ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ತಾಲೂಕಿನ ವಡ್ಡಗೆರೆ ಕೆರೆಯಿಂದ ನಾಲ್ಕನೇ ಹಂತದ ಕೆರೆಗಳಿಗೆ ನೀರು ತುಂಬಿಸಬೇಕು ಎಂದು ಆಗ್ರಹಿಸಿ ಆ.18ರಂದು ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ಹಾಗೂ ನೀರು ಹರಿಸುವವರೆಗೂ ಹೋರಾಟ ನಿಲ್ಲುವುದಿಲ್ಲ ಎಂದು 4ನೇ ಹಂತದ ಕೆರೆ ನೀರು ಅಚ್ಚುಕಟ್ಟು ಪ್ರದೇಶದ ರೈತರು ಸ್ಪಷ್ಟಪಡಿಸಿದ್ದಾರೆ.ಪತ್ರಿಕಾಗೋಷ್ಠಿಯಲ್ಲಿ ಕೆರೆ ಅಚ್ಚುಕಟ್ಟು ಪ್ರದೇಶದ ರೈತ ಕೊಡಸೋಗೆ ಶಿವಪ್ರಕಾಶ್ ಮಾತನಾಡಿ, ಆ.18ರಂದು ಪಟ್ಟಣದ ಪ್ರವಾಸಿ ಮಂದಿರದಿಂದ ಮೂರು ಸಾವಿರ ರೈತರೊಂದಿಗೆ ಪ್ರತಿಭಟನಾ ಮೆರವಣಿಗೆ ಆರಂಭಿಸಿ, ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಲಿದ್ದಾರೆ ಎಂದರು.
ಕೆರೆ ಅಚ್ಚುಕಟ್ಟು ಪ್ರದೇಶದ ರೈತ ಫಲಾನುಭವಿಗಳು ಪಾರ್ವತಿ ಬೆಟ್ಟದಲ್ಲಿ ಪೂರ್ವಭಾವಿ ಸಭೆ ನಡೆಸಲಾಗಿದ್ದು, ಪಕ್ಷಾತೀತವಾಗಿ ಹೋರಾಟ ಮಾಡಲು 4ನೇ ಹಂತದ ಕೆರೆ ಅಚ್ಚುಕಟ್ಟು ಪ್ರದೇಶದ ರೈತರು ತೀರ್ಮಾನಿಸಿದ್ದಾರೆ ಎಂದರು.ಕೆರೆಗೆ ನೀರು ತುಂಬಿಸುವ ಹೋರಾಟ ಪಕ್ಷಾತೀತವಾಗಿ ನಡೆಯಲಿದ್ದು,ತಾಲೂಕಿನ ಎಲ್ಲಾ ರೈತಸಂಘಟನೆಗಳು, ಕನ್ನಡ ಪರ ಸಂಘಟನೆಗಳು, ಪ್ರಗತಿಪರ ಹೋರಾಟಗಾರರು ಹಾಗೂ ಕೆರೆ ಅಚ್ಚುಕಟ್ಟು ಪ್ರದೇಶದ ರೈತರನ್ನು ಆಹ್ವಾನಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
ಸ್ಥಳೀಯ ಶಾಸಕರು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ. ಕೆರೆ ಅಚ್ಚುಕಟ್ಟು ಪ್ರದೇಶದ ರೈತರು ಸಭೆ ನಡೆಸಿದರೆ ಸಭೆಯಲ್ಲಿದ್ದವರು ಬಿಜೆಪಿಗರು ಎಂದು ಹೇಳಿದ್ದಾರೆ. ಪಕ್ಷಾತೀತ ಹೋರಾಟ ನಮ್ಮದು ಎಂದು ವಾಗ್ದಾಳಿ ನಡೆಸಿದರು.
