ಸಾರಾಂಶ
ಈ ಯೋಜನೆ ಅನುಷ್ಠಾನ ಆಗುವುದರಿಂದ ಕೃಷಿಕರು, ರೈತರು, ಗ್ರಾಮಸ್ಥರು ವಿವಿಧ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಾರೆ. ಕಸ್ತೂರಿ ರಂಗನ್ ವರದಿಯನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳು ಸಂಪೂರ್ಣ ಕೈಬಿಡಬೇಕು, ಪಶ್ಚಿಮ ಘಟ್ಟ ಮತ್ತು ಜನವಸತಿ ಪ್ರದೇಶಕ್ಕೆ ಗಡಿಗುರುತು ಆಗಬೇಕು ಎಂದು ಕಿಶೋರ್ ಶಿರಾಡಿ ಆಗ್ರಹಿಸಿದರು.
ಕನ್ನಡಪ್ರಭ ವಾರ್ತೆ ಸುಬ್ರಹ್ಮಣ್ಯಕಸ್ತೂರಿ ರಂಗನ್ ವರದಿಯ ವಿರುದ್ಧ ಹಾಗೂ ಈ ಭಾಗದ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಮಲೆನಾಡು ಜನ ಹಿತ ರಕ್ಷಣಾ ವೇದಿಕೆ ದಕ್ಷಿಣ ಕನ್ನಡ ವತಿಯಿಂದ ಕಡಬ, ಸುಳ್ಯ, ಬೆಳ್ತಂಗಡಿ ತಾಲೂಕಿನ ಬಾಧಿತ ಗ್ರಾಮಗಳ ಗ್ರಾಮಸ್ಥರ ಪಾಲ್ಗೊಳ್ಳುವಿಕೆಯೊಂದಿಗೆ ನ.೧೫ರಂದು ಬೃಹತ್ ಪ್ರತಿಭಟನಾ ಸಭೆಯು ಶಿರಾಡಿ ಗ್ರಾಮದ ಗುಂಡ್ಯದಲ್ಲಿ ನಡೆಯಲಿದೆ ಎಂದು ಮಲೆನಾಡು ಜನಹಿತ ರಕ್ಷಣಾ ವೇದಿಕೆ ಸಂಚಾಲಕ ಕಿಶೋರ್ ಶಿರಾಡಿ ತಿಳಿಸಿದರು.
ಅವರು ಸುಬ್ರಹ್ಮಣ್ಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಜಾತ್ಯತೀತ, ಪಕ್ಷಾತೀತ, ಕಾನೂನಾತ್ಮಕ ಮತ್ತು ವಿಷಯಾಧಾರಿತ ಹೋರಾಟ ಇದಾಗಿದೆ ಎಂದರು. ಕಸ್ತೂರಿ ರಂಗನ್ ವರದಿ ವಿರುದ್ಧ ಈ ಹಿಂದಿನಿಂದಲೂ ಹೋರಾಟ ಮಾಡಲಾಗುತ್ತ ಬಂದಿದ್ದೇವೆ. ಗುಂಡ್ಯದಲ್ಲಿ ನಡೆಯುವ ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ, ಡಿಎಫ್‌ಒ ಅವರು ಬಂದು ಮನವಿ ಸ್ವೀಕರಿಸಬೇಕು ಎಂದು ಆಗ್ರಹಿಸಿದರು. ಕೇಂದ್ರ ಪರಿಸರ ಇಲಾಖೆ ಕಸ್ತೂರಿ ರಂಗನ್ ವರದಿಯನ್ನು ಅನುಷ್ಠಾನಕ್ಕೆ ಅಭಿಪ್ರಾಯ ಅನೇಕ ಬಾರಿ ಕೇಳಿದಾಗ ಪಕ್ಷಾತೀತವಾಗಿ ರಾಜ್ಯ ಸರಕಾರ ಕಸ್ತೂರಿ ರಂಗನ್ ವರದಿ ಬೇಡ ಎಂದು ಅಭಿಪ್ರಾಯ ಮಂಡಿಸಿದ್ದರೂ, ವರದಿಯ ಅಭಿಪ್ರಾಯಕ್ಕೆ ಕೇಂದ್ರ ಪರಿಸರ ಇಲಾಖೆ ಕಳುಹಿಸುತ್ತಾ ಇದೆ. ಆದ್ದರಿಂದ ಇದರಿಂದ ಶಾಶ್ವತ ಪರಿಹಾರಕ್ಕಾಗಿ ಗುಂಡ್ಯದಲ್ಲಿ ಬೃಹತ್ ಪ್ರತಿಭಟನೆ ನಡೆಸುತ್ತೇವೆ ಎಂದರು.