ಸಾರಾಂಶ
ನಮ್ಮ ಬೇಡಿಕೆಗೆ ರಾಜ್ಯ ಸರ್ಕಾರ ಸ್ಪಂದಿಸುವುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ಕಿರಿಯವೈದ್ಯರು ಬೃಹತ್ ಪ್ರತಿಭಟನೆ ನಡೆಸುವ ಮೂಲಕ ಎಚ್ಚರಿಕೆ ನೀಡಿದ್ದಾರೆ.
ಹುಬ್ಬಳ್ಳಿ:
ಪ್ರತಿ ವರ್ಷ ಸ್ಟೈಫಂಡ್ ಹೆಚ್ಚಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮಂಗಳವಾರ ಇಲ್ಲಿನ ಕಿಮ್ಸ್‌ನ ಕಿರಿಯ ವೈದ್ಯರ ಸಂಘದ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಜರುಗಿತು.ನಗರದ ಕಿಮ್ಸ್ ಆವರಣದಿಂದ ಆರಂಭವಾದ ಮೆರವಣಿಗೆ ಬಿಆರ್‌ಟಿಎಸ್ ಕಾರಿಡಾರ್ ಮೂಲಕ ಸಾಗಿ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದ ವರೆಗೆ ಸಾಗಿತು. ಕರ್ತವ್ಯ ನಿರ್ವಹಿಸುವ ಸ್ಥಳದಲ್ಲಿ ಭದ್ರತೆ ಕಲ್ಪಿಸಬೇಕು. ವೈದ್ಯಕೀಯ ಸ್ನಾತಕೋತ್ತರ ಪದವಿಯ ಶುಲ್ಕ ಕಡಿಮೆಗೊಳಿಸಬೇಕು. ಪ್ರತಿ ವರ್ಷವೂ ಸ್ಟೈಫಂಡ್ ಹೆಚ್ಚಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದರು.
ಸಂಘದ ಅಧ್ಯಕ್ಷ ಡಾ. ಸುಹಾಸ ಎಸ್.ಟಿ. ಮಾತನಾಡಿ, ನಮ್ಮ ಸಮಸ್ಯೆ ಬಗೆಹರಿಯುವ ವರೆಗೆ ಈ ಮುಷ್ಕರ ಕೈಬಿಡುವುದಿಲ್ಲ ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ನಂತರ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.ಸಂಘದ ರಾಜ್ಯ ಸಂಚಾಲಕ ಡಾ. ಆದರ್ಶ ಇ.ಎಚ್, ಪ್ರಧಾನ ಕಾರ್ಯದರ್ಶಿ ಡಾ. ಆದರ್ಶಾ ವಿ, ಉಪಾಧ್ಯಕ್ಷೆ ಡಾ. ಹರ್ಷಿತಾ, ಡಾ. ದೀಕ್ಷಂತ್, ಡಾ. ಸುನಿಲ್ ಆರ್, ಡಾ. ರಕ್ಷಿತ್ ಎಂ.ಸಿ, ಡಾ. ರಾಮಚಂದ್ರ, ಡಾ. ವಿಭವ್, ಡಾ. ಪ್ರದೀಪ್ ಸೇರಿದಂತೆ ವೈದ್ಯಕೀಯ ಸ್ನಾತಕೋತ್ತರ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.ಮೇಣದ ಬತ್ತಿ ಬೆಳಗಿ ಶ್ರದ್ಧಾಂಜಲಿ:
ಪಶ್ಚಿಮ ಬಂಗಾಳದಲ್ಲಿ ಕಿರಿಯ ವೈದ್ಯೆಯ ಹತ್ಯೆ ಖಂಡಿಸಿ ನಗರದ ಕಿಮ್ಸ್ ಆವರಣದಲ್ಲಿ ಮೇಣದ ಬತ್ತಿ ಬೆಳಗಿಸಿ ಮಂಗಳವಾರ ಸಂಜೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕಿಮ್ಸ್ ಕಿರಿಯ ವೈದ್ಯರ ಸಂಘ, ಭಾರತೀಯ ವೈದ್ಯಕೀಯ ಸಂಸ್ಥೆಯ ಹುಬ್ಬಳ್ಳಿ ಶಾಖೆ, ಐಎಂಎ ವುಮೆನ್ಸ್ ಡಾಕ್ಟರ್ಸ್ ವಿಂಗ್, ಕಿಮ್ಸ್ ಶಿಕ್ಷಕರ ಸಂಘದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.