4 ನೇ ಹಂತದ ಕೆರೆಗಳಿಗೆ ನೀರು ಹರಿಯುತ್ತಿದ್ದಾಗ 3 ನೇ ಹಂತದ ಕೆರೆಗಳಿಗೆ ನೀರು ಬಿಟ್ಟಿದ್ದಾರೆ ಎಂದರೆ ಇದು ಯಾರ ವೈಫಲ್ಯ ಹೇಳಿ ಶಾಸಕರೇ? 4 ನೇ ಹಂತದ ಕೆರೆಗೆ ನೀರು ಬಿಡಲು ತೀರ್ಮಾನ ಕೊಟ್ಟಾಗ ನೀವೇಕೆ ವಿರೋಧಿಸಲಿಲ್ಲ ಎಂದು ಪ್ರಶ್ನಿಸಿದರು.
ರೈತಮುಖಂಡ ಎಸ್.ಟಿ.ಮಹದೇವಸ್ವಾಮಿ ಮಾತನಾಡಿ, 4 ನೇ ಹಂತದ ಕೆರೆಗಳಿಗೆ ನೀರು ನೀರು ಬಿಡಬೇಕಾಗಿತ್ತು. ಜಿಲ್ಲಾಡಳಿತ ಯಾವ ಉದ್ದೇಶ ಇಟ್ಟುಕೊಂಡು 3ನೇ ಹಂತಕ್ಕೆ ನಾಲ್ಕನೇ ಹಂತದ ರೈತರ ವಿಶ್ವಾಸ ಪಡೆಯದೇ ನೀರನ್ನ ಹರಿಸಿದ್ದೀರಿ ಎಂದು ಜಿಲ್ಲಾಡಳಿತ ಹಾಗೂ ಶಾಸಕರು ಉತ್ತರ ನೀಡಬೇಕು ಎಂದರು.ಬರುವ ಸೆ.6 ರಿಂದ ತಾಲೂಕಿನ 4ನೇ ಹಂತದ ಎಲ್ಲಾ ಕೆರೆಗಳಿಗೂ ನೀರು ತುಂಬಿಸಬೇಕು ಮತ್ತು ನೀರು ನಿಲ್ಲಿಸಲ್ಲ ಎಂದು ಸ್ಪಷ್ಟ ಭರವಸೆ ಸಿಗುವವರೆಗೂ ಅಹೋರಾತ್ರಿ ಪ್ರತಿಭಟನೆ ಹಾಗೂ ವಿವಿಧ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು.4 ನೇ ಹಂತದ ಅಚ್ಚುಕಟ್ಟು ಪ್ರದೇಶದ ರೈತ ಕೊಡಸೋಗೆ ಶಿವಪ್ರಸಾದ್ ಮಾತನಾಡಿ, ಕೆರೆಗೆ ನೀರು ತುಂಬಿಸುವ ವಿಚಾರದಲ್ಲಿ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಅವರು ಜವಾಬ್ದಾರಿ ಮರೆತು ರೈತರನ್ನು ಜೀವಂತ ಸಮಾಧಿ ಮಾಡಲು ಹೊರಟಿದ್ದಾರೆ. ತಾಲೂಕಿಗೆ ನೀರಿನ ಸಮಸ್ಯೆ ಉದ್ಬವಿಸಿದೆ. ಶಾಸಕರು ಬೇರೆಯವರ ಮೇಲೆ ಗೂಬೆ ಕೂರಿಸುವ ಬದಲು ಈಗಾಲಾದರೂ ತುಂಬಿಸಿ ಎಂದರು.
ಪತ್ರಿಕಾಗೋಷ್ಠಿಯಲ್ಲಿ 4ನೇ ಹಂತದ ಕೆರೆ ಅಚ್ಚುಕಟ್ಟು ಪ್ರದೇಶದ ರೈತರಾದ ರಘು ಶಿಂಡನಪುರ, ಪ್ರಕಾಶ್, ಸುನೀಲ್ ಮೂಡ್ಲು, ರವಿ, ಕಿರಣ್, ಅಶೋಕ್ ಸೇರಿದಂತೆ ರೈತರು ಇದ್ದರು.