ಈ ಯೋಜನೆ ಅನುಷ್ಠಾನ ಆಗುವುದರಿಂದ ಕೃಷಿಕರು, ರೈತರು, ಗ್ರಾಮಸ್ಥರು ವಿವಿಧ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಾರೆ. ಕಸ್ತೂರಿ ರಂಗನ್ ವರದಿಯನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳು ಸಂಪೂರ್ಣ ಕೈಬಿಡಬೇಕು, ಪಶ್ಚಿಮ ಘಟ್ಟ ಮತ್ತು ಜನವಸತಿ ಪ್ರದೇಶಕ್ಕೆ ಗಡಿಗುರುತು ಆಗಬೇಕು, ಕೃಷಿ ಭೂಮಿ, ಅರಣ್ಯ ಭೂಮಿ ನಡುವೆ ಆನೆ ಕಂದಕ ನಿರ್ಮಿಸಬೇಕು, ಪಶ್ಚಿಮ ಘಟ್ಟಕ್ಕೆ ಬರುವ ಅರಣ್ಯ ಸಂರಕ್ಷಣಾ ಕಾಯ್ದೆ ಕೃಷಿ ಭೂಮಿ, ಜನವಸತಿ ಪ್ರದೇಶ ಮತ್ತು ಮೂಲಭೂತ ಸೌಕರ್ಯಕ್ಕೆ ಅನ್ವಯಿಸಬಾರದು, ಕಂದಾಯ ಮತ್ತು ಅರಣ್ಯ ಇಲಾಖೆಯಿಂದ ಜಂಟಿ ಸರ್ವೆ ನಡೆಯಬೇಕು, ರೈತರಿಗೆ ಕೋವಿ ಪರವಾನಗಿ ನೀಡಬೇಕು, ಪಶ್ಚಿಮ ಘಟ್ಟಕ್ಕೆ ಸಂಬಂಧಪಟ್ಟಂತೆ ಪರಿಸರ ಸಂರಕ್ಷಣೆಯ ತಜ್ಞರ ವರದಿ ತಯಾರಿಸುವಾಗ ಪಶ್ಚಿಮ ಘಟ್ಟ ಪ್ರದೇಶದ ಗ್ರಾ.ಪಂ.ಗಳಲ್ಲಿ ವ್ಯಾಪಕ ಪ್ರಚಾರ ನಡೆಸಿ ವಿಶೇಷ ಗ್ರಾಮ ಸಭೆ ಕರೆದು ಗ್ರಾಮಸ್ಥರ ಅಭಿಪ್ರಾಯ ಸಂಗ್ರಹಿಸಬೇಕು ಮುಂತಾದ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಬೇಕು ಎಂದು ಪ್ರತಿಭಟನೆಯಲ್ಲಿ ಬೇಡಿಕೆಗಳನ್ನು ಮುಂದಿಡಲಾಗುವುದು ಎಂದರು.ಜಿಲ್ಲಾ ಪರಿಷತ್ ಮಾಜಿ ಸದಸ್ಯ ಸಯ್ಯದ್ ಮೀರಾ ಸಾಹೇಬ್, ಪ್ರಮುಖರಾದ ಅಚ್ಚುತ್ತ ಗೌಡ ಸುಬ್ರಹ್ಮಣ್ಯ, ದಾಮೋದರ ಗುಂಡ್ಯ, ಸೋಮಸುಂದರ ಕೂಜುಗೋಡು, ಅಶೋಕ ಕುಮಾರ ಮೂಲೆಮಜಲು, ಈಶ್ವರ ಗೌಡ ಅರಂಪಾಡಿ, ಗಣೇಶ್ ಅನಿಲ, ಯಶೋಧರ ಕೊಣಾಜೆ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.