ನಾಳೆ ಬಿಕ್ಕೋಡು ಹೋಬಳಿ ಕೇಂದ್ರದಲ್ಲಿ ಬೃಹತ್ ಪ್ರತಿಭಟನೆ

| Published : Sep 29 2024, 01:40 AM IST

ಸಾರಾಂಶ

ಕಳೆದ ಎರಡು ವರ್ಷದಿಂದ ಬೇಲೂರು ತಾಲೂಕಿನ ಅರೇಹಳ್ಳಿ ಮತ್ತು ಬಿಕ್ಕೋಡು ಹೋಬಳಿ ಭಾಗದಲ್ಲಿ ಕಾಡಾನೆ ಸಮಸ್ಯೆ ಹೆಚ್ಚಾಗಿದೆ. ಈಗಾಗಲೇ ಈ ಬಗ್ಗೆ ನಾನು ವಿಧಾನಸಭೆಯಲ್ಲಿ ಮಾತನಾಡಿದರೂ ಸರ್ಕಾರ ಯಾವುದೇ ಕ್ರಮಕೈಗೊಂಡಿಲ್ಲ. ಮಡಿಕೇರಿ ಮತ್ತು ಚಿಕ್ಕಮಗಳೂರು ಜಿಲ್ಲೆಗೆ ಸರ್ಕಾರ ವಿಶೇಷ ಗಮನ ನೀಡಿದೆ. ಹಾಸನ ಜಿಲ್ಲೆಯ ಮೇಲೆ ಮಲತಾಯಿಧೋರಣೆ ತೋರಲಾಗಿದೆ. ಹೀಗಾಗಿ ಬಿಕ್ಕೋಡು ಹೋಬಳಿ ಕೇಂದ್ರದಲ್ಲಿ ರಸ್ತೆತಡೆ ನಡೆಸಿ ಬೃಹತ್ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಗ್ರಾಮಸ್ಥರು, ಬೆಳೆಗಾರರು ಶಾಸಕ ಎಚ್.ಕೆ.ಸುರೇಶ್ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ಬೇಲೂರು

ತಾಲೂಕಿನ ಬಿಕ್ಕೋಡು ಹೋಬಳಿ ಭಾಗದಲ್ಲಿ ಕಾಡಾನೆಗಳ ತೀವ್ರ ಹಾವಳಿಯಿಂದ ಬೆಳೆ ನಾಶದ ಜೊತೆಗೆ ಪ್ರಾಣ ಹಾನಿ ಉಂಟಾದರೂ ಅರಣ್ಯಾಧಿಕಾರಿಗಳು ಮತ್ತು ಸರ್ಕಾರ ಮೀನಾ-ಮೇಷ ಎಣಿಸುತ್ತಿದ್ದಾರೆ. ಶೀಘ್ರವೇ ಪುಂಡಾನೆಗಳನ್ನು ಸೆರೆ ಕಾರ್ಯಾಚರಣೆ ನಡೆಸಿ ಶಾಶ್ವತವಾಗಿ ಸ್ಥಳಾಂತರ ಮಾಡಬೇಕಿದೆ. ಇಲ್ಲವೇ ಬಿಕ್ಕೋಡು ಹೋಬಳಿ ಕೇಂದ್ರದಲ್ಲಿ ರಸ್ತೆತಡೆ ನಡೆಸಿ ಬೃಹತ್ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಗ್ರಾಮಸ್ಥರು, ಬೆಳೆಗಾರರು ಶಾಸಕ ಎಚ್.ಕೆ.ಸುರೇಶ್ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಒತ್ತಾಯಿಸಿದರು. ಬಿಕ್ಕೋಡಿನ ಶ್ರೀ ವಿನಾಯಕ ಸಮುದಾಯ ಭವನದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಶಾಸಕ ಎಚ್.ಕೆ.ಸುರೇಶ್ ಮಾತನಾಡಿ, ಕಳೆದ ಎರಡು ವರ್ಷದಿಂದ ಬೇಲೂರು ತಾಲೂಕಿನ ಅರೇಹಳ್ಳಿ ಮತ್ತು ಬಿಕ್ಕೋಡು ಹೋಬಳಿ ಭಾಗದಲ್ಲಿ ಕಾಡಾನೆ ಸಮಸ್ಯೆ ಹೆಚ್ಚಾಗಿದೆ. ಈಗಾಗಲೇ ಈ ಬಗ್ಗೆ ನಾನು ವಿಧಾನಸಭೆಯಲ್ಲಿ ಮಾತನಾಡಿದರೂ ಸರ್ಕಾರ ಯಾವುದೇ ಕ್ರಮಕೈಗೊಂಡಿಲ್ಲ. ಮಡಿಕೇರಿ ಮತ್ತು ಚಿಕ್ಕಮಗಳೂರು ಜಿಲ್ಲೆಗೆ ಸರ್ಕಾರ ವಿಶೇಷ ಗಮನ ನೀಡಿದೆ. ಹಾಸನ ಜಿಲ್ಲೆಯ ಮೇಲೆ ಮಲತಾಯಿಧೋರಣೆ ತೋರಲಾಗಿದೆ. ಅರಣ್ಯಾಧಿಕಾರಿಗಳ ವೈಫಲ್ಯದಿಂದಲೇ ಇಂದು ಸಾವಿರಾರು ಎಕರೆ ಬೆಳೆ ನಾಶ ಮತ್ತು ಪ್ರಾಣ ಹಾನಿಯಾಗಿದೆ. ಅರಣ್ಯ ಮಂತ್ರಿಗಳು ಕೂಡ ಮೌನ ಹೊಂದಿದ ಕಾರಣದಿಂದ ನನ್ನ ಕ್ಷೇತ್ರದಲ್ಲಿ ಕಾಡಾನೆ ಅಟ್ಟಹಾಸ ಜೋರಾಗಿದೆ. ಈ ಬಗ್ಗೆ ಅಧಿಕಾರಿಗಳು ತ್ವರಿತವಾಗಿ ಕೆಲಸ ಮಾಡಬೇಕು ಎಂದು ಸೂಚಿಸಿದರು.

