ಹಳೇ ಹುಬ್ಬಳ್ಳಿಯ ಆಸಾರ ಓಣಿಯ ಪುಷ್ಕರಣಿ ಮೇಲೆ ರಸ್ತೆ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಆರೋಪಿಸಿರುವ ಶ್ರೀಭವಾನಿ ಶಂಕರ ನಾರಾಯಣ ದೇವಸ್ಥಾನ ಹಾಗೂ ಪುಷ್ಕರಣಿ ಸಂರಕ್ಷಣಾ ಸಮಿತಿ ಆ. 22ರಂದು ಬೃಹತ್ ಹೋರಾಟಕ್ಕೆ ಕರೆ ನೀಡಿದೆ.

ಹುಬ್ಬಳ್ಳಿ:

ಹಳೇ ಹುಬ್ಬಳ್ಳಿಯ ಆಸಾರ ಓಣಿಯ ಪುಷ್ಕರಣಿ ಮೇಲೆ ರಸ್ತೆ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಆರೋಪಿಸಿರುವ ಶ್ರೀಭವಾನಿ ಶಂಕರ ನಾರಾಯಣ ದೇವಸ್ಥಾನ ಹಾಗೂ ಪುಷ್ಕರಣಿ ಸಂರಕ್ಷಣಾ ಸಮಿತಿ ಆ. 22ರಂದು ಬೃಹತ್ ಹೋರಾಟಕ್ಕೆ ಕರೆ ನೀಡಿದ ಬೆನ್ನಲ್ಲೆ ಹುಬ್ಬಳ್ಳಿ-ಧಾರವಾಡ ಪೊಲೀಷ್‌ ಕಮಿಷನರೇಟ್‌ ಮುಂಜಾಗ್ರತಾ ಕ್ರಮವಾಗಿ ನಿಷೇಧಾಜ್ಞೆ ( ಬೆಳಗ್ಗೆ 6ರಿಂದ ರಾತ್ರಿ 10ರ ವರೆಗೆ) ಜಾರಿಗೊಳಿಸಿದೆ. ಜತೆಗೆ ಶುಕ್ರವಾರದಿಂದಲೇ ಬಿಗಿಭದ್ರತೆ ಒದಗಿಸಿದ್ದು ಶನಿವಾರ ಬರೋಬ್ಬರಿ 1500ಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸುತ್ತಿದೆ.

ಬಿಎನ್‌ಎಸ್‌ ಕಾಯ್ದೆಯ ಸೆಕ್ಷನ್ 163ರ ಅಡಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಆಸಾರ ಹೊಂಡದಿಂದ 500 ಮೀಟರ್ ವ್ಯಾಪ್ತಿಯಲ್ಲಿ ಗುಂಪು ಸೇರುವುದು, ಗುಂಪಾಗಿ ಸಂಚರಿಸುವುದು, ನಿಷೇಧಿತ ವಸ್ತು ಹೊಂದುವುದು ಹಾಗೂ ಘೋಷಣೆ ಕೂಗುವುದನ್ನು ನಿಷೇಧಿಸಲಾಗಿದೆ. ಆದೇಶ ಉಲ್ಲಂಘಿಸಿದರೆ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದೆ.

ಗಡುವು ಮುಕ್ತಾಯ:

ಪುಷ್ಕರಣಿ ಮೇಲೆ ನಿರ್ಮಿಸುತ್ತಿರುವ ರಸ್ತೆ ತೆರವುಗೊಳಿಸಿ, ಐತಿಹಾಸಿಕ ದೇವಸ್ಥಾನ ಅಭಿವೃದ್ಧಿಪಡಿಸಬೇಕು ಎಂದು ಸಮಿತಿ ಮಹಾನಗರ ಪಾಲಿಕೆ ಹಾಗೂ ಪುರಾತತ್ವ ಇಲಾಖೆಗೆ ಆ. 22ರ ವರೆಗೆ ಗಡುವು ನೀಡಿತ್ತು. ನಿಗದಿತ ಅವಧಿಯಲ್ಲಿ ಕ್ರಮಕೈಗೊಳ್ಳದಿದ್ದರೆ ಬೃಹತ್ ಹೋರಾಟ ನಡೆಸಿ ರಸ್ತೆ ತೆರವುಗೊಳಿಸಲಾಗುವುದು ಎಂದು ಎಚ್ಚರಿಸಿತ್ತು. ಆದರೆ, ಸ್ಪಂದನೆ ದೊರೆಯದ ಹಿನ್ನಲೆ ಚನ್ನಪೇಟದಿಂದ ಆಸಾರ ಓಣಿಯ ಶ್ರೀಭವಾನಿ ಶಂಕರ ನಾರಾಯಣ ದೇವಸ್ಥಾನದ ವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ, ದೇವಸ್ಥಾನದ ಬಳಿ ಹೋರಾಟ ನಡೆಸಲು ಸಮಿತಿ ಸಿದ್ಧತೆ ಮಾಡಿಕೊಂಡಿದೆ. ಈ ಹೋರಾಟಕ್ಕೆ ಬಿಜೆಪಿ ಹುಬ್ಬಳ್ಳಿ- ಧಾರವಾಡ ಮಹಾನಗರ ಜಿಲ್ಲಾ ಘಟಕ ಸೇರಿದಂತೆ ಹಲವು ಹಿಂದೂಪರ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ.

1500ಕ್ಕೂ ಅಧಿಕ ಪೊಲೀಸರ ನಿಯೋಜನೆ

ಹೋರಾಟದ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆ ವ್ಯಾಪಕ ಬಂದೋಬಸ್ತ್ ಕೈಗೊಂಡಿದೆ. 8 ಕೆಎಸ್‌ಆರ್‌ಪಿ ಮತ್ತು 14 ಸಿಎಆರ್ ತುಕಡಿ ಸೇರಿದಂತೆ 1500ಕ್ಕೂ ಅಧಿಕ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಶ್ರುತಿ ಎನ್. "ಕನ್ನಡಪ್ರಭ "ಕ್ಕೆ ತಿಳಿಸಿದರು.ಪುಷ್ಕರಣಿ ಮೇಲೆ ಅನಧಿಕೃತವಾಗಿ ನಿರ್ಮಿಸಿದ ರಸ್ತೆ ತೆರೆವಿಗೆ ಮಹಾನಗರ ಪಾಲಿಕೆಗೆ ಆ. 22ರ ವರೆಗೆ ಗಡುವು ನೀಡಿದ್ದರೂ ಸ್ಪಂದಿಸಿಲ್ಲ. ಹೀಗಾಗಿ ಮೊದಲೇ ಹೇಳಿದಂತೆ ಶನಿವಾರ ಹೋರಾಟ ಹಮ್ಮಿಕೊಂಡಿದ್ದು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ. ಹೋರಾಟ ನಡೆಸಿ ರಸ್ತೆ ತೆರವುಗೊಳಿಸುತ್ತೇವೆ.

- ಜಯತೀರ್ಥ ಕಟ್ಟಿ, ಸಮಿತಿಯ ಸಹ ಸಂಚಾಲಕ