ನೇಹಾ ಹತ್ಯೆ ಖಂಡಿಸಿ ಇಂದು ಬೃಹತ್ ಪ್ರತಿಭಟನೆ

| Published : Apr 22 2024, 02:15 AM IST

ಸಾರಾಂಶ

ಹುಬ್ಬಳ್ಳಿಯಲ್ಲಿ ನಡೆದ ನೇಹಾ ಹಿರೇಮಠ ಹತ್ಯೆ ಖಂಡಿಸಿ ಮಹಿಳಾ ಹಿತರಕ್ಷಣಾ ವೇದಿಕೆ ವತಿಯಿಂದ ಏ.22ರಂದು ನಗರದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸಂಸದೆ ಮಂಗಲ ಅಂಗಡಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಹುಬ್ಬಳ್ಳಿಯಲ್ಲಿ ನಡೆದ ನೇಹಾ ಹಿರೇಮಠ ಹತ್ಯೆ ಖಂಡಿಸಿ ಮಹಿಳಾ ಹಿತರಕ್ಷಣಾ ವೇದಿಕೆ ವತಿಯಿಂದ ಏ.22ರಂದು ನಗರದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸಂಸದೆ ಮಂಗಲ ಅಂಗಡಿ ತಿಳಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೇಹಾ ಹಿರೇಮಠ ಕೊಲೆಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ.‌ ನೇಹಾ ಕುಟಂಬಕ್ಕೆ ನ್ಯಾಯ ಒದಗಿಸಲು ಪ್ರತಿಭಟನೆಗೆ ಕರೆ ನೀಡಿಲಾಗಿದೆ‌.‌ ಪ್ರತಿಭಟನೆಯಲ್ಲಿ ಸಾವಿರಾರು ಮಹಿಳೆಯರು ಭಾಗವಹಿಸಲಿದ್ದಾರೆ. ಮೇಲಿಂದ ಮೇಲೆ ಇಂತಹ ಘಟನೆಗಳು ನಡೆಯುತ್ತಿವೆ.‌ ಬೆಳಗಾವಿಯ ವಂಟಮೂರಿಯಲ್ಲಿ ಇದೇ ರೀತಿಯ ಘಟನೆ ಜನರ ಮನಸ್ಸಿನಲ್ಲಿ ಇನ್ನೂ ಮಾಸಿಲ್ಲ. ಈಗ ಹುಬ್ಬಳ್ಳಿಯಲ್ಲಿ ಘಟನೆ ನಡೆದಿದೆ.‌ ಈ ರೀತಿಯ ಘಟನೆಗಳು ಮುಂದೆ ನಡೆಯದಂತೆ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟಿಸಲಾಗುವುದು. ಸರ್ವಾಜನಿಕರು ಪ್ರತಿಭಟನೆಯಲ್ಲಿ ಭಾಗವಹಿಸುವ ಮೂಲಕ ನೇಹಾಳಿಗೆ ನ್ಯಾಯ ಕೊಡಿಸುವ ಕೆಲಸ ಆಗಬೇಕು ಎಂದು ಮನವಿ ಮಾಡಿದರು. ಶಾಸಕ ಅಭಯ ಪಾಟೀಲ ಮಾತನಾಡಿ, ಕಾಂಗ್ರೆಸ್ ಆಡಳಿತದಲ್ಲಿ ಹಿಂದೂ ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲ. ಹುಬ್ಬಳ್ಳಿಯಲ್ಲಿ ನಡೆದ ಘಟನೆ ಬೆಳಗಾವಿಯಲ್ಲಿ ಕೂಡ ಮುಂದೆ ಆಗಬಹುದು. ಆದ್ದರಿಂದ ನಾವೆಲ್ಲರೂ ಜಾಗೃತರಾಗಬೇಕು. ಹಿಂದೂ ಹೆಣ್ಣು ಮಕ್ಕಳು ಜಾಗೃತರಾಗಬೇಕು. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲ. ಈ ರೀತಿ ಘಟನೆಗಳು ಮೇಲಿಂದ ಮೇಳೆ ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಮಹಿಳಾ ಹಿತರಕ್ಷಣಾ ವೇದಿಕೆ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಬಿಜೆಪಿ ಮುಖಂಡ ಎಂ.ಬಿ. ಜಿರಲಿ ಮಾತನಾಡಿ, ನೇಹಾಳ ಕುರಿತು ಸಾಮಾಜಿ ಜಾಲತಾಣಗಳಲ್ಲಿ ಸುಳ್ಳು ಪೋಸ್ಟ್ ಹಾಕಲಾಗುತ್ತಿದೆ. ಇದರ ಹಿಂದೆ ಜಿಹಾದಿ ಮಾನಸಿಕತೆ ಇದೆ. ಈ ಪ್ರಕರಣ ಕೂಲಂಕಷವಾಗಿ ತನಿಖೆ ಆಗಬೇಕು ಎಂದು ಆಗ್ರಹಿಸಿದರು.‌

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ರಾಜ್ಯಉಪಾಧ್ಯಕ್ಷ ಅನಿಲ ಬೆನಕೆ, ಪಾಲಿಕೆ ಮೇಯರ್ ಸವಿತಾ ಕಾಂಬಳೆ, ಮಹಾನಗರ ಅಧ್ಯಕ್ಷೆ ಗೀತಾ ಸುತಾರ, ಜಿಲ್ಲಾ ಗ್ರಾಮೀಣ ಅಧ್ಯಕ್ಷ ಸುಭಾಷ ಪಾಟೀಲ, ಮಾಜಿ ಶಾಸಕ ಸಂಜಯ ಪಾಟೀಲ, ಎಫ್‌.ಎಸ್. ಸಿದ್ದನಗೌಡರ, ಹನುಮಂತ ಕೊಂಗಾಲಿ, ರಮೇಶ ದೇಶಪಾಂಡೆ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.‌