಡಬೇಕೆಂದು ವಿನಂತಿಸಿದರು.ಪ್ರತಿಭಟನೆಯಲ್ಲಿ ಶಿವಕುಮಾರ ದೇಸಾಯಿಗೌಡ, ಶಿವಾಜಿ ಕಾಳೇರಮನೆ, ವಿ.ಜಿ.ನಾಯಕ, ವೀರಭದ್ರ ಗೌಡ ತಿಗಣಿ, ವಿರೇಂದ್ರ ಗೌಡ ಬಾಶಿ, ಗಜಾನನ ಗೌಡ, ವಿಶ್ವನಾಥ ಹಾದಿಮನಿ ನೂರಾರು ರೈತರು ಭಾಗವಹಿಸಿದ್ದರು.
ಕರಾಳ ಉತ್ಸವ ಎಂದು ಆಚರಿಸಲು ಮುಂದಾಗುತ್ತೇವೆ?ವಿದ್ಯುತ್ ವ್ಯತ್ಯಯ ಸಮಸ್ಯೆಗೆ ಶೀಘ್ರವೇ ಪರಿಹಾರ ಕಂಡುಕೊಳ್ಳದಿದ್ದರೆ ಎ.೧೨, ೧೩ರಂದು ಕನ್ನಡದ ಮೊದಲ ರಾಜಧಾನಿ ಬನವಾಸಿಯಲ್ಲಿ ನಡೆಯಲಿರುವ ರಾಜ್ಯಮಟ್ಟದ ಕದಂಬೋತ್ಸವವನ್ನು ಕರಾಳ ಉತ್ಸವ ಎಂದು ಆಚರಿಸಲು ಮುಂದಾಗುತ್ತೇವೆ. ಇದರಿಂದ ಮುಂದೆ ಆಗುವ ಅನಾಹುತಕ್ಕೆ ರಾಜ್ಯ ಸರ್ಕಾರವೇ ನೇರ ಹೊಣೆಯಾಗಲಿದೆ ಎಂದು ಎಚ್ಚರಿಸಿದರು.
ಕಳೆದ ೧೦ ವರ್ಷಗಳಿಂದ ಈ ಭಾಗದ ಜನರು ವೋಲ್ಟೇಜ್ ಸಮಸ್ಯೆ ಎದುರಿಸುತ್ತಿದ್ದಾರೆ. ಅದನ್ನು ಸರಿಪಡಿಸಲು ಸಾಧ್ಯವಾಗದೇ ಹೆಸ್ಕಾಂ ನಿರ್ಲಕ್ಷ್ಯವಹಿಸುತ್ತಿರುವುದಕ್ಕೆ ಅಧಿಕಾರಿಗಳನ್ನು ಪ್ರತಿಭಟನಾಕಾರರು ತರಾಟೆಗೆ ತೆಗೆದುಕೊಂಡರು.