ಬಿಕ್ಕೋಡು ಗ್ರಾ.ಪಂ.ಅಧ್ಯಕ್ಷ ಹೇಮರಾಜ್ ಮಾತನಾಡಿ, ಕಳೆದ ಎರಡು ತಿಂಗಳಿಂದ ಬಿಕ್ಕೋಡು ಹೋಬಳಿ ಭಾಗದಲ್ಲಿ ಸುಮಾರು 35 ಕಾಡಾನೆ ಹಾವಳಿಯಿಂದ ರೈತರು ತತ್ತರಿಸಿದ್ದಾರೆ. ಈ ಕಾರಣದಿಂದ ಜಿಲ್ಲಾಧಿಕಾರಿ ಕಚೇರಿ ಬಳಿ ಅನಿರ್ದಿಷ್ಟಾವಧಿ ಮುಷ್ಕರ ಮಾಡುವ ಮೂಲಕ ನ್ಯಾಯ ಪಡೆಯಬೇಕು. ಸಿದ್ದರಾಯಯ್ಯ ಸರ್ಕಾರಕ್ಕೆ ನಮ್ಮ ಗೋಳು ಕೇಳುತ್ತಿಲ್ಲ. ಸೆ.30ರ ಸೋಮವಾರ ಬಿಕ್ಕೋಡಿನಲ್ಲಿಯೇ ಬೃಹತ್ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಪಿಎಲ್ ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಶಿವಶಂಕರ ‌ಮಾತನಾಡಿ, ಕಾಡಾನೆ ದಾಳಿ ಕೇವಲ ಬೇಲೂರು ಗಡಿಭಾಗದ ಅರೇಹಳ್ಳಿ ಹೋಬಳಿ‌ ಭಾಗದಿಂದ ಕಾಡಾನೆಗಳು ಅರೆಮಲೆನಾಡು ಭಾಗದ ಬಿಕ್ಕೋಡು ಭಾಗಕ್ಕೆ ಧಾವಿಸಿ ದಾಂದಲೆ ನಡೆಸುತ್ತಿದೆ. ಇದಕ್ಕೆ ಕಾರಣ ಅರಣ್ಯಾಧಿಕಾರಿಗಳ ನಿರ್ಲಕ್ಷ್ಯದಿಂದ ಬೆಳೆಯ ಜೊತೆಗೆ ಪ್ರಾಣಹಾನಿ ಉಂಟಾಗುತ್ತಿದೆ. ಈ ಬಗ್ಗೆ ನಾವುಗಳು ‌ಬಿಕ್ಕೋಡಿನಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಲಾಗುತ್ತದೆ ಎಂದರು.

ಸ್ಥಳೀಯ ಮಹಿಳೆಯರು ಮಾತನಾಡಿ, ಬಿಕ್ಕೋಡು ಭಾಗದಲ್ಲಿ ನೂರಾರು ಎಕರೆ ಮುಸುಕಿನ ಜೋಳ ಬೆಳೆ ಕಾಡಾನೆ ಪಾಲಾಗಿದೆ. ಅರಣ್ಯಾಧಿಕಾರಿಗಳೇ ಮುಸುಕಿನ ಜೋಳದ ಹೊಲಕ್ಕೆ ಓಡಿಸುವ ಕೆಲಸ‌ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ ಅವರು, ನಮಗೆ ಯಾರ ಮೇಲೆ ನಂಬಿಕೆ ಇಲ್ಲ ಸೋಮವಾರ ಬಿಕ್ಕೋಡು ಬಂದ್‌ ಮಾಡುವುದು ಶತಸಿದ್ದವೆಂದರು.

ಈ ಸಂದರ್ಭದಲ್ಲಿ ಭೂಮಿಪುತ್ರ ಸಂಘದ ಅಧ್ಯಕ್ಷ ರೇಣುಕಾನಂದ್, ಕೆಡಿಪಿ ಸದಸ್ಯ ಚೇತನ್, ಮಾಜಿ ಅಧ್ಯಕ್ಷ ಗೋವಿಂದಶೆಟ್ಟಿ, ಪಿಡಿಒ ತಾರಾನಾಥ, ಹಾಸನ ಉಪ ಅರಣ್ಯ ಸಂರಕ್ಷಾಣಾಧಿಕಾರಿ ಸೌರಭ್ ಕುಮಾರ್‌, ಸಹಾಯಕ ಅರಣ್ಯಾಧಿಕಾರಿ ಪುಲ್ಕೀತ್ ಮೀನಾ, ಬೇಲೂರು ವಲಯಾಧಿಕಾರಿ ಯತೀಶ ಸೇರಿದಂತೆ ಇನ್ನೂ ಮುಂತಾದ ಹಾಜರಿದ್ದರು.