೩೦ರಂದು ಹಾಸನದಲ್ಲಿ ಬೃಹತ್ ಪ್ರತಿಭಟನೆ

| Published : May 24 2024, 12:54 AM IST

ಸಾರಾಂಶ

ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸುವ ಜೊತೆಗೆ ಅದನ್ನು ವಿಡಿಯೋ ಮಾಡಿರುವುದು ಅತ್ಯಂತ ಹೇಯ ಕೃತ್ಯವಾಗಿದೆ.

ಕನ್ನಡಪ್ರಭ ವಾರ್ತೆ ಸಾಗರ

ಹಾಸನ ಪೆನ್‌ಡ್ರೈವ್‌ ಪ್ರಕರಣ ಖಂಡಿಸಿ, ಸಂತ್ರಸ್ತ ಮಹಿಳೆಯರಲ್ಲಿ ಆತ್ಮಸ್ಥೈರ್ಯ ಹೆಚ್ಚಿಸಲು ಮೇ ೩೦ರಂದು ಹಾಸನದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಜನವಾದಿ ಮಹಿಳಾ ಸಂಘಟನೆ ರಾಜ್ಯ ಉಪಾಧ್ಯಕ್ಷೆ ವಿಮಲಾ ಕೆ.ಎಸ್. ಹೇಳಿದರು.

ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದ್ದ ಹಾಸನ ಚಲೋ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿ, ರಾಜ್ಯದ ಬೇರೆಬೇರೆ ಭಾಗಗಳಿಂದ ಪ್ರಗತಿಪರ ಸಂಘಟನೆಗಳು, ಪ್ರಮುಖರು ಪಕ್ಷಾತೀತವಾಗಿ ಹಾಸನ ಚಲೋ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.

ಮೊದಲ ಬಳ್ಳಾರಿಯಲ್ಲಿ ಗಣಿಧಣಿಗಳ ದರ್ಬಾರ್ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿತ್ತು. ಈಗ ಹಾಸನದಲ್ಲಿ ಪಾಳೆಗಾರಿಕೆ ಸಂಸ್ಕೃತಿ ವ್ಯಾಪಕ ಚರ್ಚೆ ನಡೆಯುತ್ತಿದೆ. ಹಣಬಲ, ತೋಳ್ಬಲ, ರಾಜಕೀಯ ಬಲದಿಂದ ಏನು ಬೇಕಾದರೂ ಮಾಡುತ್ತೇವೆ ಎನ್ನುವ ಕೆಟ್ಟ ಆಲೋಚನೆಯ ಈ ಪ್ರಕರಣ ನಡೆಯಲು ಕಾರಣವಾಗಿದೆ. ಪ್ರಜ್ವಲ್ ರೇವಣ್ಣ ಮಾಡಿರುವ ಕೃತ್ಯ ಅಕ್ಷಮ್ಯ ಅಪರಾಧವಾಗಿದೆ. ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸುವ ಜೊತೆಗೆ ಅದನ್ನು ವಿಡಿಯೋ ಮಾಡಿರುವುದು ಅತ್ಯಂತ ಹೇಯ ಕೃತ್ಯವಾಗಿದೆ. ಈ ಅಶ್ಲೀಲ ವಿಡಿಯೋ ಹಂಚಿರುವವರ ವಿರುದ್ಧ ರಾಜ್ಯ ಸರ್ಕಾರ ಈತನಕ ಕ್ರಮ ಕೈಗೊಳ್ಳದೆ ಇರುವುದು ಖಂಡನೀಯ ಎಂದರು.

ಹಾಸನ ಚಲೋ ಪ್ರತಿಭಟನೆ ಕಾಂಗ್ರೆಸ್ ಪ್ರಾಯೋಜಿತ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿರುವುದು ದುರದೃಷ್ಟಕರ ಸಂಗತಿ. ಪ್ರತಿಭಟನೆ ಸಂದರ್ಭದಲ್ಲಿ ತಪ್ಪಿತಸ್ತರನ್ನು ಬಂಧಿಸುವಲ್ಲಿ ವಿಳಂಬ ಮಾಡುತ್ತಿರುವ ರಾಜ್ಯ ಸರ್ಕಾರದ ಧೋರಣೆ ಸಹ ಖಂಡಿಸಲಾಗುತ್ತದೆ. ಕೇಂದ್ರ ಸಚಿವ ಅಮಿತ್ ಶಾ ಹೆಣ್ಣು ಮಕ್ಕಳ ಅಪಮಾನ ಸಹಿಸುವುದಿಲ್ಲ ಎಂದು ಹೇಳಿದ್ದಾರೆ. ಅವರ ಹೇಳಿಕೆ ಕೃತಿಯಲ್ಲಿಯೂ ಜಾರಿಗೆ ಬರಬೇಕು. ಪ್ರಜ್ವಲ್ ರೇವಣ್ಣರ ಪಾಸ್ಪೋರ್ಟ್ ರದ್ದು ಮಾಡುವಲ್ಲಿ ಕೇಂದ್ರ ಸರ್ಕಾರ ಮೀನಾಮೇಷ ಎಣಿಸುತ್ತಿರುವುದು ಪರೋಕ್ಷವಾಗಿ ಆರೋಪಿ ಬೆಂಬಲಿಸಿದಂತೆ ಕಾಣುತ್ತಿದೆ ಎಂದು ಹೇಳಿದರು.

ರಾಜ್ಯ ರೈತ ಸಂಘದ ಉಪಾಧ್ಯಕ್ಷ ಶಿವಾನಂದ ಕುಗ್ವೆ ಮಾತನಾಡಿ, ಹಾಸನದ ಲೈಂಗಿಕ ಪ್ರಕರಣ ನಾಗರಿಕ ಸಮಾಜವೇ ತಲೆತಗ್ಗಿಸುವಂತಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆ ಮುಖ್ಯಭಾಗದಲ್ಲಿರುವವರೆ ಪ್ರಕರಣದ ಪ್ರಮುಖ ಆರೋಪಿಯಾಗಿರುವುದು ದುರಂತ. ಪ್ರಕರಣದಲ್ಲಿ ಭಾಗಿಯಾದವರಿಗೆ ಸಾಮಾಜಿಕ ಬಹಿಷ್ಕಾರ ಹಾಕಬೇಕು ಎಂದರು.

ಕಾರ್ಯಕ್ರಮದಲ್ಲಿ ಎನ್.ಡಿ.ವಸಂತಕುಮಾರ್, ವೃಂದಾ ಹೆಗಡೆ, ನಾರಾಯಣ ಗೋಳಗೋಡು, ಪುರುಷೋತ್ತಮ ತಲವಾಟ, ರಮೇಶ್ ಐಗಿನಬೈಲು, ಮೋಹನಮೂರ್ತಿ, ಎಚ್.ಬಿ.ರಾಘವೇಂದ್ರ, ರಾಮಣ್ಣ ಹಸಲರು ಇನ್ನಿತರರು ಹಾಜರಿದ್ದರು.