ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಮಹಿಷ ಮಂಡಲೋತ್ಸವ ಇಂದು

| Published : Sep 29 2024, 01:40 AM IST

ಸಾರಾಂಶ

ಮಹಿಷ ಮಂಡಲೋತ್ಸವ (ಮಹಿಷ ದಸರಾ) ಹಿನ್ನೆಲೆಯಲ್ಲಿ ಭಾನುವಾರ ಬೆಳಗ್ಗೆ 8.30ಕ್ಕೆ ಚಾಮುಂದಿಬೆಟ್ಟದಲ್ಲಿನ ಮಹಿಷಾಸುರನ ಪ್ರತಿಮೆಗೆ ಪುಷ್ಪಾರ್ಚನೆ ಕಾರ್ಯಕ್ರಮ ಮತ್ತು ಬೆಳಗ್ಗೆ 10.30ಕ್ಕೆ ನಗರದ ಪುರಭವನದ ಹೊರಾವರಣದಲ್ಲಿ ಮಹಿಷ ಮಂಡಲೊತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಮಹಿಷ ಮಂಡಲೋತ್ಸವ (ಮಹಿಷ ದಸರಾ) ಹಿನ್ನೆಲೆಯಲ್ಲಿ ಭಾನುವಾರ ಬೆಳಗ್ಗೆ 8.30ಕ್ಕೆ ಚಾಮುಂದಿಬೆಟ್ಟದಲ್ಲಿನ ಮಹಿಷಾಸುರನ ಪ್ರತಿಮೆಗೆ ಪುಷ್ಪಾರ್ಚನೆ ಕಾರ್ಯಕ್ರಮ ಮತ್ತು ಬೆಳಗ್ಗೆ 10.30ಕ್ಕೆ ನಗರದ ಪುರಭವನದ ಹೊರಾವರಣದಲ್ಲಿ ಮಹಿಷ ಮಂಡಲೊತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಶನಿವಾರ ಮಧ್ಯರಾತ್ರಿ 12ರಿಂದ ಸೆ.30ರ ಬೆಳಗ್ಗೆ 6 ಗಂಟೆಯವರೆಗೆ ನಗರದಲ್ಲಿ (ಪುರಭವನ ಒಳಾವರಣ ಹೊರತುಪಡಿಸಿ) ಮಹಿಷ ದಸರಾ ಪರ, ವಿರೋಧ ರ್‍ಯಾಲಿ ನಿರ್ಬಂಧಿಸಿ ಆದೇಶ ಹೊರಡಿಸಲಾಗಿದೆ. ನಿಷೇಧಾಜ್ಞೆ ಜಾರಿಗೊಳಿಸಿ ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಆದೇಶ ಹೊರಡಿಸಿದ್ದಾರೆ.

ಅದರಂತೆ ಯಾವುದೇ ಮೆರವಣಿಗೆ, ಪ್ರತಿಭಟನೆ ರ್‍ಯಾಲಿ, ಬೈಕ್ ರ್‍ಯಾಲಿ ನಡೆಸುವುದು, ಪರ-ವಿರೋಧ ಘೋಷಣೆ ಕೂಗುವುದು, ಪಟಾಕಿ ಸಿಡಿಸಿ ಸಂಭ್ರಮ ಆಚರಿಸುವುದು, 5 ಜನರಿಗಿಂತ ಹೆಚ್ಚಿನ ಜನ ಗುಂಪು ಸೇರುವುದು, ಯಾವುದೇ ಬಹಿರಂಗ ಸಭೆ ಸಮಾರಂಭಗಳನ್ನು ನಡೆಸುವುದು ಹಾಗೂ ಯಾವುದೇ ಸಾರ್ವಜನಿಕ ಸ್ಥಳದಲ್ಲಿ ಪ್ರಚಾರ, ಧ್ವನಿವರ್ಧಕ ಬಳಸುವುದು, ಫ್ಲೆಕ್ಸ್, ಬ್ಯಾನರ್ ಅಳವಡಿಸುವುದು ಕರಪತ್ರಗಳನ್ನು ಹಂಚುವುದು, ಮೂರ್ತಿ ಮೆರವಣಿಗೆ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಈ ಆದೇಶವು ಮದುವೆ ಸಮಾರಂಭಗಳಿಗೆ ಮತ್ತು ಶವ ಸಂಸ್ಕಾರಗಳಿಗೆ ಹಾಗೂ ಶಾಲಾ-ಕಾಲೇಜು ಮತ್ತು ಪರೀಕ್ಷೆಗಳಿಗೆ ತೆರಳುವವರಿಗೆ ಅನ್ವಯಿಸುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ಈ ಮಧ್ಯೆ, ಮಹಿಷ ದಸರಾ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಯಾರಿಗೂ ಯಾವುದೇ ತೊಂದರೆಯಾಗದಂತೆ ಯಾರು ಬೇಕಾದರೂ ಅವರವರ ಧಾರ್ಮಿಕ ಆಚರಣೆ ಮಾಡಿಕೊಳ್ಳಬಹುದು. ಆದರೆ, ಕಾನೂನು ಸುವ್ಯವಸ್ಥೆಗೆ ಸಮಸ್ಯೆ ಆಗಬಾರದು ಅಷ್ಟೆ ಎಂದು ತಿಳಿಸಿದ್ದಾರೆ.