ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಕೆಲವು ದಿನಗಳಿಂದ ಹಿಂದೂ ಸಮಾಜದ ಶ್ರದ್ಧಾ ಕೇಂದ್ರ ಶ್ರೀ ಕ್ಷೇತ್ರ ಧರ್ಮಸ್ಥಳದ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಮಾಡಿ ಹಿಂದೂ ಧಾರ್ಮಿಕ ಕ್ಷೇತ್ರಕ್ಕೆ ಹೆಸರಿಗೆ ಕಳಂಕ ತರುವ ಹೀನ ಕೃತ್ಯ ನಡೆಯುತ್ತಿದೆ. ಇದನ್ನು ಖಂಡಿಸಿ ಆ.19ರಂದು ಬೃಹತ್ ಮೌನ ಪ್ರತಿಭಟನೆ ನಡೆಸಲು ಹಿಂದೂ ಸಮಾಜದವರು ತೀರ್ಮಾನಿಸಿದ್ದಾರೆ.ಬೆಳಗಾವಿಯ ಧರ್ಮನಾಥ ಭವನದಲ್ಲಿ ಶನಿವಾರ ನಡೆದ ಎಲ್ಲ ಹಿಂದೂ ಸಮಾಜಮುಖಂಡರ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು. ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮಾತನಾಡಿ, ಹಿಂದೂ ಧಾರ್ಮಿಕ ಕ್ಷೇತ್ರಗಳ ಅವಹೇಳನ ಮಾಡುವುದನ್ನು ನಾವು ಸಹಿಸುವುದಿಲ್ಲ. ಅನಾಮಿಕನೊಬ್ಬ ಹೇಳಿದಾಕ್ಷಣ ಯಾವುದೇ ತನಿಖೆ ನಡಿಸದೆ ಜಾಗವನ್ನು ಅಗೆಯುವುದು ಸರಿಯಲ್ಲ. ಈ ಘಟನೆಯನ್ನು ನಾವೆಲ್ಲ ಖಂಡಿಸಿ ಪ್ರತಿಭಟನೆ ಕೈಗೊಂಡು ಸರ್ಕಾರಕ್ಕೆ ಬಿಸಿ ಮುಟ್ಟಿಸಬೇಕಾಗಿದೆ ಎಂದರು.ಮಾಜಿ ಸಂಸದ ಅಮರಸಿಂಹ ಪಾಟೀಲ ಮಾತನಾಡಿ, ಯಾರೋ ಆರೋಪ ಮಾಡಿದ್ದಾರೆ. ಆದರೆ ಸರ್ಕಾರ ಯಾವುದೇ ಮುಂದಾಲೋಚನೆ ಮಾಡದೆ ಎಸ್‌ಐಟಿ ರಚನೆ ಮಾಡಿ ತನಿಖೆ ನಡೆಸುತ್ತಿದೆ. ಈ ತನಿಖೆಯಲ್ಲಿ ಯಾವ ಸುಳಿವು ಸಿಕ್ಕಿಲ್ಲ. ಆದರೂ ಕ್ಷೇತ್ರದ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ. ಈ ಘಟನೆಯನ್ನು ನಾವೆಲ್ಲ ಖಂಡಿಸುತ್ತೇವೆ ಎಂದು ಕಿಡಿಕಾರಿದರು.ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಮಾತನಾಡಿ, ಧರ್ಮಸ್ಥಳ ಕ್ಷೇತ್ರ ಒಂದು ಜಾತಿ, ಒಂದು ಸಮುದಾಯ, ಒಂದು ವರ್ಗಕ್ಕೆ ಸೀಮಿತವಾಗಿಲ್ಲ. ಶ್ರೀ ಕ್ಷೇತ್ರವು ಎಲ್ಲ ಸಮಾಜದ ಅಭಿವೃದ್ಧಿಗೆ ಸಹಕರಿಸಿದೆ. ಮಂಜುನಾಥ ಸ್ವಾಮಿಯ ಅನುಗ್ರಹ ಎಲ್ಲರ ಮೇಲಿದೆ. ಈ ಕ್ಷೇತ್ರದ ಮೇಲೆ ಕಳಂಕ ತರುವುದು ಸರಿಯಲ್ಲ. ಇದು ಕೇವಲ ಧರ್ಮಸ್ಥಳಕ್ಕೆ ಸೀಮಿತವಾಗಿಲ್ಲ. ಈ ಹೀನ ಕೃತ್ಯ ಇಡಿ ಹಿಂದೂ ಸಮಾಜಕ್ಕೆ ಕಳಂಕ ತುಳಿಯುವ ವ್ಯವಸ್ಥಿತವಾಗಿ ನಡೆಯುತ್ತಿರುವ ಷಡ್ಯಂತ್ರವಾಗಿದೆ. ಈ. ಘಟನೆಯನ್ನು ಸಮಸ್ತ ಹಿಂದೂ ಸಮಾಜ ಒಗ್ಗಟ್ಟಿನಿಂದ ಹೋರಾಟ ಮಾಡಬೇಕಿದೆ ಎಂದರು.ಮಾಜಿ ಶಾಸಕ ಅನಿಲ ಬೆನಕೆ ಮಾತನಾಡಿ, ಸರ್ಕಾರ ಇಂದು ಸಮಸ್ತ ಹಿಂದೂ ಸಮಾಜವನ್ನು ಹೀಯಾಳಿಸುವ ಕೆಲಸ ಮಾಡುತ್ತಿದೆ. ತನಿಖೆಯನ್ನು ಕಾನೂನು ಚೌಕಟ್ಟಿನಲ್ಲಿ ಪ್ರಾರಂಭಿಸಿದ್ದರೂ ಈ ತನಿಖೆಯ ಫಲಿತಾಂಶ ಶೂನ್ಯವಾಗಿದೆ. ಈ ಘಟನೆ ಹಿಂದೂ ಸಮಾಜವನ್ನು ಗುರಿ ಮಾಡಿ ಸಮಾಜವನ್ನು ಸೋಷಿಯಲ್ ಮೀಡಿಯಾ ಮೂಲಕ ತುಳಿಯುವ ಕೆಲಸ ನಡೆಯುತ್ತಿದೆ. ಈ ಘಟನೆಯನ್ನು ನಾವೆಲ್ಲರೂ ಖಂಡಿಸಬೇಕಿದೆ ಎಂದು ಹೇಳಿದರು.
ಸಮಾರಂಭದಲ್ಲಿ ಮಹಾಪೌರ ಮಂಗೇಶ ಪವಾರ, ಶಾಸಕ ವಿಠ್ಡಲ ಹಲಗೇಕರ, ಅಭಯ ಪಾಟೀಲ, ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ, ಅರವಿಂದ ಪಾಟೀಲ, ಸಂಜಯ ಪಾಟೀಲ, ಡಾ.ರವಿ ಪಾಟೀಲ, ಮುರುಘೇಂದ್ರ ಪಾಟೀಲ ಮೊದಲಾದವರು ಮಾತನಾಡಿ, ಧರ್ಮಸ್ಥಳ ಕ್ಷೇತ್ರ ವಿರುದ್ಧ ನಡೆಯುತ್ತಿರುವ ಪಿತೂರಿ ತೀವ್ರವಾಗಿ ಖಂಡಿಸಿದರು.ಈ ಸಭೆಯಲ್ಲಿ ವಿವಿಧ ಸಮಾಜ ಮುಖಂಡರು ಸೇರಿ ಮಂಗಳವಾರ, ಆ.19 ರಂದು ಬೃಹತ್ ಮೌನ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಯಿತು. ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಜನರಲ್ ಸೆಕ್ರೆಟರಿ ಸುನಿಲ ಹನಮಣ್ಣವರ, ಬೈಲಹೊಂಗಲ ಸಮಾಜ ಕಾರ್ಯಕರ್ತ ಗುರು ಮೆಟಗುಡ್ಡ, ರವಿರಾಜ ಪಾಟೀಲ ಉಪಸ್ಥಿತರಿದ್ದರು. ಭರತೇಶ ಶಿಕ್ಷಣ ಸಂಸ್ಥೆಯ ವಿನೋದ ದೊಡ್ಡಣ್ಣವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಂತಿನಾಥ ಕಲಮನಿ ನಿರೂಪಿಸಿದರು.